News headlines 20-09-2025 | ಜಾತಿ ಗಣತಿ ಪಟ್ಟಿಯಲ್ಲಿ ಕ್ರೈಸ್ತ ಧರ್ಮಕ್ಕೆ ಹಿಂದೂ ಉಪಜಾತಿಗಳ ಸೇರ್ಪಡೆ ಪ್ರಶ್ನಿಸಿ ಸಿಎಂ ಗೆ ರಾಜ್ಯಪಾಲರ ಪತ್ರ; KMF ಉತ್ಪನ್ನಗಳ ದರ ಸೆ.22 ರಿಂದ ಇಳಿಕೆ; ರಾಜ್ಯದಿಂದ ಆಹಾರ ಧಾನ್ಯ ಖರೀದಿ- ಜೋಶಿ

News headlines 20-09-2025 | ಜಾತಿ ಗಣತಿ ಪಟ್ಟಿಯಲ್ಲಿ ಕ್ರೈಸ್ತ ಧರ್ಮಕ್ಕೆ ಹಿಂದೂ ಉಪಜಾತಿಗಳ ಸೇರ್ಪಡೆ ಪ್ರಶ್ನಿಸಿ ಸಿಎಂ ಗೆ ರಾಜ್ಯಪಾಲರ ಪತ್ರ; KMF ಉತ್ಪನ್ನಗಳ ದರ ಸೆ.22 ರಿಂದ ಇಳಿಕೆ; ರಾಜ್ಯದಿಂದ ಆಹಾರ ಧಾನ್ಯ ಖರೀದಿ- ಜೋಶಿ

1. ಸೆ.22ರಿಂದ ರಾಜ್ಯದಲ್ಲಿ ಜಾತಿ ಸಮೀಕ್ಷೆ ಆರಂಭ; ಆದಿಚುಂಚನಗಿರಿ ಶ್ರೀಗಳ ನೇತೃತ್ವದಲ್ಲಿ ಒಕ್ಕಲಿಗರ ಸಭೆ

ಹಲವು ಗೊಂದಲ, ವಿರೋಧಗಳ ನಡುವೆ ಸೆ.22ರಿಂದ ರಾಜ್ಯದಲ್ಲಿ ಜಾತಿ ಸಮೀಕ್ಷೆ ಆರಂಭವಾಗಲಿದೆ. ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, 16 ದಿನಗಳ ಕಾಲ ನಡೆಯುವ ಈ ಸಮೀಕ್ಷೆಗೆ ಸಾರ್ವಜನಿಕರ ಸಹಕಾರವನ್ನು ಕೋರಿದೆ. ರಾಜ್ಯದ ಎಲ್ಲಾ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಕುರಿತು ನಿಖರವಾದ ಮಾಹಿತಿ ಸಂಗ್ರಹಿಸುವುದು ಈ ಸಮೀಕ್ಷೆಯ ಮುಖ್ಯ ಗುರಿಯಾಗಿದೆ ಎಂದು ಸರ್ಕಾರ ಹೇಳಿದೆ.

ಏತನ್ಮಧ್ಯೆ ಜಾತಿ ಸಮೀಕ್ಷೆಯಲ್ಲಿ ಗೊಂದಲಗಳಿರುವ ಹಿನ್ನೆಲೆಯಲ್ಲಿ ಇಂದು ಒಕ್ಕಲಿಗ ಸಮುದಾಯದ ನಾಯಕರು ಇಂದು ಬೆಂಗಳೂರಿನಲ್ಲಿ ಆದಿಚುಂಚನಗಿರಿ ಶ್ರೀಗಳ ನೇತೃತ್ವದಲ್ಲಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ, ಡಿಸಿಎಂ ಡಿಕೆ ಶಿವಕುಮಾರ್, ಅಶ್ವತ್ಥ್ ನಾರಾಯಣ್, ಆರ್.ಅಶೋಕ್​, ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವೆ ಶೋಭಾ ಸೇರಿದಂತೆ ಪ್ರಮುಖರು ಭಾಗಿಯಾದರು. ಸುದೀರ್ಘ ಚರ್ಚೆ ಮೂಲಕ ಜಾತಿಗಣತಿ ಸಮೀಕ್ಷೆ ಪಟ್ಟಿಯಲ್ಲಿ ಧರ್ಮ ಹಿಂದೂ, ಜಾತಿ ಒಕ್ಕಲಿಗ ಬರೆಸಲು ನಿರ್ಣಯ ಕೈಗೊಳ್ಳಲಾಗಿದೆ. ಸಭೆ ಬಳಿಕ ಮಾತನಾಡಿದ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥಶ್ರೀ, ಯಾವುದೇ ಕಾರಣಕ್ಕೂ ಕ್ರಿಶ್ಚಿಯನ್ ಜೊತೆ ಒಕ್ಕಲಿಗರನ್ನು ಸೇರಿಸಬಾರದು. ಸಮೀಕ್ಷೆಯನ್ನು ಮುಂದೂಡಬೇಕು ಎಂದು ಆಗ್ರಹಿಸಿದ್ದಾರೆ. ಇದೇ ವೇಳೆ ಜಾತಿಗಣತಿ ವೇಳೆ ಕುರುಬ ಅಂತಾನೇ ಬರೆಸಿ’ ಎಂದು ಸಿಎಂ ಸಿದ್ದರಾಮಯ್ಯ ಗದಗದಲ್ಲಿ ಕುರುಬ ಸಮುದಾಯಕ್ಕೆ ಕರೆ ನೀಡಿದ್ದಾರೆ.

2. ಜಾತಿ ಗಣತಿ ಪಟ್ಟಿಯಲ್ಲಿ ಕ್ರೈಸ್ತ ಧರ್ಮಕ್ಕೆ ಹಿಂದೂ ಉಪಜಾತಿಗಳ ಸೇರ್ಪಡೆ ಪ್ರಶ್ನಿಸಿ ಸಿಎಂ ಗೆ ರಾಜ್ಯಪಾಲರ ಪತ್ರ

ಜಾತಿ ಗಣತಿ ಪಟ್ಟಿಯಲ್ಲಿ ಕ್ರೈಸ್ತ ಧರ್ಮಕ್ಕೆ ಹಿಂದೂ ಉಪಜಾತಿಗಳ ಸೇರ್ಪಡೆ ವಿಷಯದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಧ್ಯ ಪ್ರವೇಶಿಸಿದ್ದು ಕ್ರೈಸ್ತ ಧರ್ಮಕ್ಕೆ ಹಿಂದೂ ಉಪಜಾತಿಗಳ ಸೇರ್ಪಡೆ ಕುರಿತಂತೆ ಮರುಪರಿಶೀಲಿಸುವಂತೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ. ಪಟ್ಟಿಯಲ್ಲಿ ಕನಿಷ್ಠ 46 ಜಾತಿಗಳು ದ್ವಿ ಗುರುತುಗಳನ್ನು ಹೊಂದಿವೆ. ಕ್ರೈಸ್ತ ಬ್ರಾಹ್ಮಣ, ಕ್ರೈಸ್ತ ಒಕ್ಕಲಿಗ, ಕ್ರೈಸ್ತ ಕುರುಬ ಮೂಲಕ ಕ್ರೈಸ್ತ ಧರ್ಮಕ್ಕೆ ಹಿಂದೂ ಉಪಜಾತಿ ಸೇರ್ಪಡೆ ಮಾಡಲಾಗುತ್ತಿದೆ ಎಂದು ಆರೋಪಿಸಿ ರಾಜ್ಯ ಬಿಜೆಪಿ ನಾಯಕರು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಿದ್ದರು.

ಕ್ರಿಶ್ಚಿಯನ್ ಧರ್ಮಕ್ಕೆ ಹಿಂದೂ ಉಪಜಾತಿಗಳ ಸೇರ್ಪಡೆಯಿಂದ ಸಾಮಾಜಿಕ ಧಕ್ಕೆ ಹಾಗೂ ದೀರ್ಘಾವಧಿಯ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ಪಟ್ಟಿಯಲ್ಲಿನ ಜಾತಿಗಳ ದ್ವಿ ಗುರುತನ್ನು ಪಟ್ಟಿಯಿಂದ ಕೈಬಿಡುವಂತೆ ಪತ್ರದಲ್ಲಿ ರಾಜ್ಯಪಾಲರು ಸೂಚಿಸಿದ್ದಾರೆ. ಇನ್ನು ಸಾಮಾಜಿಕ-ಆರ್ಥಿಕ ಸಮೀಕ್ಷೆಯ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಕೇಂದ್ರ ಮತ್ತು ರಾಜ್ಯ ಸರ್ಕಾರ, ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿದೆ. ಸಮೀಕ್ಷೆಗೆ ತಡೆ ಕೋರಿ ಸಲ್ಲಿಸಿರುವ ಮಧ್ಯಂತರ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 22ಕ್ಕೆ ಮುಂದೂಡಿದೆ.

3. KMF ಉತ್ಪನ್ನಗಳ ದರ ಸೆ.22 ರಿಂದ ಇಳಿಕೆ

ದಸರಾ ಹಬ್ಬದ ಸಮಯದಲ್ಲಿ ಕೆಎಂಎಫ್ ನಂದಿನಿ ಉತ್ಪನ್ನಗಳ ದರ ಇಳಿಕೆ ಮಾಡಿ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ. ಸೆ,22ರಿಂದ ನೂತನ ದರ ಜಾರಿಗೆ ಬರಲಿದೆ. ಕೇಂದ್ರ ಸರ್ಕಾರದಿಂದ ಜಿಎಸ್​​ಟಿ ಇಳಿಕೆ ಬೆನ್ನಲ್ಲೇ ದರ ಕಡಿತದ ಲಾಭವನ್ನು ತನ್ನ ಗ್ರಾಹಕರಿಗೆ ತಲುಪಿಸಲು ಕೆಎಂಎಫ್ ಮುಂದಾಗಿದೆ. ಈ ಹಿಂದೆ ಶೇಕಡಾ 18 ಜಿಎಸ್‌ಟಿ ಹೊಂದಿದ್ದ ಐಸ್‌ಕ್ರೀಮ್‌ಗಳು, ಮಫಿನ್‌ಗಳು, ಕೇಕ್‌ಗಳು, ಕುಕೀಸ್ ಮತ್ತು ಚಾಕೊಲೇಟ್‌ಗಳು ಶೇ. 5ಕ್ಕೆ ಇಳಿಕೆಯಾಗುತ್ತದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ ಶಿವಸ್ವಾಮಿ ತಿಳಿಸಿದ್ದಾರೆ.

4. ಬೆಂಗಳೂರು ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕಿಗೆ ಲೈಂಗಿಕ ಕಿರುಕುಳ: ಐವರು ಉಪನ್ಯಾಸಕರ ವಿರುದ್ಧ FIR

ಬೆಂಗಳೂರು ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ವಿವಿಯ ಐವರು ಉಪನ್ಯಾಸಕರ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಐವರೂ ಅತಿಥಿ ಉಪನ್ಯಾಸಕಿಗೆ ಲೈಂಗಿಕ ಕಿರುಕುಳ ನೀಡಿದ್ದು, ಜ್ಞಾನಭಾರತಿ ಆವರಣದಲ್ಲೇ ಈ ಕೃತ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಎಫ್‌ಐಆರ್ ದಾಖಲಾದ ಬೆನ್ನಲ್ಲೇ ಉಪನ್ಯಾಸಕರ ಹಲವು ವಿಡಿಯೋಗಳು ವೈರಲ್ ಆಗಿವೆ.

5. ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ರಾಜ್ಯದಿಂದ ಹೆಸರುಕಾಳು, ಉದ್ದು, ಸೂರ್ಯಕಾಂತಿ, ನೆಲಗಡಲೆ ಮತ್ತು ಸೋಯಾಬೀನ್ ಖರೀದಿ-ಜೋಶಿ

ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ, ಕೇಂದ್ರ ಸರ್ಕಾರ ಕರ್ನಾಟಕದಿಂದ ಹೆಸರುಕಾಳು, ಉದ್ದು, ಸೂರ್ಯಕಾಂತಿ, ನೆಲಗಡಲೆ ಮತ್ತು ಸೋಯಾಬೀನ್ ಖರೀದಿಸಲಿದೆ. ಇದರಿಂದ ರಾಜ್ಯದ ರೈತ ಸಮುದಾಯಕ್ಕೆ ಹೆಚ್ಚಿನ ಲಾಭವಾಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ. ರಾಜ್ಯ ಸರ್ಕಾರ ಪ್ರಸ್ತಾಪಿಸಿದಂತೆ, 2025-26 ಖಾರಿಫ್ ಋತುವಿನಲ್ಲಿ ಕರ್ನಾಟಕದಲ್ಲಿ ಬೆಳೆಯುವ ಈ ಬೆಳೆಗಳ ಖರೀದಿಗೆ ಅನುಮೋದನೆ ನೀಡುವಂತೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಕೋರಿರುವುದಾಗಿ ಜೋಶಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com