
ಬೆಂಗಳೂರು: ನಾಳೆಯಿಂದ ರಾಜ್ಯದ ಎಲ್ಲಾ ಶಾಲಾಗಳಿಗೆ ದಸರಾ ರಜೆ ಘೋಷಣೆ ಮಾಡಲಾಗಿದೆ. ಈ ಕುರಿತಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ ವಿದ್ಯಾರ್ಥಿಗಳ ದಸರಾ ರಜೆ ನಾಳೆ ಸೆಪ್ಟೆಂಬರ್ 20ರಂದು ಆರಂಭ. ಮೈಸೂರು ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವವನ್ನು ಮಕ್ಕಳು ಸಹ ನೋಡಿ ಕಣ್ತುಂಬಿಕೊಳ್ಳಲಿ ಎಂದು ಶಿಕ್ಷಣ ಇಲಾಖೆ ನಾಳೆಯಿಂದ 18 ದಿನ ಸರ್ಕಾರಿ ಶಾಲೆಗಳಿಗೆ ಹಬ್ಬದ ರಜೆ ಘೋಷಿಸಿದೆ.
ಎರಡು ದಿನ ಹೊರತುಪಡಿಸಿ 18 ದಿನ ರಜೆ
ಈ ಬಗ್ಗೆ ಶಿಕ್ಷಣ ಇಲಾಖೆ ಇಂದು ಆದೇಶ ಹೊರಡಿಸಿದ್ದು, ಸೆ. 20 ರಿಂದ ಅಕ್ಟೋಬರ್ 7ರವರೆಗೆ ಸರ್ಕಾರಿ ಶಾಲೆಗಳಿಗೆ ಒಟ್ಟು 18 ದಿನ ಹಬ್ಬದ ರಜೆ ಘೋಷಿಸಿದೆ. ಕಡ್ಡಾಯವಾಗಿ ಅಕ್ಟೋಬರ್ 2ರಂದು ನಡೆಯಲಿರುವ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮಗಳಿಗೆ ಹಾಜರಾಗುವಂತೆ ಸೂಚಿಸಲಾಗಿದೆ.
ರಾಜ್ಯ ಶಿಕ್ಷಣ ಇಲಾಖೆ ಹೊರಡಿಸಿರುವ ಶೈಕ್ಷಣಿಕ ವೇಳಾಪಟ್ಟಿಯ ಪ್ರಕಾರ 18 ದಿನ ರಜೆ ನೀಡಲಾಗಿದೆ. ಸೆಪ್ಟೆಂಬರ್ 22ರಂದು ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಚಾಲನೆ ಸಿಗುತ್ತಿದೆ.
ಅಂದಿನಿಂದ ಅಕ್ಟೋಬರ್ 2ವರೆಗೆ ಅಂದರೆ 11 ದಿನಗಳ ಕಾಲ ದಸರಾ ಹಬ್ಬ ನೆರವೇರಲಿದೆ.
Advertisement