
ಬೆಂಗಳೂರು: ಸಾಮಾಜಿಕ-ಆರ್ಥಿಕ ಸಮೀಕ್ಷೆಯ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಕೇಂದ್ರ ಮತ್ತು ರಾಜ್ಯ ಸರ್ಕಾರ, ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿದೆ. ಸಮೀಕ್ಷೆಗೆ ತಡೆ ಕೋರಿ ಸಲ್ಲಿಸಿರುವ ಮಧ್ಯಂತರ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 22ಕ್ಕೆ ಮುಂದೂಡಿದೆ.
ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ರವರೆಗೆ ನಡೆಸಲು ಉದ್ದೇಶಿಸಿರುವ ಸಮೀಕ್ಷೆಯ ವಿರುದ್ಧ ರಾಜ್ಯ ಒಕ್ಕಲಿಗರ ಸಂಘ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ, ವಕೀಲ ಕೆ ಎನ್ ಸುಬ್ಬಾ ರೆಡ್ಡಿ ಮತ್ತು ಇತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ನ್ಯಾಯಮೂರ್ತಿ ರಾಜೇಶ್ ರೈ ಕೆ ಅವರ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಭಾರತದ ಸಂವಿಧಾನದ ಅಡಿಯಲ್ಲಿ ಜಾತಿ ಗಣತಿಯು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಆದ್ದರಿಂದ ರಾಜ್ಯ ಸರ್ಕಾರವು ಜನಗಣತಿಯನ್ನು ನಡೆಸಲು ಶಾಸಕಾಂಗ ಅಥವಾ ಕಾರ್ಯಕಾರಿ ಸಾಮರ್ಥ್ಯ ಹೊಂದಿಲ್ಲ ಎಂದು ರಾಜ್ಯ ಒಕ್ಕಲಿಗರ ಸಂಘ ವಕೀಲರಾದ ಅಭಿಷೇಕ್ ಕುಮಾರ್ ಮತ್ತು ಕೀರ್ತಿ ಕೆ ರೆಡ್ಡಿ ಅವರ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ಹೇಳಿದೆ.
ಇದು ಅಕ್ರಮಗಳು, ನಾಪತ್ತೆಯಾದ ದಾಖಲೆಗಳು, ವರದಿಗೆ ಸಹಿ ಹಾಕಲು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕಾರ್ಯದರ್ಶಿ ನಿರಾಕರಣೆ, ನಿಖರವಾದ ಮಾಹಿತಿ ಸಂಗ್ರಹಿಸುವಲ್ಲಿ ವಿಫಲವಾದ 2015 ರ ಸಮೀಕ್ಷೆಯು ಪುನರಾವರ್ತನೆಯಾಗಿದ್ದು, ಗಂಭೀರ ಕಾನೂನು ಮತ್ತು ಕಾರ್ಯವಿಧಾನದ ದೋಷಗಳಿಂದ ಕೂಡಿದೆ ಎಂದು ಹೇಳಲಾಗಿದೆ.
ಉದ್ದೇಶಿತ ಸಮೀಕ್ಷೆಯು 15 ದಿನಗಳಲ್ಲಿ ಸುಮಾರು ಏಳು ಕೋಟಿ ವ್ಯಕ್ತಿಗಳನ್ನು ಎಣಿಸಲು ಪ್ರಸ್ತಾಪಿಸಿದೆ. ಇದು ಅನಿಯಂತ್ರಿತ ಮತ್ತು ಅವೈಜ್ಞಾನಿಕವಾಗಿದ್ದು, ಹಲವಾರು ತಿಂಗಳುಗಳ ಕಾಲ ನಡೆಯುವ ಕೇಂದ್ರ ಸರ್ಕಾರದ ಜನಗಣತಿಗೆ ವ್ಯತಿರಿಕ್ತವಾಗಿದೆ. ಆಗಸ್ಟ್ 13 ಮತ್ತು 22, 2025 ರಂದು ಸಮೀಕ್ಷೆಯನ್ನು ಅಧಿಕೃತಗೊಳಿಸಿದ ಆದೇಶಗಳು ಅಸಾಂವಿಧಾನಿಕ ಮತ್ತು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧಿನಿಯಮ, 1995ರ ಉಲ್ಲಂಘನೆಯಾಗಿದೆ. ಆತುರದ ಸಮೀಕ್ಷೆಯು ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುತ್ತದೆ ಮತ್ತು ಸಾರ್ವಜನಿಕ ಹಣವನ್ನು ವ್ಯರ್ಥ ಮಾಡುತ್ತದೆ ಎಂದು ಅರ್ಜಿದಾರರ ಪರ ವಕೀಲರು ಹೇಳಿದ್ದಾರೆ.
ಆಯೋಗವು ಉಪ ಜಾತಿಗಳನ್ನು ಪ್ರತ್ಯೇಕ ಜಾತಿಗಳಾಗಿ ಹೆಚ್ಚಿಸಿದೆ. ರಾಜಕೀಯ ಪ್ರೇರಿತ ರೀತಿಯಲ್ಲಿ ಪಟ್ಟಿಯನ್ನು 1,400 ರಿಂದ 1,561 ಕ್ಕೆ ವಿಸ್ತರಿಸಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.
ಸಮೀಕ್ಷೆಯಲ್ಲಿ ಮನೆ ಮನೆ ಸಮೀಕ್ಷೆಯನ್ನು ಸರಿಯಾಗಿ ಮಾಡುತ್ತಿಲ್ಲ. ದತ್ತಾಂಶ ಸಂಗ್ರಹಕ್ಕೆ ವಿದ್ಯುತ್ ಮೀಟರ್ ಬಳಸಲಾಗುತ್ತಿದೆ. ಆಧಾರ್, ಪಡಿತರ ಚೀಟಿಗಳು ಮತ್ತು ಫೋನ್ ಸಂಖ್ಯೆಗಳೊಂದಿಗೆ ಜಾತಿ ವಿವರಗಳು ನ್ಯಾಯಮೂರ್ತಿ ಪುಟ್ಟಸ್ವಾಮಿ ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಗುರುತಿಸಿದಂತೆ ಆರ್ಟಿಕಲ್ 21 ರ ಅಡಿಯಲ್ಲಿ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸುತ್ತದೆ. ಅದರಂತೆ, ಅರ್ಜಿದಾರರು ಸರ್ಕಾರಿ ಆದೇಶಗಳನ್ನು ರದ್ದುಗೊಳಿಸಲು ಮತ್ತು ಉದ್ದೇಶಿತ ಸಮೀಕ್ಷೆಯನ್ನು ನಡೆಸದಂತೆ ಅಥವಾ ಕಾರ್ಯನಿರ್ವಹಿಸದಂತೆ ರಾಜ್ಯವನ್ನು ನಿರ್ಬಂಧಿಸಬೇಕು ಎಂದು ಕೋರಿದರು.
ಸಮೀಕ್ಷೆಗೆ ಸಲ್ಲಿಕೆಯಾಗಿರುವ ಹಲವಾರು ಆಕ್ಷೇಪಣೆಗಳನ್ನು ಆಯೋಗ ಪರಿಗಣಿಸಿಲ್ಲ ಎಂದು ತಿಳಿಸಿದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭೆಯು, ನಾಗರಿಕರಿಂದ ಹೆಚ್ಚಿನ ಪ್ರಮಾಣದ ಸೂಕ್ಷ್ಮ ದತ್ತಾಂಶಗಳನ್ನು ಸಂಗ್ರಹಿಸಲಾಗುತ್ತಿದೆ. ಇದು ದುರ್ಬಳಕೆಗೆ ಕಾರಣವಾಗಬಹುದು ಮತ್ತು ದುರಂತದ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಪ್ರತಿಪಾದಿಸಿದೆ.
ಇದೇ ವೇಳೆ ಕೆಲ ಅರ್ಜಿದಾರರ ಪರ ಹಿರಿಯ ವಕೀಲರು ದತ್ತಾಂಶ ಸಂಗ್ರಹಕ್ಕೆ ಎಲೆಕ್ಟ್ರಿಕಲ್ ಮೀಟರ್ ರೀಡರ್ ಗಳನ್ನು ಬಳಸುತ್ತಿದ್ದು, ಎಲ್ಲ ಮಾಹಿತಿಗಳನ್ನು ಖಾಸಗಿ ವ್ಯಕ್ತಿಗಳು ಸಂಗ್ರಹಿಸುತ್ತಿದ್ದು, ಇದಕ್ಕೆ ಯಾವುದೇ ಭದ್ರತೆ ಇಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
Advertisement