
ಉಡುಪಿ: ಉಡುಪಿ ಜಿಲ್ಲೆಯ ಬ್ರಹ್ಮಾವರದ ಕೊಕ್ಕರ್ಣೆಯಲ್ಲಿ 24 ವರ್ಷದ ಯುವತಿಯೊಬ್ಬರಿಗೆ ನೆರೆಮನೆಯ ಯುವಕ ಚಾಕುವಿನಿಂದ ಇರಿದ ಘಟನೆ ಶುಕ್ರವಾರ ನಡೆದಿದೆ. ಇರಿತಕ್ಕೊಳಗಾದ ಯುವತಿ ಸ್ಥಿತಿ ಗಂಭೀರವಾಗಿದೆ.
ಕೊಕ್ಕರ್ಣೆಯ ಚೆಗ್ರಿಬೆಟ್ಟು ನಿವಾಸಿ ಸುರೇಶ್ ಪೂಜಾರಿ ಅವರ ಪುತ್ರಿ ರಕ್ಷಿತಾ ಅವರು ಇಂದು ಬೆಳಗ್ಗೆ 8.30 ರ ಸುಮಾರಿಗೆ ಪುಟ್ಟನಕಟ್ಟೆ ಬಳಿ ಬಸ್ ನಿಲ್ದಾಣದ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕಾರ್ತಿಕ್(27) ಎಂಬ ಯುವಕ ಚಾಕುವಿನಿಂದ ಯುವತಿ ಮೇಲೆ ದಾಳಿ ನಡೆಸಿದ್ದಾರೆ.
ಯುವತಿ ಬ್ರಹ್ಮಾವರದ ಸರ್ವೇ ಇಲಾಖೆಯಲ್ಲಿ ಗುತ್ತಿಗೆ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾರೆ.
ಯುವತಿಯ ನೆರೆಮನೆಯವರಾದ ಆರೋಪಿ ಕಾರ್ತಿಕ್, ಮದುವೆಯಾಗಲು ನಿರಾಕರಿಸಿದ ನಂತರ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆಯ ಕುಟುಂಬವು ಪ್ರಸ್ತಾವಿತ ಮದುವೆಗೆ ಆಕ್ಷೇಪ ವ್ಯಕ್ತಪಡಿಸಿತ್ತು. ನಂತರ ಯುವತಿ ಎರಡು ವಾರಗಳ ಹಿಂದೆ ಯುವಕನ ಮೊಬೈಲ್ ನಂಬರ್ ಅನ್ನು ನಿರ್ಬಂಧಿಸಿದ್ದಳು. ಇದು ಹಲ್ಲೆಗೆ ಕಾರಣ ಎಂದು ನಂಬಲಾಗಿದೆ.
ರಕ್ಷಿತಾ ಅವರ ಕುತ್ತಿಗೆ ಮತ್ತು ಪಕ್ಕೆಲುಬುಗಳ ಬಳಿ, ಎದೆಯ ಎರಡೂ ಬದಿಗಳಲ್ಲಿ ತೀವ್ರವಾದ ಇರಿತದ ಗಾಯಗಳಾಗಿದ್ದು, ಸ್ಥಳೀಯರು ಅವರನ್ನು ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು(ಕೆಎಂಸಿ) ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಆಕೆಯ ಹುಟ್ಟುಹಬ್ಬದಂದು ಈ ಘಟನೆ ನಡೆದಿದ್ದು, ಆಕೆಯ ಕುಟುಂಬ ಸದಸ್ಯರು ತೀವ್ರ ಆಘಾತಕ್ಕೊಳಗಾಗಿದ್ದಾರೆ.
ಈ ಸಂಬಂಧ ಬ್ರಹ್ಮಾವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಹಲ್ಲೆ ನಡೆದ ಕೂಡಲೇ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಆತನನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಪ್ರಯತ್ನ ಮುಂದುವರೆದಿದೆ.
Advertisement