
ದಾವಣಗೆರೆ: ನನ್ನ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಹರಿಹರದ ಬಿಜೆಪಿ ಶಾಸಕ ಬಿ.ಪಿ. ಹರೀಶ್ ವಿರುದ್ಧ ಇಲ್ಲಿನ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ನೀಡಿದ್ದಾರೆ.
ಶಾಸಕ ಬಿ.ಪಿ.ಹರೀಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ ಎಸ್ಪಿಯವರನ್ನು ನಾಯಿಗೆ ಹೋಲಿಸಿ ಅವಹೇಳನಕಾರಿಯಾಗಿ ಮಾತನಾಡಿದ್ದರು. ಈ ಸಂಬಂಧ ಶಾಸಕರ ವಿರುದ್ದ ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್, ಶಾಸಕರಿಗೆ ಬೆಲೆಯೇ ಕೊಡುವುದಿಲ್ಲ. ಶಾಸಕರು ಸಭೆಯಲ್ಲಿ ಇದ್ದರೆ ಮುಖ ತಿರುಗಿಸಿ ಕೂರುತ್ತಾರೆ. ಗಂಟೆಗಟ್ಟಲೆ ಶಾಮನೂರು ಮನೆಯ ಬಾಗಿಲನ್ನು ನಾಯಿಯ ರೀತಿ ಕಾಯುತ್ತಾರೆ. ಎಸ್ಪಿ ಶಾಮನೂರು ಕುಟುಂಬದ ಪೊಮೆರಿಯನ್ ನಾಯಿಯಂತೆ ವರ್ತಿಸುತ್ತಾರೆ. ಇವರಿಗೆ ಅಧಿಕಾರದಲ್ಲಿರುವವರು ಮಾತ್ರ ಮುಖ್ಯವಾಗಿ ಕಾಣುತ್ತಾರೆ ಎನ್ನಿಸುತ್ತದೆ. ಎಲ್ಲಾ ಜನಪ್ರತಿನಿಧಿಗಳನ್ನು ಸಮಾನವಾಗಿ ಕಾಣುವ ದೃಷ್ಟಿಕೋನ ಇಲ್ಲ. ಈ ಅಧಿಕಾರ ತಾತ್ಕಾಲಿಕ ಅನ್ನುವುದನ್ನು ಎಸ್ಪಿ ಅರಿತುಕೊಳ್ಳಬೇಕು ಎಂದು ಹರಿಹರ ಬಿಜೆಪಿ ಶಾಸಕ ಬಿಪಿ ಹರೀಶ್ ಟೀಕಿಸಿದ್ದರು.
ದೂರು ಆಧರಿಸಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 79 (ಮಹಿಳೆಯ ಮಾನಕ್ಕೆ ಕುಂದುಂಟು ಮಾಡುವುದು) ಹಾಗೂ 132 (ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ) ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.
Advertisement