
ಮಂಡ್ಯ: ಕಳೆದ ಸೆಪ್ಟೆಂಬರ್ 7 ರಂದು ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಕಲ್ಲು ತೂರಾಟದ ವೇಳೆ ಬೀದಿ ದೀಪಗಳನ್ನು ಆಫ್ ಮಾಡಲಾಗಿದ್ದು, ಇದು ಪೂರ್ವ ಯೋಜಿತವೇ ಎಂಬ ಅನುಮಾನ ಮೂಡಿಸುತ್ತಿದೆ ಮತ್ತು ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ ಎಂದು ಐಜಿಪಿ(ದಕ್ಷಿಣ ವಲಯ) ಎಂ ಬಿ ಬೋರಲಿಂಗಯ್ಯ ಅವರು ಮಂಗಳವಾರ ತಿಳಿಸಿದ್ದಾರೆ.
ಕಲ್ಲು ತೂರಾಟ ಘಟನೆಯ ನಂತರ ಉದ್ವಿಗ್ನತೆ ಉಂಟಾಗಿದ್ದ ಮದ್ದೂರಿನಲ್ಲಿ ಪರಿಸ್ಥಿತಿ ಪ್ರಸ್ತುತ ಶಾಂತಿಯುತವಾಗಿದೆ ಮತ್ತು ಪೊಲೀಸರು ಪರಿಸ್ಥಿತಿಯನ್ನು ಸಂಪೂರ್ಣ ನಿಯಂತ್ರಿಸಿದ್ದಾರೆ ಎಂದು ಅವರು ಹೇಳಿದರು.
ಘಟನೆಗೆ ಸಂಬಂಧಿಸಿದಂತೆ 22 ಜನರನ್ನು ಬಂಧಿಸಿದ್ದು, ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಅವರು ತಿಳಿಸಿದ್ದಾರೆ.
"ನಾವು ಸಿಸಿಟಿವಿಯನ್ನು ಪರಿಶೀಲಿಸಿದ್ದೇವೆ. ಘಟನೆ ನಡೆದಾಗ ಬೀದಿ ದೀಪಗಳನ್ನು ಆಫ್ ಮಾಡಲಾಗಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಮೆರವಣಿಗೆ ಮೇಲೆ ಕಲ್ಲು ಎಸೆಯಲಾಗಿದೆ ಮತ್ತು ಅದು ಸಿಸಿಟಿವಿಯಲ್ಲಿ ಕಂಡುಬರುತ್ತಿದೆ. ಆದರೆ, ಇದರ ಹಿಂದೆ ಪಿತೂರಿ ಇದೆಯೇ? ಅದು ಹೇಗೆ ಸಂಭವಿಸಿತು ಮತ್ತು ಇದಕ್ಕೆ ಮೂಲ ಕಾರಣವೇನು? ಇದೆಲ್ಲವನ್ನೂ ತನಿಖೆ ಮಾಡಲಾಗುತ್ತಿದೆ" ಎಂದು ಬೋರಲಿಂಗಯ್ಯ ಅವರು ಸುದ್ದಿಗಾರರಿಗೆ ತಿಳಿಸಿದರು.
ಘಟನೆ ಪೂರ್ವಯೋಜಿತವೇ ಎಂದು ಕೇಳಿದಾಗ, "ಈ ಹಂತದಲ್ಲಿ, ಅದು ಪೂರ್ವಯೋಜಿತ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಖಂಡಿತವಾಗಿಯೂ ಬೀದಿ ದೀಪಗಳನ್ನು ಆಫ್ ಮಾಡಿರುವುದರಿಂದ ಆ ಬಗ್ಗೆ ನಮಗೆ ಅನುಮಾನ ಬರುತ್ತಿದೆ. ಅದನ್ನು ಪರಿಶೀಲಿಸಲಾಗುವುದು ಮತ್ತು ಅದರ ಹಿಂದೆ ಇರುವವರನ್ನು ಕಂಡುಹಿಡಿಯಲಾಗುವುದು" ಎಂದು ಅವರು ಹೇಳಿದರು.
"ಸಿಸಿಟಿವಿ ಚಿತ್ರಗಳು, ವಿಡಿಯೋಗಳು ಇದ್ದವು. ಅವುಗಳನ್ನು ವಿಶ್ಲೇಷಿಸಿದ ನಂತರ. ಕಲ್ಲು ತೂರಾಟದಲ್ಲಿ ಭಾಗಿಯಾದವರನ್ನು ಪುರಾವೆಗಳೊಂದಿಗೆ ಬಂಧಿಸಲಾಗಿದೆ" ಎಂದರು.
ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ಮೆರವಣಿಗೆ ನಡೆಯುತ್ತಿದ್ದಾಗ ಕಲ್ಲು ತೂರಾಟ ನಡೆದಿದ್ದು, ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಮತ್ತೊಂದು ಗುಂಪು ಮುಂದಾಗಿತ್ತು. ಆದರೆ ಪರಿಸ್ಥಿತಿ ಕೈಮೀರಿ ಹೋಗದಂತೆ ತಡೆಯಲು ಅಲ್ಲಿ ನಿಯೋಜಿಸಲಾಗಿದ್ದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಐದು ನಿಮಿಷಗಳಲ್ಲಿ ಗುಂಪನ್ನು ಚದುರಿಸಿದರು.
ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿ ಕೈಮೀರಿ ಹೋಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಭಾನುವಾರದ ಘಟನೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರು ಕೆಲವು ಸೂಕ್ಷ್ಮ ಪ್ರದೇಶಗಳಿಗೆ ನುಗ್ಗಲು ಯೋಜಿಸಿದ್ದರಿಂದ ಅವರನ್ನು ನಿಯಂತ್ರಿಸಲು ಸೋಮವಾರ ಪೊಲೀಸರು ಕನಿಷ್ಠ ಬಲಪ್ರಯೋಗ ಮಾಡಿದ್ದಾರೆ ಎಂದು ಅವರು ಹೇಳಿದರು.
ಮದ್ದೂರು ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಅಗತ್ಯ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಬೋರಲಿಂಗಯ್ಯ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎನ್. ಚೆಲುವರಾಯಸ್ವಾಮಿ ನೇತೃತ್ವದಲ್ಲಿ ಶಾಂತಿ ಸಭೆ ನಡೆಯುತ್ತಿದ್ದು, ಬುಧವಾರ ನಡೆಯಲಿರುವ ಸಾಮೂಹಿಕ ಗಣೇಶ ವಿಸರ್ಜನೆ ಬಗ್ಗೆಯೂ ಚರ್ಚೆ ನಡೆಯಲಿದೆ.
Advertisement