
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮತ್ತೆ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ನಟ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಸೆ.22ಕ್ಕೆ ಮುಂದೂಡಿದೆ.
ಕೊಲೆ ಕೇಸ್ ನಲ್ಲಿ ಎರಡನೇ ಬಾರಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಗೆ ಈ ಬಾರಿ ಜೈಲಿನಲ್ಲಿ ಯಾವುದೇ ಸೌಲಭ್ಯ, ರಾಜಾತಿಥ್ಯ ನೀಡಿಲ್ಲ. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಜೈಲಿನಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿಗೆ ತರಲಾಗಿದೆ. ಆರೋಪಿಗಳು, ಕೈದಿಗಳಿಗೆ ಯಾವುದೇ ರಾಜಾತಿಥ್ಯ, ಸೌಲಭ್ಯಗಳನ್ನು ನೀಡುವಂತಿಲ್ಲ.
ಆದರೆ ಕನಿಷ್ಠ ಮೂಲಭೂತ ಸೌಕರ್ಯ ನೀಡಬೇಕೆಂದು ನಿಯಮಗಳಿದ್ದು ಅದನ್ನು ಕೂಡ ಜೈಲಿನಲ್ಲಿ ನೀಡುತ್ತಿಲ್ಲ, ಜೈಲಿನಲ್ಲಿ ಹಾಸಿಗೆ, ದಿಂಬಿನಂತಹ ಕನಿಷ್ಠ ಸೌಲಭ್ಯವನ್ನೂ ನೀಡಬೇಕೆಂದು ಒತ್ತಾಯಿಸಿ ನಟ ದರ್ಶನ್ ಅರ್ಜಿ ಸಲ್ಲಿಸಿದ್ದರು.
ಬೆನ್ನು ನೋವಿನ ಸಮಸ್ಯೆಯಿರುವ ನಟ ದರ್ಶನ್ ಜೈಲಿನಲ್ಲಿ ಹಾಸಿಗೆ, ದಿಂಬು ಸೇರಿದಂತೆ ಕೆಲ ಸೌಲಭ್ಯ ನೀಡುವಂತೆ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಕೋರ್ಟ್ ಹಾಸಿಗೆ, ತಲೆದಿಂಬು ಒದಗಿಸುವಂತೆ ಜೈಲಧಿಕಾರಿಗಳಿಗೆ ಆದೇಶ ಹೊರಡಿಸಿತ್ತು.
ಕೋರ್ಟ್ ಆದೇಶ ನೀಡಿ ಹಲವು ದಿನಗಳು ಕಳೆದರೂ ದರ್ಶನ್ ಗೆ ಯಾವುದೇ ಹಾಸಿಗೆ, ತಲೆದಿಂಬುಗಳನ್ನು ಜೈಲಾಧಿಕಾರಿಗಳು ಒದಗಿಸಿಲ್ಲ. ಇದರಿಂದ ದರ್ಶನ್ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದಾರೆ. ಕೋರ್ಟ್ ಆದೇಶವನ್ನು ಜೈಲಿ ಅಧಿಕಾರಿಗಳು ಉಲ್ಲಂಘಿಸುತ್ತಿದ್ದಾರೆ. ತನಗೆ ಯಾವುದೇ ಸೌಲಭ್ಯ ಒದಗಿಸಿಲ್ಲ ಎಂದು ದೂರಿದ್ದಾರೆ.
ಇಂದು 57ನೇ ಸಿಸಿಹೆಚ್ ಕೋರ್ಟ್ ನಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ನ್ಯಾಯಾಲಯ ಅರ್ಜಿ ವಿಚಾರಣೆಯನ್ನು ಇಂದು ಸೆ. 22ಕ್ಕೆ ಮುಂದೂಡಿದೆ.
Advertisement