
ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮತ್ತು ಮೇಲ್ವಿಚಾರಣೆ ಮಾಡಲು ಪ್ರತ್ಯೇಕ ಕಲ್ಯಾಣ ಕರ್ನಾಟಕ ಸಚಿವಾಲಯ ಸ್ಥಾಪನೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್ ಕೆ ಪಾಟೀಲ್ ಮಾತನಾಡಿ, ಈ ಕುರಿತಾಗಿ ವಿವರವನ್ನು ನೀಡಿದರು. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಪ್ರತ್ಯೇಕ ಸಚಿವಾಲಯ ಬೇಕು ಎಂಬ ಬೇಡಿಕೆ ಇತ್ತು. ಈ ನಿಟ್ಟಿನಲ್ಲಿ ರಾಜಕಾರಣಿಗಳು ಹಾಗೂ ಸ್ಥಳೀಯ ಹೋರಾಟಗಾರರು ಬೇಡಿಕೆ ಇಟ್ಟಿದ್ದರು. ಈ ನಿಟ್ಟಿನಲ್ಲಿ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಆರಂಭಿಸುವ ನಿಟ್ಟಿನಲ್ಲಿ ಸಂಪುಟ ತೀರ್ಮಾನ ಕೈಗೊಂಡಿದೆ. ಆದರೆ ಮುಖ್ಯ ಕಚೇರಿ ಎಲ್ಲಿ ಇರಬೇಕು ಎಂಬ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಮಾಹಿತಿ ನೀಡಿದರು.
ರಾಜ್ಯದ ಇತರ ಭಾಗಗಳಿಗೆ ಹೋಲಿಕೆ ಮಾಡಿದರೆ ಕಲ್ಯಾಣ ಕರ್ನಾಟಕ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಈ ಭಾಗದಲ್ಲಿ ಅಭಿವೃದ್ಧಿ ಯೋಜನೆಗಳಿಗಾಗಿ ಪ್ರತ್ಯೇಕ ಸಚಿವಾಲಯ ಬೇಕು ಎಂಬ ಅಗ್ರಹ ಹಲವು ವರ್ಷಗಳಿಂದ ಕೇಳಿ ಬಂದಿತ್ತು. ಕೊನೆಗೂ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿಟ್ಟಿನಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಇನ್ನೂ ಈ ಸಂಬಂಧ ತಮ್ಮ "ಎಕ್ಸ್" ಖಾತೆಯಲ್ಲಿ ಬರೆದುಕೊಂಡಿರುವ ಅವರು, ಹೊಸ ಸಚಿವಾಲಯದಿಂದ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮತ್ತಷ್ಟು ಗತಿ ಪಡೆಯಲಿದೆ ಎಂದು ತಿಳಿಸಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ 7 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿಗಳಿಗೆ ಹೆಚ್ಚುವರಿ ಹುದ್ದೆಗಳನ್ನು ಸೃಷ್ಟಿಸಿ ಬಲಪಡಿಸುವ ನಿರ್ಧಾರವನ್ನೂ ಸಚಿವ ಸಂಪುಟ ಕೈಗೊಂಡಿದೆ. ಹೊಸ ಸಚಿವಾಲಯ ಸೃಷ್ಟಿಗೆ ಕಾರಣರಾದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಹಾಗೂ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಪ್ರಿಯಾಂಕ್ ಖರ್ಗೆ ಕೃತಜ್ಞತೆ ಸಲ್ಲಿಸಿದ್ದಾರೆ.
1948 ರಲ್ಲಿ ನಿಜಾಮನ ಆಳ್ವಿಕೆಯಿಂದ ಈ ಪ್ರದೇಶವು ವಿಮೋಚನೆಗೊಂಡ ನೆನಪಿಗಾಗಿ ಪ್ರತಿ ವರ್ಷ ಸೆಪ್ಟೆಂಬರ್ 17 ರಂದು ಆಚರಿಸಲಾಗುವ ಕಲ್ಯಾಣ ಕರ್ನಾಟಕ ಉತ್ಸವದ ಮುನ್ನಾದಿನದಂದು ಈ ಘೋಷಣೆ ಹೊರಬಿದ್ದಿದೆ. ಈ ಸಂದರ್ಭದ ಸ್ಮರಣಾರ್ಥ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಕಲಬುರಗಿಯಲ್ಲಿ ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ.
ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳನ್ನು ಒಳಗೊಂಡಿರುವ ಕಲ್ಯಾಣ ಕರ್ನಾಟಕ ಪ್ರದೇಶವು ರಾಜ್ಯದ ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿ ಒಂದಾಗಿದೆ ಮತ್ತು ಸಂವಿಧಾನದ 371(ಜೆ) ವಿಧಿಯ ಅಡಿಯಲ್ಲಿ ವಿಶೇಷ ಸ್ಥಾನಮಾನವನ್ನು ಹೊಂದಿದೆ.
Advertisement