ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಜಾತಿ ಗಣತಿ ಸೋಮವಾರದಿಂದ ಆರಂಭವಾಗಲಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ಕ್ರಿಶ್ಚಿಯನ್ ಧರ್ಮದಡಿ ವಿವಿಧ ಜಾತಿಗಳ ಉಲ್ಲೇಖವನ್ನುತೋರಿಸುವ ಕಾಲಮ್ ನ್ನು ತೆಗೆದುಹಾಕಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ಈ ವಿಷಯದಲ್ಲಿ "ರಾಜಕೀಯ ಮಾಡುತ್ತಿದೆ" ಎಂದು ಆರೋಪಿಸಿದ್ದಾರೆ. ಹಿಂದುಳಿದ ವರ್ಗಗಳ ಆಯೋಗ. ಆಯೋಗವು ಶಾಸನಬದ್ಧ ಸಂಸ್ಥೆಯಾಗಿದ್ದು, ಸಮೀಕ್ಷೆ ನಡೆಸಲು ಮಾರ್ಗಸೂಚಿಗಳನ್ನಷ್ಟೇ ಸರ್ಕಾರ ನೀಡಿದೆ. ಸ್ವತಃ ಆಯೋಗವೇ ಕ್ರಿಶ್ಚಿಯನ್ ಧರ್ಮದಡಿ ವಿವಿಧ ಜಾತಿಗಳ ಉಲ್ಲೇಖವನ್ನುತೋರಿಸುವ ಕಾಲಮ್ ನ್ನು ತೆಗೆದುಹಾಕಿದೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.
ನಾಳೆಯಿಂದ ಪ್ಲಾನ್ ಮಾಡಿದಂತೆ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸಮೀಕ್ಷೆ ಆರಂಭಗೊಳ್ಳಲಿದ್ದು, ಸರ್ವೆ ಕಾರ್ಯಕ್ಕೆ ತೆರಳಿದಾಗ ಮೊಬೈಲ್ ಆಪ್ ಮೂಲಕ ಮಾಹಿತಿ ಸಂಗ್ರಹ ಮಾಡ್ತಾರೆ. ಆಧಾರ್ ನಂಬರ್, ಆಧಾರ್ ಕಾರ್ಡ್‌ಗಳ ಅವಶ್ಯಕತೆ ಇದೆ. ಪಡಿತರ ಕಾರ್ಡ್‌ಗಳಲ್ಲಿನ ಮಾಹಿತಿ ನಮ್ಮ ಸಿಸ್ಟಮ್‌ನಲ್ಲೂ ಲಭ್ಯವಿರುತ್ತೆ. ಇದರಿಂದ ಕುಟುಂಬದ ಸದಸ್ಯರ ಮಾಹಿತಿ ಬೇಗ ಲಭ್ಯವಾಗುತ್ತೆ. ಪಡಿತರ ಚೀಟಿ ಇಲ್ಲದಿದ್ದರೆ ಆಧಾರ್ ಕಾರ್ಡ್ ಕಡ್ಡಾಯ ಆಗಲಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂಧನ್ ನಾಯ್ಕ್ ಹೇಳಿದ್ದಾರೆ.
ದೇವಾಲಯದ ಬಾಗಿಲು ತೆರೆದು ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿ ಕಿಡಿಗೇಡಿಗಳು ವಿಕೃತಿ ಮೆರೆದಿರುವ ಘಟನೆಯೊಂದು ಹಾಸನ ಜಿಲ್ಲೆ, ಬೇಲೂರು ಪಟ್ಟಣದಲ್ಲಿ ನಡೆದಿದೆ. ಸಾರಿಗೆ ಬಸ್ ನಿಲ್ದಾಣ ಮುಂಭಾಗದ ಬೇಲೂರು ಪುರಸಭೆ ಆವರಣದಲ್ಲಿರುವ ಶ್ರೀ ವಿದ್ಯಾಗಣಪತಿ ದೇವಾಲಯದಲ್ಲಿ ಈ ಘಟನೆ ನಡೆದಿದ್ದು, ಬೆಳಗ್ಗೆ ಭಕ್ತಾಧಿಗಳು ಕೈಮುಗಿಯಲು ಹೋದಾಗ ಗಣಪತಿಗೆ ಚಪ್ಪಲಿ ಹಾರ ಹಾಕಿ ವಿಕೃತಿ ಮೆರೆದಿರುವುದು ಬೆಳಕಿಗೆ ಬಂದಿದೆ.
ಕೋಮು ಸೌಹಾರ್ದ ಕದಡಲು ಕೆಲವು ಕಿಡಿಗೇಡಿಗಳು ಇಂತಹ ದುಷ್ಕೃತ್ಯ ಎಸಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸ್ಥಳೀಯರು ಪ್ರತಿಭಟನೆ ನಡೆಸಿ ಆಗ್ರಹಿಸಿದ್ದಾರೆ. ಈ ನಡುವೆ ದೇವಸ್ಥಾನಕ್ಕೆ ಮುಖ ಮುಚ್ಚಿಕೊಂಡ ಮಹಿಳೆಯೊಬ್ಬರು ಗಣೇಶನ ದೇವಸ್ಥಾನಕ್ಕೆ ಬಂದಿದ್ದುಸ ಮೂರ್ತಿಗೆ ಚಪ್ಪಲಿ ಹಾರ ಹಾಕಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೇಲೂರು ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಸಿಸಿಟಿವಿ ದೃಶ್ಯ ಆಧರಿಸಿ ಮಹಿಳೆಗಾಗಿ ಬೇಲೂರು ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಬಿಜೆಪಿ ಎಂಎಲ್ ಸಿ ಸಿಟಿ ರವಿ, ಇದು ಹಿಂದೂ ಸಮಾಜವನ್ನು ಕೆರಳಿಸುವ ಒಂದು ವ್ಯವಸ್ಥಿತ ಷಡ್ಯಂತ್ರ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿಯನ್ನು ಉಚ್ಛಾಟನೆ ಮಾಡಲು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ನಿರ್ಧರಿಸಿದೆ.
ಲಿಂಗಾಯತ ಧರ್ಮ ವಿರೋಧಿ ಹೇಳಿಕೆ, ಅಕ್ರಮ ಆಸ್ತಿ ಗಳಿಕೆ ಸೇರಿದಂತೆ ಸ್ವಾಮೀಜಿ ಮೇಲೆ ಹಲವು ಆರೋಪ ಹೊರಿಸಿ, ಪೀಠದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ನೀಲಕಂಠ ಅಸೂಟಿ ಹೇಳಿದ್ದಾರೆ. ಇಂದು ನಡೆದ ಸಭೆಯಲ್ಲಿ ಸ್ವಾಮೀಜಿಯನ್ನು ಉಚ್ಛಾಟಿಸುವ ನಿರ್ಣಯ ತೆಗೆದುಕೊಳ್ಳಲಾಯಿತು. ಸ್ವಾಮೀಜಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದು ಅಕ್ರಮವಾಗಿ ಆಸ್ತಿ ಗಳಿಕೆ ಮಾಡಿದ್ದಾರೆ. ಈ ಬಗ್ಗೆ 2014ರಲ್ಲಿ ಸ್ವಾಮೀಜಿಗೆ ನೋಟಿಸ್ ನೀಡಿದ್ದೇವು ಎಂದು ನೀಲಕಂಠ ಅಸೂಟಿ ಹೇಳಿದ್ದಾರೆ.
ರಸ್ತೆ ಗುಂಡಿಗಳಿಂದ ವಾಹನ ಸವಾರರು ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ, ಈ ಬಗ್ಗೆ ಆಕ್ರೋಶ ಕೇಳಿಬರುತ್ತಿದ್ದರೂ ಈವರೆಗೆ ಗುಂಡಿ ಮುಚ್ಚದೆ ಇರುವುದು ಅಕ್ಷಮ್ಯ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ನಗರ ರಸ್ತೆಗಳ ಸುಧಾರಣೆ ಹಾಗೂ ಸಂಚಾರ ವ್ಯವಸ್ಥೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದ್ದು, ಇನ್ನೂ 1 ತಿಂಗಳು ಕಾಲಾವಕಾಶ, ರಸ್ತೆ ಗುಂಡಿಗಳ ಮುಚ್ಚದಿದ್ದರೆ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಿಎಂ ಖಡಕ್ ಎಚ್ಚರಿಕೆ ನೀಡಿದ್ದಾರೆ. ಎಲ್ಲಾ ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಮುಖ್ಯ ಆಯುಕ್ತರು ಪ್ರತಿ ವಾರ ಐದೂ ವಲಯಗಳ ಆಯುಕ್ತರೊಂದಿಗೆ ಸಭೆ ನಡೆಸಿ, ನಿರಂತರ ಸಂಪರ್ಕದಲ್ಲಿರಬೇಕು ಎಂದು ಸಿಎಂ ಸಲಹೆ ನೀಡಿದ್ದಾರೆ.
ರಾಜ್ಯದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗಾಗಿ ಕರ್ನಾಟಕ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿದೆ. 2023ರ ವಿಧಾನಸಭಾ ಚುನಾವಣೆಗೆ ಮುನ್ನ ಕಲಬುರಗಿ ಜಿಲ್ಲೆಯ ಆಳಂದ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಿಂದ 6,018 ಹೆಸರುಗಳನ್ನು ಅಳಿಸಲು ಯತ್ನಿಸಲಾಗಿದೆ ಎಂಬ ಆರೋಪದ ತನಿಖೆಗಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಸಿಐಡಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಬಿ.ಕೆ ಸಿಂಗ್ ಅವರ ನೇತೃತ್ವದಲ್ಲಿ ಈ ತಂಡ ಕಾರ್ಯನಿರ್ವಹಿಸಲಿದೆ.
Advertisement