ಕೋಮು ಸೂಕ್ಷ್ಮ ಪ್ರದೇಶವಾದ ಭದ್ರಾವತಿ ಪಟ್ಟಣದಲ್ಲಿ ಈದ್-ಎ-ಮಿಲಾದ್ ಆಚರಣೆಯ ಸಂದರ್ಭದಲ್ಲಿ ಪಾಕಿಸ್ತಾನ ಪರ ಘೋಷಣೆಗಳು ಕೇಳಿಬಂದಿದೆ. ಸೋಮವಾರ ರಾತ್ರಿ ಭದ್ರಾವತಿ ಹಳೆಯ ಪಟ್ಟಣದಲ್ಲಿ ಮುಸ್ಲಿಂ ಸಂಘಟನೆಯೊಂದು ಆಚರಣೆಯನ್ನು ಆಯೋಜಿಸಿತ್ತು. ವೈರಲ್ ಆಗಿರುವ ವೀಡಿಯೊದಲ್ಲಿ ಯುವಕರ ಗುಂಪು "ಪಾಕಿಸ್ತಾನ ಜಿಂದಾಬಾದ್" ಎಂದು ಕೂಗುತ್ತಿರುವುದನ್ನು ತೋರಿಸಲಾಗಿದೆ. ವಿಡಿಯೊ ಸಂಬಂಧ ಭದ್ರಾವತಿಯ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ವಿಡಿಯೊದ ಸತ್ಯಾಸತ್ಯತೆ ಪರಿಶೀಲಿಸಲಾಗುತ್ತಿದೆ ಎಂದು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ. ತನಿಖೆ ಸಂಬಂಧ 3 ಪೊಲೀಸ್ ತಂಡಗಳನ್ನು ರಚಿಸಲಾಗಿದೆ.
ಮದ್ದೂರಿನಲ್ಲಿ ಗಣೇಶ ವಿಸರ್ಜನೆಯ ಮೆರವಣಿಗೆಯ ಮೇಲೆ ಅನ್ಯ ಕೋಮಿನವರು ಕಲ್ಲು ತೂರಿದ್ದನ್ನು ಪ್ರತಿಭಟಿಸಿ ಇಂದು ಕರೆ ನೀಡಲಾಗಿದ್ದ ಮದ್ದೂರು ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿ, ಮದ್ದೂರು ಬಂದ್ ಶಾಂತಿಯುತವಾಗಿ ಯಶಸ್ವಿಯಾಗಿದೆ. ಘಟನೆ ಬಗ್ಗೆ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ದಕ್ಷಿಣ ವಲಯದ ಐಜಿಪಿ ಎಂ ಬಿ ಬೋರಲಿಂಗಯ್ಯ, ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಕಲ್ಲು ತೂರಾಟದ ವೇಳೆ ಬೀದಿ ದೀಪಗಳನ್ನು ಆಫ್ ಮಾಡಲಾಗಿದ್ದು, ಇದು ಪೂರ್ವ ಯೋಜಿತವೇ ಎಂಬ ಅನುಮಾನ ಮೂಡಿಸುತ್ತಿದೆ ಮತ್ತು ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ. ಘಟನೆಗೆ ಸಂಬಂಧಿಸಿದಂತೆ 22 ಜನರನ್ನು ಬಂಧಿಸಿದ್ದು, ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ತಿಳಿಸಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೆ ಜೈಲು ಪಾಲಾಗಿರುವ ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲು ಕೋರ್ಟ್ ಮಂಗಳವಾರ ನಿರಾಕರಿಸಿದೆ. ವಿಚಾರಣೆಯ ವೇಳೆಯಲ್ಲಿ ದರ್ಶನ್, ತನಗೆ ವಿಷ ನೀಡುವಂತೆ ಕೋರ್ಟ್ ಆದೇಶಿಸಬೇಕೆಂದು ಜಡ್ಜ್ ಗೆ ವಿಲಕ್ಷಣ ಬೇಡಿಕೆ ಇಟ್ಟಿದ್ದು, ಈಗ ವ್ಯಾಪಕ ಸುದ್ದಿಯಾಗಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಯಾವುದೇ ಸವಲತ್ತು ಸಿಗದೇ ಇರುವುದಕ್ಕೆ ಹತಾಶರಾಗಿರುವ ದರ್ಶನ್ ‘ನನಗೆ ವಿಷ ನೀಡಲು ಆದೇಶಿಸಿ’ ಎಂದು ಜಡ್ಜ್ ಎದುರೇ ಕೇಳಿದ್ದಾರೆ. ಹಾಗೆಲ್ಲಾ ನೀವು ಕೇಳುವಂತಿಲ್ಲ. ಜೈಲು ಅಧಿಕಾರಿಗಳಿಗೆ ಯಾವ ಆದೇಶ ನೀಡಬೇಕೋ ನೀಡುತ್ತೇವೆ ಎಂದ ಕೋರ್ಟ್, ಜೈಲಿನ ಮ್ಯಾನುಯಲ್ ಅನುಸಾರ ಆರೋಪಿ ದರ್ಶನ್ಗೆ ಜೈಲಿನ ಆವರಣದಲ್ಲಿ ಓಡಾಡಲು ಅನುಮತಿ ನೀಡಿದೆ. ಹೆಚ್ಚುವರಿ ದಿಂಬು ಹಾಗೂ ಬೇಡ್ಶೀಟ್ಗಾಗಿ ದರ್ಶನ್ ಮಾಡಿದ್ದ ಮನವಿಯನ್ನು ಕೋರ್ಟ್ ಪುರಸ್ಕರಿಸಿದೆ.
ಮಂಗಳೂರಿನ ಕೂಳೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿನ ಗುಂಡಿಯಿಂದಾಗಿ ನಿಯಂತ್ರಣ ಕಳೆದುಕೊಂಡು ದ್ವಿಚಕ್ರ ವಾಹನವೊಂದು ಉರುಳಿಬಿದ್ದಿದ್ದು, ಚಲಿಸುತ್ತಿದ್ದ ಲಾರಿಯ ಕೆಳಗೆ ಬಿದ್ದು 40 ವರ್ಷದ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ. ಮಾಧವಿ ಮೃತಪಟ್ಟ ಮಹಿಳೆಯಾಗಿದ್ದು, ಮೀನು ಸಾಗಣೆ ಮಾಡುವ ಲಾರಿ ಮಾಧವಿ ಮೇಲೆ ಹರಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೆದ್ದಾರಿಯ ಕಳಪೆ ನಿರ್ವಹಣೆಗಾಗಿ ವಾಹನ ಚಾಲಕರಿಂದ ಪದೇ ಪದೆ ದೂರುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿಯೇ ಈ ಪ್ರದೇಶದಲ್ಲಿ ಅಪಘಾತ ಸಂಭವಿಸಿದೆ.
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಮುಂದೆ ಕೇರಳದ ಮೂವರು ಯೂಟ್ಯೂಬರ್‌ಗಳು ಸೇರಿದಂತೆ ಆರು ಜನರು ವಿಚಾರಣೆಗೆ ಹಾಜರಾದರು. ಯೂಟ್ಯೂಬರ್‌ಗಳು ಸೃಷ್ಟಿಸಿದ ಕಂಟೆಂಟ್ ಮತ್ತು ಅವರ ಹೇಳಿಕೆಗಳ ಮೂಲಗಳನ್ನು ಪರಿಶೀಲಿಸಲು ಅವರನ್ನು ಪ್ರಶ್ನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ, 2012 ರಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆಯ ಹಿಂದೆ ಸೌಜನ್ಯಳ ಸೋದರ ಮಾವ ವಿಠಲ್ ಗೌಡ ಪ್ರಮುಖ ಆರೋಪಿ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ. ಹೀಗಾಗಿ ಆತನ ವಿರುದ್ಧ ಮರು ತನಿಖೆ ನಡೆಸುವಂತೆ ಆಗ್ರಹಿಸಿರುವ ಅವರು, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಅವರಿಗೆ ದೂರು ನೀಡಿದ್ದಾರೆ.
ಲೇಖಕಿ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟಿಸಲು ಆಹ್ವಾನಿಸಿರುವುದನ್ನು ವಿರೋಧಿಸಿ ಹಿಂದೂ ಜಾಗರಣ ವೇದಿಕೆ ಕರೆ ನೀಡಿದ್ದ ಚಾಮುಂಡಿ ಬೆಟ್ಟ ಚಲೋ ಮೆರವಣಿಗೆ ವೇಳೆ ಪೊಲೀಸರು ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ನಾಯಕರನ್ನು ವಶಕ್ಕೆ ಪಡೆದರು. ಪರಿಸ್ಥಿತಿಯ ಸೂಕ್ಷ್ಮತೆ ಮತ್ತು ಕಾನೂನು ಸುವ್ಯವಸ್ಥೆ ಸಮಸ್ಯೆಗಳನ್ನು ಉಲ್ಲೇಖಿಸಿ ಈಗಾಗಲೇ rally ನಡೆಸಲು ಅನುಮತಿ ನಿರಾಕರಿಸಲಾಗಿತ್ತು. ಅದೇ ರೀತಿ, 'ಚಾಮುಂಡಿ ಬೆಟ್ಟದ ಚಲೋ' ಪ್ರತಿಭಟನೆಗೆ ಪ್ರತಿಯಾಗಿ ಮೆರವಣಿಗೆ ನಡೆಸಲು ಯತ್ನಿಸಿದ ದಲಿತ ಮಹಾಸಭಾದ ಸದಸ್ಯರನ್ನು ಸಹ ತಡೆದು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆಯಲಾಗಿದೆ.
Advertisement