
ಬೆಂಗಳೂರು: ಅಕ್ರಮವಾಗಿ ಬೆಟ್ಟಿಂಗ್ ಕಂಪನಿ ನಡೆಸುತ್ತಿದ್ದ ಆರೋಪಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಕಾಂಗ್ರೆಸ್ (Congress) ಶಾಸಕ ಕೆಸಿ ವೀರೇಂದ್ರ ಪಪ್ಪಿಗೆ (Veerendra Pappi) ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. ಇಡಿ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಅವರನ್ನು ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ವೇಳೆ ವಿಚಾರಣೆ ನಡೆಸಿದ ನ್ಯಾಯಾಲಯ ವಿರೇಂದ್ರ ಪಪ್ಪಿ ಅವರನ್ನು ಸೆ. 22ರವರೆಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಿ ಆದೇಶ ಹೊರಡಿಸಿದೆ.
ಅಕ್ರಮ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ರಾಜ್ಯಗಳಲ್ಲಿ ಇಡಿ ದಾಳಿ ನಡೆಸಿತ್ತು. ಇನ್ನು ದಾಳಿ ವೇಳೆ ವೀರೇಂದ್ರ ಪಪ್ಪಿ ಮನೆಯಲ್ಲಿ 12 ಕೋಟಿ ರೂ. ನಗದು (ಒಂದು ಕೋಟಿ ರೂ. ವಿದೇಶಿ ಕರೆನ್ಸಿ ಸೇರಿದಂತೆ), 6 ಕೋಟಿ ರೂ. ಮೌಲ್ಯದ ಚಿನ್ನಾಭರಣ, ಸುಮಾರು 10 ಕೆಜಿ ಬೆಳ್ಳಿ ಮತ್ತು ನಾಲ್ಕು ವಾಹನಗಳನ್ನು ವಶಪಡಿಸಿಕೊಂಡಿತ್ತು.
ಚಿತ್ರದುರ್ಗದ 50 ವರ್ಷದ ಶಾಸಕನನ್ನು ಆಗಸ್ಟ್ 22 ರಂದು ಸಿಕ್ಕಿಂನ ರಾಜಧಾನಿ ಗ್ಯಾಂಗ್ಟಾಕ್‌ನಲ್ಲಿ ಬಂಧಿಸಿದ್ದು ಇಡಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ಬೆಂಗಳೂರಿನ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಟ್ರಾನ್ಸಿಟ್ ರಿಮಾಂಡ್ ಪಡೆದು ರಾಜ್ಯಕ್ಕೆ ಕರೆತಂದಿದ್ದರು. ಬಂಧನದ ವೇಳೆ ಶಾಸಕರು ತಮ್ಮ ಸಹಚರರೊಂದಿಗೆ ಕ್ಯಾಸಿನೊವನ್ನು ಗುತ್ತಿಗೆ ಪಡೆಯುವ ಸಲುವಾಗಿ ಮಾತುಕತೆ ನಡೆಸಲು ಗ್ಯಾಂಗ್ಟಾಕ್‌ಗೆ ಭೇಟಿ ನೀಡಿದ್ದರು ಎಂದು ತನಿಖಾ ಸಂಸ್ಥೆ ತಿಳಿಸಿದೆ.
'ವೀರೇಂದ್ರ ಅವರ ಸಹೋದರ ಕೆಸಿ ನಾಗರಾಜ್ ಮತ್ತು ಅವರ ಮಗ ಪೃಥ್ವಿ ಎನ್ ರಾಜ್ ಅವರ ನಿವಾಸದಿಂದ ಆಸ್ತಿಗೆ ಸಂಬಂಧಿಸಿದ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೊಬ್ಬ ಸಹೋದರ ಕೆಸಿ ತಿಪ್ಪೇಸ್ವಾಮಿ ಮತ್ತು ಅವರ ಇತರ ಸಹಚರರು ದುಬೈನಿಂದ ಆನ್‌ಲೈನ್ ಗೇಮಿಂಗ್ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಿದ್ದಾರೆ' ಎಂದು ಇ.ಡಿ ತಿಳಿಸಿದೆ.
Advertisement