
ಬೆಂಗಳೂರು: ರಾಜಧಾನಿ ಬೆಂಗಳೂರು ನಗರದಲ್ಲಿ 7 ಸಾವಿರಕ್ಕೂ ಹೆಚ್ಚು ರಸ್ತೆಗುಂಡಿಗಳನ್ನು ಈಗಾಗಲೇ ಮುಚ್ಚಲಾಗಿದೆ. ಇನ್ನೂ 5 ಸಾವಿರದಷ್ಟು ಗುಂಡಿಗಳನ್ನು ಮುಚ್ಚಲು ಬಾಕಿಯಿದೆ. ರಸ್ತೆ ಗುಂಡಿ ಸಮಸ್ಯೆ ಬಗೆಹರಿಸಲು ನಾವು ಬದ್ಧರಾಗಿದ್ದು, ಸಮರೋಪಾದಿಯಲ್ಲಿ ಕೆಲಸ ನಡೆಯುತ್ತಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ಹಾವಳಿಗೆ ಸಂಬಂಧಿಸಿದ ಟೀಕೆಗಳಿಗೆ ಪ್ರತಿಕ್ರಿಯಿಸಿದ ಅವರು, ರಸ್ತೆ ಗುಂಡಿಗಳು ನೈಸರ್ಗಿಕ ಕಾರಣಗಳು ಮತ್ತು ಭಾರೀ ಮಳೆಯಿಂದಾಗಿ ಸೃಷ್ಟಿಯಾಗುತ್ತವೆ.
ಅವುಗಳನ್ನು ನಾವು ಬೇಕೆಂದೇ ಮಾಡುವುದಿಲ್ಲ, ಸಮಸ್ಯೆಯನ್ನು ಬಗೆಹರಿಸಲು ನಾವು ಇಲ್ಲಿದ್ದೇವೆ. ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಅವರು ಏನು ಬೇಕಾದರೂ ಮಾಡಲಿ. ಇಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಸಭೆ ನಡೆಸುತ್ತಿದ್ದಾರೆ. ಗುಂಡಿಗಳು ಪ್ರಕೃತಿಯಿಂದ ಉಂಟಾಗುತ್ತವೆ; ಯಾರೂ ಅವುಗಳನ್ನು ಸೃಷ್ಟಿಸಲು ಬಯಸುವುದಿಲ್ಲ ಎಂದರು.
ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಹೆಚ್ಚಳ, ಭಾರೀ ದಟ್ಟಣೆ ಮತ್ತು ಅತಿಯಾದ ಮಳೆಯಿಂದಾಗಿ ಈ ವರ್ಷ ಹೆಚ್ಚಿನ ಗುಂಡಿಗಳು ಸೃಷ್ಟಿಯಾಗಿವೆ. ನಾವು ಈಗಾಗಲೇ 7,000 ಕ್ಕೂ ಹೆಚ್ಚು ಗುಂಡಿಗಳನ್ನು ಮುಚ್ಚಿದ್ದೇವೆ. ಬೆಂಗಳೂರಿನ ರಸ್ತೆಗಳಲ್ಲಿ ಇನ್ನೂ 5,000 ಕ್ಕೂ ಹೆಚ್ಚು ಗುಂಡಿಗಳು ಉಳಿದಿವೆ. ಗುಂಡಿಗಳ ಸ್ಥಿತಿಯ ಕುರಿತು ವರದಿ ಸಲ್ಲಿಸುವಂತೆ ನಾವು ಪೊಲೀಸ್ ಆಯುಕ್ತರನ್ನು ಕೇಳಿದ್ದೇವೆ ಎಂದರು.
ಬಿಜೆಪಿಯಿಂದ ರಾಜಕೀಯ
ಸಾಮಾನ್ಯ ನಾಗರಿಕರು ಸಹ ಅವುಗಳ ಬಗ್ಗೆ ವರದಿ ಮಾಡುತ್ತಿದ್ದಾರೆ. ಬಿಜೆಪಿ ರಾಜಕೀಯ ಮಾಡುವುದನ್ನು ನಾವು ತಡೆಯಲು ಸಾಧ್ಯವಿಲ್ಲ. ಅವರು ರಸ್ತೆಗಳನ್ನು ನಿರ್ಬಂಧಿಸಲಿ ಅಥವಾ ಏನು ಬೇಕಾದರೂ ಮಾಡಲಿ. ಪರಿಹಾರಗಳನ್ನು ಕಂಡುಹಿಡಿಯಲು ನಾವು ಇಲ್ಲಿದ್ದೇವೆ. ಎಲ್ಲಾ ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲಿ, ತಾರತಮ್ಯವಿಲ್ಲದೆ ಅನುದಾನವನ್ನು ಬಿಡುಗಡೆ ಮಾಡಿದ್ದೇನೆ ಎಂದರು.
ಅವರಿಗೆ ಹಣ ನೀಡಿದ ನಂತರವೂ ಬಿಜೆಪಿ ಶಾಸಕರು ಗುಂಡಿಗಳನ್ನು ಏಕೆ ಮುಚ್ಚಲಿಲ್ಲ ಈಗಲೂ ನಾವು ಬಿಜೆಪಿ ಶಾಸಕರಿಗೆ 25 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುತ್ತಿದ್ದೇವೆ. ಅವರು ನಮ್ಮನ್ನು ಟೀಕೆ ಮಾಡುತ್ತಾ ಕೂರುವ ಬದಲು ಕೆಲಸ ಮಾಡಲಿ ಎಂದರು.
ಇದಕ್ಕೂ ಮೊದಲು, ರಸ್ತೆ ಮೂಲಸೌಕರ್ಯ ಕಳಪೆಯಾಗಿರುವುದರಿಂದ ಐಟಿ ಕಂಪನಿಗಳು ಬೆಂಗಳೂರು ತೊರೆಯುತ್ತಿರುವ ಬಗ್ಗೆ ಟೀಕೆಗಳನ್ನು ಎದುರಿಸುತ್ತಿದ್ದ ಶಿವಕುಮಾರ್, ಗುರುವಾರ "ಯಾರೂ ಸರ್ಕಾರವನ್ನು ಬೆದರಿಸಲು ಅಥವಾ ಬ್ಲ್ಯಾಕ್‌ಮೇಲ್ ಮಾಡಲು ಸಾಧ್ಯವಿಲ್ಲ. ಯಾರೂ ಹೊರಹೋಗುವುದನ್ನು ನಾನು ತಡೆಯುವುದಿಲ್ಲ" ಎಂದು ಹೇಳಿದ್ದರು.
ಬೆಂಗಳೂರಿನ ವರ್ತೂರು-ಗುಂಜೂರು ರಸ್ತೆಯು ಹೊಂಡ- ಗುಂಡಿಗಳಿಂದ ಕೂಡಿದ್ದು, ಸಂಚಾರ ದಟ್ಟಣೆಯಿಂದ ಕೂಡಿದ್ದು, ಪ್ರಯಾಣಿಕರಿಗೆ ತೀರಾ ಕಷ್ಟವಾಗಿದೆ ಎಂದು ಅಪಾರ್ಟ್‌ಮೆಂಟ್‌ಗಳ ನಿವಾಸಿಗಳು ಭಿತ್ತಿಪತ್ರ ಹಿಡಿದುಕೊಂಡು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರು.
Advertisement