
ಭಾಲ್ಕಿ: ಒಂದೇ ಕುಟುಂಬದ ನಾಲ್ವರು ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನಲ್ಲಿ ಮಂಗಳವಾರ ನಡೆದಿದೆ. ಕಾರಂಜಾ ಜಲಾಶಯದ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಬೀದರ್ ನ ಮೈಲೂರಿನವರಾದ ಶಿವಮೂರ್ತಿ ಮಾರುತಿ ಬ್ಯಾನರ್ಜಿ (45) ಅವರ ಮೂವರು ಮಕ್ಕಳಾದ ಶ್ರೀಶಾಂತ (9) ರಿತಿಕ್ (7) ಹಾಗೂ ಏಳು ತಿಂಗಳ ರಾಕೇಶ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಶಿವಮೂರ್ತಿ ಅವರ ಪತ್ನಿ ರಮಾಬಾಯಿ, ಮಗ ಶ್ರೀಕಾಂತ ಬದುಕುಳಿದಿದ್ದಾರೆ.
ಸಾಲಬಾಧೆ ಆತ್ಮಹತ್ಯೆಗೆ ಕಾರಣ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಭೇಟಿ ಪರಿಶೀಲನೆ ನಡೆಸಿದರು.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಭಾಲ್ಕಿ ತಾಲೂಕ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಧನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Advertisement