
ಮೈಸೂರು: ದಸರಾ ಉದ್ಘಾಟನೆಯಿಂದ ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಹಿಂದೆ ಸರಿಯಲಿ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಯತ್ನಾಳ್, ಇಸ್ಲಾಂ ಪ್ರಕಾರ ಮೂರ್ತಿ ಪೂಜೆ ಮಾಡುವವರು ಕಾಫೀರರು. ಮೂರ್ತಿ ಪೂಜೆ ಮಾಡುವವರನ್ನು ಕೊಲ್ಲಿ ಎಂದು ಇಸ್ಲಾಮ್ ಹೇಳುತ್ತದೆ. ಈಗ ಬಾನು ಮುಷ್ತಾಕ್ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡಲು ಮುಂದಾಗಿದ್ದಾರೆ. ಮೌಲ್ವಿಗಳು ಈ ಬಗ್ಗೆ ಮಾತನಾಡಬೇಕು. ಮೂರ್ತಿ ಪೂಜೆಗೆ ಬರುತ್ತಿರುವ ಬಾನು ಮುಷ್ತಾಕ್ ವಿರುದ್ಧ ಏನು ಕ್ರಮ ಕೈಗೊಳ್ಳುತ್ತೀರಾ? ಮೌಲ್ವಿಗಳು ಈ ಬಗ್ಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಅಲ್ಲದೆ ಬಾನು ಮುಷ್ತಾಕ್ ನಾನೀಗ ಮುಸ್ಲಿಂ ಧರ್ಮದಲ್ಲಿಲ್ಲ (ಎಕ್ಸ್ ಮುಸ್ಲಿಂ) ಎಂದಾದರೂ ಘೋಷಿಸಿಕೊಳ್ಳಬೇಕು. ಇಸ್ಲಾಂ ಬಗ್ಗೆ ನನಗೆ ನಂಬಿಕೆ ಇಲ್ಲವೆಂದು ತಿಳಿಸಿ ಉದ್ಘಾಟಿಸಲಿ. ಇಲ್ಲವೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾತ್ರವೇ ಉದ್ಘಾಟಿಸಲಿ ಎಂದು ಒತ್ತಾಯಿಸಿದರು.
ಇದೇ ವೇಳೆ ಸಿದ್ದರಾಮಯ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಯತ್ನಾಳ್, ನೇಪಾಳದ ಪರಿಸ್ಥಿತಿ ಇಲ್ಲೂ ಬರಲಿದ್ದು, ಜನರಿಂದ ಕ್ರಾಂತಿ ಆಗಲಿದೆ. ಸಿದ್ದರಾಮಯ್ಯ ಇದೇ ಧೋರಣೆ ಮುಂದುವರೆಸಿದರೆ ಸರ್ಕಾರ ಪತನವಾಗಲಿದೆ ಎಂದು ಹೇಳಿದರು.
Advertisement