
ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿರುವ ನಟ ದರ್ಶನ್ ತೂಗುದೀಪ ಅವರು, ನ್ಯಾಯಾಲಯದ ಆದೇಶದ ಹೊರತಾಗಿಯೂ ತನಗೆ ಕನಿಷ್ಠ ಸೌಲಭ್ಯಗಳನ್ನು ನಿರಾಕರಿಸಲಾಗಿದೆ ಎಂದು ಆರೋಪಿಸಿ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದಾರೆ.
ಆರೋಪಿಗೆ ಹಾಸಿಗೆ ಮತ್ತು ದಿಂಬು ಸೇರಿದಂತೆ ಕನಿಷ್ಠ ಸೌಲಭ್ಯಗಳನ್ನು ಒದಗಿಸಬೇಕೆಂಬ ನ್ಯಾಯಾಲಯದ ಹಿಂದಿನ ಆದೇಶವನ್ನು ಜೈಲು ಅಧಿಕಾರಿಗಳು ಪಾಲಿಸುತ್ತಿಲ್ಲ ಎಂದು ದರ್ಶನ್ ಪರ ವಕೀಲರಾದ ಎಸ್ ಸುನೀಲ್ ಕುಮಾರ್ ಆರೋಪಿಸಿದ್ದಾರೆ.
ಅರ್ಜಿ ವಿಚಾರಣೆ ವೇಳೆ, ನ್ಯಾಯಾಲಯದ ನಿರ್ದಿಷ್ಟ ಆದೇಶದ ಹೊರತಾಗಿಯೂ, ಜೈಲು ಅಧಿಕಾರಿಗಳು ಹಾಸಿಗೆ, ಕಂಬಳಿ, ತಟ್ಟೆ ಮತ್ತು ಮಗ್‌ನಂತಹ ಮೂಲಭೂತ ಸೌಲಭ್ಯಗಳನ್ನು ಸಹ ಒದಗಿಸಿಲ್ಲ ಎಂದು ಕುಮಾರ್ ಹೇಳಿದರು.
ನ್ಯಾಯಾಲಯದ ಆದೇಶ ಉಲ್ಲಂಘನೆಯಾಗಿದೆ ಮತ್ತು ಅಧಿಕಾರಿಗಳು ಆದೇಶವನ್ನು "ಲಘುವಾಗಿ" ಪರಿಗಣಿಸಿದ್ದಾರೆ ಎಂದು ದರ್ಶನ್ ಪರ ವಕೀಲು ವಾದಿಸಿದರು.
ಹೊಸ ಆರೋಪಿ ಜೈಲಿಗೆ ಬಂದಾಗ 14 ದಿನ ಮಾತ್ರ ಕ್ವಾರೆಂಟೈನ್ ನಲ್ಲಿ ಇರಬೇಕು. ನಂತರ ಆರೋಗ್ಯ ಪರಿಶೀಲನೆ ಮಾಡಿ ಸಾಮಾನ್ಯ ಸೆಲ್ ಗಳಿಗೆ ಶಿಫ್ಟ್ ಮಾಡಬೇಕು. ಆದರೆ ಒಂದು ತಿಂಗಳು ಕ್ವಾರೇಂಟೈನ್ ಸೆಲ್ ನಲ್ಲಿ ದರ್ಶನ್ ಇದ್ದಾರೆ ಎಂದು ವಕೀಲ ಸುನೀಲ್ ಅವರು ಕೋರ್ಟ್ ಗೆ . ಕ್ವಾರೆಂಟೈನ್ಸ್ ಗೈಡ್ ಲೈನ್ಸ್ ಮಾಹಿತಿ ನೀಡಿದರು.
ಜನರನ್ನ ತಿಂಗಳುಗಟ್ಟಲೇ ಕ್ವಾರೇಂಟೈನ್ ನಲ್ಲಿ ಇಟ್ಟಿದ್ದಾರೆ . ಯಾವ ಎಂಎಲ್ಎ, ಸಂಸದರನ್ನ 14 ದಿನಕ್ಕಿಂತ ಹೆಚ್ಚು ಕ್ವಾರೇಂಟೈನ್ ನಲ್ಲಿ ಇಟ್ಟಿದ್ದಾರೆ…? ಎಂದು ವಕೀಲ ಸುನೀಲ್ ಪ್ರಶ್ನಿಸಿದ್ದರು.
ಆರೋಪಿಗಳ ಸುತ್ತ ಕ್ಯಾಮರಾ ಇಟ್ಟಿದ್ದು, ಹೆಚ್ಚಿನ ಭದ್ರತೆ ಹೆಸರಿನಲ್ಲಿ ಕಿರುಕುಳ ನೀಡಿದಂತೆ ಆಗುತ್ತಿದೆ ಎಂದು ವಕೀಲ ಸುನೀಲ್ ಹೇಳಿದು.
ನಟ ದರ್ಶನ್ ಪಕ್ಕದ ಸೆಲ್ ನಲ್ಲಿ ಪಾಕಿಸ್ತಾನದ ಉಗ್ರರು ಇದ್ದಾರೆ. ಅವರಿಗೆ ಎಲ್ಲಾ ಸೌಲಭ್ಯಗಳು ನೀಡುತ್ತಿದ್ದಾರೆ. ಕೇರಂ, ಟಿವಿ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ನೀಡುತ್ತಿದ್ದಾರೆ ಎಂದು ನಟ ದರ್ಶನ್ ಪರ ವಕೀಲ ಸುನೀಲ್ ವಾದಿಸಿದರು.
ಪ್ರಾಸಿಕ್ಯೂಷನ್ ಪರವಾಗಿ ಹಾಜರಾದ ಸರ್ಕಾರಿ ವಕೀಲ ಸಚಿನ್, ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದರು ಮತ್ತು ದರ್ಶನ್‌ಗೆ ಜೈಲು ಕೈಪಿಡಿಗೆ ಅನುಗುಣವಾಗಿ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಸಮರ್ಥಿಸಿಕೊಂಡರು.
ಕ್ವಾರಂಟೈನ್ ವ್ಯವಸ್ಥೆಯು ಜೈಲು ನಿಯಮಗಳಿಗೆ ಅನುಸಾರವಾಗಿದೆ ಎಂದು ಪ್ರತಿಪಾದಿಸಿದ ಅವರು, ದರ್ಶನ್‌ಗೆ ಬೆಳಿಗ್ಗೆ ಮತ್ತು ಸಂಜೆ ನಿಯಮಿತ ಹೊರಾಂಗಣ ವಾಕ್ ಗೆ ಅವಕಾಶ ನೀಡಲಾಗಿದೆ ಎಂದು ಹೇಳಿದರು.
ಎರಡೂ ಕಡೆಯ ವಾದ, ಪ್ರತಿವಾದ ಆಲಿಸಿದ ನ್ಯಾಯಾಲಯವು, ಪ್ರಕರಣ ವಿಚಾರಣೆಯನ್ನು ಸೆಪ್ಟೆಂಬರ್ 19 ಕ್ಕೆ ಮುಂದೂಡಿತು.
ಅಲ್ಲದೆ ಮುಂದಿನ ವಿಚಾರಣೆಯ ಸಮಯದಲ್ಲಿ ಪ್ರಕರಣದ ಎಲ್ಲಾ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸುವಂತೆ ನಿರ್ದೇಶಿಸಿದೆ.
Advertisement