
ಬೆಂಗಳೂರು: ಮದ್ದೂರಿನ ಕೋಮು ಹಿಂಸಾಚಾರದ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಕ್ಷಮೆಯಾಚಿಸಬೇಕೆಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಒತ್ತಾಯಿಸಿದ್ದಾರೆ.
ಕಳೆದ ರಾತ್ರಿ ಮದ್ದೂರಿನಲ್ಲಿ ಗಣೇಶ ಮೆರವಣಿಗೆಯ ಸಂದರ್ಭದಲ್ಲಿ ಮದ್ದೂರು ಪಟ್ಟಣದಲ್ಲಿ ನಡೆದ ಕೋಮು ಹಿಂಸಾಚಾರದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನರಿಗೆ ಕ್ಷಮೆಯಾಚಿಸಬೇಕೆಂದು ಎಂದರು.
ಕಾಂಗ್ರೆಸ್ ಸರ್ಕಾರದ ತುಷ್ಠೀಕರಣ ರಾಜಕೀಯದಿಂದ ದುಷ್ಕರ್ಮಿಗಳಿಗೆ ಗಲಾಟೆ ಮಾಡಲು ಧೈರ್ಯ ಬರುತ್ತಿದೆ. ಹಿಂದೂಗಳನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ಪರಿಗಣಿಸುವ ಒಂದು ವಿಶಿಷ್ಟ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧರ್ಮಸ್ಥಳ ದೇವಾಲಯ, ನಂತರ ಮೈಸೂರು ಚಾಮುಂಡೇಶ್ವರಿ ದೇವಿ ಈಗ ಮದ್ದೂರು ಘಟನೆ ಮೂಲಕ ದೇವರಿಗೆ ಅವಮಾನ ಮಾಡಿದ್ದಾರೆ, ಇದಕ್ಕೆ ಕ್ಷಮೆಯಾಚಿಸಬೇಕು ಎಂದರು.
ಮದ್ದೂರಿನಲ್ಲಿ ಗಣೇಶ ಮೆರವಣಿಗೆಯಲ್ಲಿ ಕಲ್ಲು ತೂರಿಸಿದ ಘಟನೆ ದೊಡ್ಡ ಪಿತೂರಿ. ಕಾಂಗ್ರೆಸ್ ತನ್ನ ನೀತಿಗಳು ಮತ್ತು ಹೇಳಿಕೆಗಳ ಮೂಲಕ ಇಂತಹ ಕೃತ್ಯಗಳನ್ನು ಪರೋಕ್ಷವಾಗಿ ಬೆಂಬಲಿಸುತ್ತಿದೆ ಎಂದು ಅವರು ಆರೋಪಿಸಿದರು.
ಇದು ಒಂದು ಘೋರ ಕೃತ್ಯ. ಜನರು ಇದು ಕರ್ನಾಟಕವೇ ಅಥವಾ ಪಾಕಿಸ್ತಾನವೇ ಎಂಬ ಗೊಂದಲದ ಸ್ಥಿತಿಯಲ್ಲಿದ್ದಾರೆ. ಇದು ಕಳೆದ ಎರಡು ವರ್ಷಗಳಿಂದ ನಡೆಯುತ್ತಿದೆ. ಧರ್ಮಸ್ಥಳ ಮತ್ತು ಚಾಮುಂಡೇಶ್ವರಿ ದೇವಸ್ಥಾನದ ನಂತರ ಈಗ ಮದ್ದೂರು ಪಟ್ಟಣ ಸರದಿ ಎಂದು ಅಶೋಕ್ ಆರೋಪಿಸಿದರು.
ಗಣೇಶ ಮೆರವಣಿಗೆ ಸಾಗುವ ರಸ್ತೆ ಸಾರ್ವಜನಿಕರದ್ದು, ಇದು ಕರ್ನಾಟಕದ ಜನರಿಗೆ ಸೇರಿದ ರಸ್ತೆ, ಇದು ತೆರಿಗೆದಾರರ ರಸ್ತೆ, ಘರ್ಷಣೆಯನ್ನು ತಡೆಗಟ್ಟಲು ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿತ್ತು. ಇಲ್ಲಿ ಪೊಲೀಸರನ್ನು ದೂಷಿಸುವ ಅಗತ್ಯವಿಲ್ಲ ಎಂದರು.
ಈ ಹಿಂದೆ ಪಾಕಿಸ್ತಾನ ಜಿಂದಾಬಾದ್ ಘೋಷಣೆಗಳನ್ನು ಕೂಗಿದವರ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿಲ್ಲ. ಈ ಘಟನೆ ಹಿಂದೆ ಹಿಂದೂಗಳನ್ನು ಗುರಿಯಾಗಿಸಲು ಮಂಡ್ಯ ಮತ್ತು ಮೈಸೂರುನಲ್ಲಿ ಕುತಂತ್ರ ನಡೆಸಿರಬಹುದು. ಹಿಂದೂಗಳನ್ನು ವ್ಯವಸ್ಥಿತವಾಗಿ ಗುರಿಯಾಗಿಸಲಾಗುತ್ತಿದೆ ಎಂದರು.
Advertisement