
ಮಂಗಳೂರು: 2006ರಿಂದ 2010ರ ಅವಧಿಯಲ್ಲಿ ಧರ್ಮಸ್ಥಳದ ವಸತಿ ಗೃಹಗಳಲ್ಲಿ ಸಂಭವಿಸಿದ ನಾಲ್ವರ ಅಸಹಜ ಸಾವಿನ ಕುರಿತು ತನಿಖೆ ನಡೆಸುವಂತೆ ಸಾಮಾಜಿಕ ಕಾರ್ಯಕರ್ತ ಮಹೇಶ್ ಶೆಟ್ಟಿ ತಿಮರೋಡಿ ಅವರು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ದೂರು ಸಲ್ಲಿಸಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಗುರುವಾರ ರಾತ್ರಿ ಬೆಳ್ತಂಗಡಿಯ ಎಸ್‌ಐಟಿ ಕಚೇರಿಯಲ್ಲಿ ದೂರು ಸಲ್ಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಧರ್ಮಸ್ಥಳ ಗ್ರಾಮದ ಗಾಯತ್ರಿ, ಶರಾವತಿ ಮತ್ತು ವೈಶಾಲಿ ವಸತಿ ಗೃಹಗಳಲ್ಲಿ ನಡೆದ ಅಪರಿಚಿತರ ಸಾವಿನ ಕುರಿತು ಕಾನೂನು ಪ್ರಕ್ರಿಯೆಗೆ ಅನುಗುಣವಾಗಿ ತನಿಖೆ ನಡೆಸಿಲ್ಲ ಎಂದು ತಿಮರೋಡಿ ಆರೋಪಿಸಿದ್ದಾರೆ.
ಮರಣೋತ್ತರ ಪರೀಕ್ಷೆ ಅಥವಾ ಪ್ರಥಮ ಮಾಹಿತಿ ವರದಿ (FIR) ದಾಖಲಿಸದೆ ಮೃತರನ್ನು ಅಪರಿಚಿತ ವ್ಯಕ್ತಿಗಳು ಎಂದು ಘೋಷಿಸಲಾಗಿದೆ. ಅವರ ಶವಗಳನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಮೂಲಕ ಹೂಳಲಾಗಿದೆ ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ನಾಲ್ಕು ಪ್ರಕರಣಗಳಲ್ಲಿ ಅಸಹಜ ಮರಣ ವರದಿಗಳನ್ನು (UDR)ಮಾತ್ರ ದಾಖಲಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯ ಮೂಲಕ ಪಡೆದ ದಾಖಲೆಗಳನ್ನು ದೂರಿನಲ್ಲಿ ಸಲ್ಲಿಸಲಾಗಿದ್ದು, ಎಫ್‌ಐಆರ್ ದಾಖಲಿಸಲು ಮತ್ತು ವಿವರವಾದ ತನಿಖೆಯನ್ನು ಪ್ರಾರಂಭಿಸುವಂತೆ ಮನವಿ ಮಾಡಲಾಗಿದೆ. ಅಸಹಜ ಅಥವಾ ಅನುಮಾನಾಸ್ಪದ ಸಾವುಗಳ ಕುರಿತು ಕಾನೂನು ಪ್ರಕಾರ ತನಿಖೆ ನಡೆದಿಲ್ಲ ಎಂದು ಅವರು ಆರೋಪಿಸಿದ್ದಾರೆ.
ದೂರನ್ನು ಎಸ್‌ಐಟಿ ಪರಿಶೀಲಿಸುತ್ತಿದೆ. ಒಂದು ವೇಳೆ ತನಿಖೆಗೆ ಎಸ್ ಐಟಿ ಒಪ್ಪಿಕೊಂಡರೆ ಸಾಕ್ಷಿಗಳನ್ನು ಕರೆಸಬಹುದು ಮತ್ತು ಹಿಂದಿನ ದಾಖಲೆಗಳನ್ನು ಪರಿಶೀಲಿಸಬಹುದು ಎಂದು ಪೊಲೀಸರು ಹೇಳಿದ್ದಾರೆ.
Advertisement