
ಬೆಂಗಳೂರು: ಈ ಹಿಂದೆ ರೈತರ ಸರಣಿ ಆತ್ಮಹತ್ಯೆ ವಿಷಯ ಬಂದಾಗ ಎಲ್ಲಿದೆ ಆತ್ಮಹತ್ಯೆ? ಸ್ವಂತಕ್ಕೆ ಆತ್ಮಹತ್ಯೆ ಮಾಡಿಕೊಂಡವರನ್ನೆಲ್ಲಾ ರೈತರು ಅನ್ನೋಕಾಗತ್ತಾ? ಅದೆಲ್ಲಾ ಸುಳ್ಳು ಎಂದು ರೈತರ ಬಗ್ಗೆ ತುಚ್ಛವಾಗಿ ಮಾತನಾಡಿದ್ದಿರಿ. ಈಗ 'ರೈತರಿಗೆ ಧಿಕ್ಕಾರ ಕೂಗೋದು ಬಿಟ್ಟು ಬೇರೇನೂ ಮಾಡೋಕ್ಕಾಗಲ್ಲ' ಎಂದು ರೈತರ ಅಸಹಾಯಕರು ಅನ್ನುವ ರೀತಿ ಹೀಯಾಳಿಸಿ ಮಾತನಾಡಿದ್ದೀರಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ (R Ashok) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಡೀ ದೇಶಕ್ಕೆ ಅನ್ನ ನೀಡುವ ರೈತ ಜೀವನವಿಡೀ ತಾನು ಬದುಕುವುದು, ದುಡಿಯುವುದು ಎಲ್ಲವೂ ಇನ್ನೊಬ್ಬರಿಗಾಗಿಯೇ ಹೊರತು ತನ್ನ ಸ್ವಂತಕ್ಕಾಗಿ ಅಲ್ಲ ಎಂದು ಶಿವಕುಮಾರ್ ತಿಳಿದುಕೊಳ್ಳಬೇಕು. ಕೈಗಾರಿಕೆಗಳಿಗೆ, ರೈಲು, ರಸ್ತೆ, ವಿಮಾನ ನಿಲ್ದಾಣಕ್ಕೆ ಈ ಹಿಂದೆಯೂ ರೈತರ ಬಳಿ ಜಮೀನು ಪಡೆಯಲಾಗಿದೆ. HMT ಕಾರ್ಖಾನೆ ಬಂದಾಗ ಸ್ವತಃ ನಮ್ಮ ಕುಟುಂಬ ಕೂಡ ಜಮೀನು ನೀಡಿತ್ತು. ಆದರೆ ತಮ್ಮ ಜೀವನದ ಆಧಾರ ಸ್ತಂಭವಾಗಿರುವ ಜಮೀನನ್ನು ಕಳೆದುಕೊಳ್ಳುತ್ತಿರುವ ರೈತರ ಬಳಿ ಹೇಗೆ ಮಾತನಾಡಬೇಕು. ಯಾವ ರೀತಿ ಸಂವೇದನೆಯಿಂದ ನಡೆದುಕೊಳ್ಳಬೇಕು ಎನ್ನುವ ಕನಿಷ್ಠ ಸೌಜನ್ಯವೂ ಇಲ್ಲದ ತಮ್ಮಂತಹವರು ಮುಂದೊಂದು ದಿನ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿರುವುದು ಈ ನಮ್ಮ ನಾಡಿನ ದುರಂತ.
ರೈತರ ಕಷ್ಟ, ಕೃಷಿಯಲ್ಲಿರುವ ಸಮಸ್ಯೆಗಳ ಬಗ್ಗೆ ಗೊತ್ತಿರುವ ನಿಜವಾದ ಒಕ್ಕಲಿಗ ಅನ್ನದಾತರ ಬಗ್ಗೆ ಈ ರೀತಿಯ ದರ್ಪದ ಮಾತುಗಳನ್ನು ಎಂದಿಗೂ ಆಡುವುದಿಲ್ಲ. ಒಕ್ಕಲಿಕೆಯನ್ನು, ಮಣ್ಣಿನ ಮಕ್ಕಳನ್ನು ಅಪಮಾನ ಮಾಡುತ್ತಿರುವ ತಮ್ಮ ಈ ದುರ್ನಡತೆಯ ಪರಿಣಾಮ ಮುಂದೆ ಗೊತ್ತಾಗಲಿದೆ ಎಂದು ಅಶೋಕ್ ಹೇಳಿದ್ದಾರೆ.
ರಾಜ್ಯದಲ್ಲಿ ಭೂಸ್ವಾಧೀನ ವಿಷಯವು ಮತ್ತೆ ತೀವ್ರ ಚರ್ಚೆಗೆ ಗುರಿಯಾಗಿದ್ದು ಉದ್ಯಮಕ್ಕಾಗಿ 9600 ಎಕರೆ ಭೂಮಿಯ ಸ್ವಾಧೀನ ಪ್ರಕ್ರಿಯೆಯಲ್ಲಿ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಈ ವಿಚಾರವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರೈತರ ವಿರುದ್ಧ ಕೋಪಗೊಂಡಿದ್ದು ಈ ವೇಳೆ ದರ್ಪದ ಮಾತುಗಳನ್ನಾಡಿದ್ದರು.
Advertisement