Caste Census: ಹಿಂದೂ ಸಮಾಜ ಒಡೆಯುವ ಷಡ್ಯಂತ್ರ, ಮತಾಂತರರಿಗೆ ಮೀಸಲಾತಿ ಕಲ್ಪಿಸುವ ಹುನ್ನಾರ- ಕೇಂದ್ರ ಸಚಿವ ಕಿಡಿ!

ಸಮಾಜ ದ್ರೋಹಿಗಳಿಗೆ, ಸಮಾಜದಲ್ಲಿ ಸೌಹಾರ್ದತೆ ಕೆಡಿಸುವವರಿಗೆ, ಮತೀಯ ಭಾವನೆ ಕೆರಳಿಸುವವರಿಗೆ ಕಾಂಗ್ರೆಸ್‌ ಸರ್ಕಾರ ಬೆಂಬಲ ಮತ್ತು ಕುಮ್ಮಕ್ಕು ನೀಡುತ್ತಿದೆ.
Pralhad joshi
ಕೇಂದ್ರ ಸಚಿವ ಪ್ರಲ್ಹಾದ ಜೋಶಿ
Updated on

ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್‌ ಸರ್ಕಾರ ನಡೆಸುತ್ತಿರುವ ಜಾತಿ-ಜನಗಣತಿ ಸಮೀಕ್ಷೆಗೆ ಯಾವುದೇ ಅಧಿಕೃತ ಮಾನ್ಯತೆಯಿಲ್ಲ, ಅರ್ಥವೂ ಇಲ್ಲವೆಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟಪಡಿಸಿದ್ದಾರೆ.

ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರ ಜನಗಣತಿ ಮಾಡುತ್ತದೆ. ಆ ಅಧಿಕಾರ ಇರುವುದು ಕೇಂದ್ರಕ್ಕೆ ಮಾತ್ರ. ರಾಜ್ಯ ಸರ್ಕಾರ ನಡೆಸುತ್ತಿರುವುದು ಸಮೀಕ್ಷೆಯಷ್ಟೇ. ಇದಕ್ಕೆ ಯಾವುದೇ ಅರ್ಥವಿಲ್ಲ ಎಂದು ಹೇಳಿದರು.

ಸಮಾಜ ದ್ರೋಹಿಗಳಿಗೆ, ಸಮಾಜದಲ್ಲಿ ಸೌಹಾರ್ದತೆ ಕೆಡಿಸುವವರಿಗೆ, ಮತೀಯ ಭಾವನೆ ಕೆರಳಿಸುವವರಿಗೆ ಕಾಂಗ್ರೆಸ್‌ ಸರ್ಕಾರ ಬೆಂಬಲ ಮತ್ತು ಕುಮ್ಮಕ್ಕು ನೀಡುತ್ತಿದೆ. ಈಗ ನಡೆಸುತ್ತಿರುವ ಜಾತಿಗಣತಿ ಸಮೀಕ್ಷೆಯಲ್ಲಿ ಸಹ ಇದರ ಪರಿಣಾಮ ಕಾಣುತ್ತಿದೆ ಎಂದು ತೀವ್ರವಾಗಿ ಖಂಡಿಸಿದರು.

ಯಾವ ಆಧಾರದ ಮೇಲೆ ಜಾತಿ ಸಮೀಕ್ಷೆ?: ರಾಜ್ಯ ಕಾಂಗ್ರೆಸ್‌ ಸರ್ಕಾರ ಅದ್ಯಾವ ಆಧಾರದ ಮೇಲೆ ಜಾತಿ ಸಮೀಕ್ಷೆ ಮಾಡುತ್ತಿದೆ? ಕುರುಬ ಕ್ರಿಶ್ಚಿಯನ್‌, ಬ್ರಾಹ್ಮಣ ಕ್ರಿಶ್ಚಿಯನ್‌, ಲಿಂಗಾಯತ ಕ್ರಿಶ್ಚಿಯನ್‌ ಎಂದು ಯಾವ ಆಧಾರ ಮೇಲೆ ಮಾಡಲು ಹೊರಟಿದ್ದೀರಿ? ಎಂದು ಪ್ರಲ್ಹಾದ ಜೋಶಿ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಸಿಎಂ ಅಲ್ಟ್ರಾ ಲೆಫ್ಟಿಸ್ಟ್‌: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಬ್ಬ ಅಲ್ಟ್ರಾ ಲೆಫ್ಟಿಸ್ಟ್‌ ಆಗಿದ್ದಾರೆ. ಜಾತಿ ಜನಗಣತಿ ಎಂದು ಕಳೆದ ಬಾರಿ ₹400 ಕೋಟಿ ಕಳೆದಿದ್ದಾರೆ. ಈ ಬಾರಿಯೂ ₹400 ಕೋಟಿ ಕಳೆಯುತ್ತಿದ್ದಾರೆ ಅಷ್ಟೇ. ಅದರ ವಿನಾಃ ಬೇರೇನೂ ಆಗುವುದಿಲ್ಲ. ಇದಕ್ಕೆ ಯಾವುದೇ ಮನ್ನಣೆ-ಮಾನ್ಯತೆ ಸಿಗುವುದಿಲ್ಲ ಎಂದು ಜೋಶಿ ಹೇಳಿದರು.

ಹಿಂದೂ ಸಮಾಜ ಒಡೆಯುವ ಷಡ್ಯಂತ್ರ: ನಕಲಿ ಗಾಂಧಿಗಳ ಅಣತಿಯಂತೆ ಸಿಎಂ ಸಿದ್ದರಾಮಯ್ಯ ಅವರು ಹಿಂದೂ ಸಮಾಜವನ್ನು ಒಡೆಯುವ ಷಡ್ಯಂತ್ರ ನಡೆಸಿದ್ದಾರೆ. ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಪ್ರೇರಣೆ, ಸೂಚನೆಯಂತೆ ನುಸುಳುಕೋರರಿಗೆ ʼವೋಟಿಂಗ್‌ ಹಕ್ಕುʼ ಕೊಟ್ಟು ದೇಶವನ್ನು ಅಶಕ್ತಗೊಳಿಸುವ ಷಡ್ಯಂತ್ರದ ಭಾಗ ಇದಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ರಾಜ್ಯ ಸರ್ಕಾರದ ಜಾತಿ ಸಮೀಕ್ಷೆಗೆ ಆಕ್ರೋಶ-ಆಕ್ಷೇಪ ವ್ಯಕ್ತಪಡಿಸಿದರು.

ಮತಾಂತರಿಗಳಿಗೆ ಮೀಸಲಾತಿ ಹುನ್ನಾರ: ಕನ್ವರ್ಟ್‌ ಆದವರಿಗೆ ಮೀಸಲಾತಿಯಿಲ್ಲ ಎಂಬುದು ನಮ್ಮ ಸಂವಿಧಾನದಲ್ಲಿ ಸ್ಪಷ್ಟವಾಗಿದೆ. ಆದರೆ ಇವರು ಕುರುಬ ಕ್ರಿಶ್ಚಿಯನ್‌, ಬ್ರಾಹ್ಮಣ ಕ್ರಿಶ್ಚಿಯನ್‌, ಲಿಂಗಾಯತ ಕ್ರಿಶ್ಚಿಯನ್‌ ಎಂದು ನಮೂದಿಸಿ ಮೀಸಲಾತಿ ಕೊಡುವ ಹುನ್ನಾರ ನಡೆಸಿದಂತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

ಹಿಂದೂ ಸಮಾಜ ಮತ್ತು ವ್ಯವಸ್ಥೆಯಲ್ಲಿ ಮೊದಲು ʼಅಸ್ಪೃಶ್ಯತೆʼ ಎಂಬುದಿರಲಿಲ್ಲ. ಅದ್ಯಾವುದೋ ಒಂದು ಕೆಟ್ಟ ಕಾಲಘಟ್ಟದಲ್ಲಿ ಇದು ತೂರಿಕೊಂಡು ಬಂದಿತು. ʼಅಸ್ಪೃಶ್ಯತೆʼ ನೆಪದಲ್ಲಿ ನಮ್ಮದೇ ಬಂಧುಗಳನ್ನು, ರಕ್ತ ಸಂಬಂಧಿಗಳನ್ನು, ನಮ್ಮೊಂದಿಗೇ ಗಾಳಿ-ನೀರು ಕುಡಿದವರನ್ನು ದೂರವಿಡುವ ಕೆಟ್ಟ ಪರಿಸ್ಥಿತಿ ಎದುರಾಗಿತ್ತು. ಸಾಮಾಜಿಕ ಸಮಾನತೆ ಇಲ್ಲದಿರುವ ಅಂಥವರಿಗಾಗಿ ಮೀಸಲಾತಿ ಕಲ್ಪಿಸಲಾಯಿತು. ಆದರೆ ಈ ರಾಜ್ಯ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಅದಿಂದು ಬೇರೆಯದ್ದೇ ದಿಕ್ಕು ಪಡೆದುಕೊಳ್ಳುತ್ತಿದೆ. ಮತಾಂತರಗೊಂಡವರಿಗೂ ಮೀಸಲಾತಿ ಕೊಡುವ ಪ್ರಯತ್ನ ನಡೆದಿದೆ ಎಂದು ಪ್ರಲ್ಹಾದ ಜೋಶಿ ತೀವ್ರ ಕಳವಳ ವ್ಯಕ್ತಪಡಿಸಿದರು.

ಮತಾಂಧರ ಪರವಿರುವ ಕೆಟ್ಟ ಪಕ್ಷ: ಕಾಂಗ್ರೆಸ್‌ ಪಾರ್ಟಿ ಇಂದು ಮತಾಂಧ ಮುಸಲ್ಮಾನರ ಪರವಾಗಿ ಇರುವಂತಹ ಒಂದು ಕೆಟ್ಟ ಮತಾಂಧ ಪಕ್ಷವಾಗಿದೆ. 25-30 ವರ್ಷಗಳಿಂದ ಈಚೆಗೆ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ತುಷ್ಟೀಕರಣದ ಪರಾಕಾಷ್ಠೆ ಎಲ್ಲೆ ಮೀರಿದೆ. ಹಾಗಾಗಿ ಇಂಥದ್ದೆಲ್ಲ ನಡೆಯುತ್ತಿದೆ ಎಂದು ಆರೋಪಿಸಿದರು.

ಮುಸ್ಲಿಂ ಸಮಾಜದಲ್ಲಿನ ಮತಾಂಧರು ಹುಬ್ಬಳ್ಳಿ ಪೊಲೀಸ್‌ ಠಾಣೆ ಸುಟ್ಟು ಹಾಕಿದರು. ಪೊಲೀಸರನ್ನು ಸುಡಲೆತ್ನಿಸಿದರು. ಕೆಜೆ ಹಳ್ಳಿ-ಡಿಜೆ ಹಳ್ಳಿ ಗಲಭೆ ನಡೆಸಿದರು. ಈ ಪ್ರಕರಣಗಳಲ್ಲಿ ಹೈಕೋರ್ಟ್‌ ಕಪಾಳಮೋಕ್ಷ ಮಾಡಿದರೂ ರಾಜ್ಯ ಕಾಂಗ್ರೆಸ್‌ ಸರ್ಕಾರ ಕೇಸ್‌ ಹಿಂಪಡೆದಿದೆ. ಈ ಮೂಲಕ ತಾನೊಂದು ಮತಾಂಧರ ಪರ ಪಕ್ಷ, ಸರ್ಕಾರ ಎಂಬುದನ್ನು ತೋರ್ಪಡಿಸಿದೆ ಎಂದು ಜೋಶಿ ವಾಗ್ದಾಳಿ ನಡೆಸಿದರು.

Pralhad joshi
ಸೆಪ್ಟೆಂಬರ್ 22 ರಿಂದ ಜಾತಿ ಗಣತಿ: ರಾಜ್ಯ ಸರ್ಕಾರ ಅಧಿಕೃತ ಆದೇಶ

ಧರ್ಮಸ್ಥಳಕ್ಕೆ ʼಬುಲ್ಡೋಜರ್‌ʼ ಎಂದವರ ಮೇಲೆ ಏಕಿಲ್ಲ ಕ್ರಮ?: ಮಸೀದಿ ಮೇಲಿಂದ ಕಲ್ಲು ಹೊಡೆಯುತ್ತಾರೆ. ವೀರೇಂದ್ರ ಹೆಗ್ಗಡೆ ಅವರ ಬಗ್ಗೆ, ಧರ್ಮಸ್ಥಳ ಬಗ್ಗೆ ಏನೇನೋ ಹೇಳುತ್ತಾರೆ. ಅಂಥ ಅದೆಷ್ಟು ಜನರನ್ನು ಬಂಧಿಸಿದಿರಿ? ಧರ್ಮಸ್ಥಳಕ್ಕೆ ಬುಲ್ಡೋಜರ್‌ ಹಚ್ಚಬೇಕು ಎಂದವರನ್ನು ಬಿಟ್ಟು ʼಮಸೀದಿಗೆ ಬುಲ್ಡೋಜರ್‌ ಹಚ್ಚಬೇಕುʼ ಎಂದವರ ವಿರುದ್ಧ ಕ್ರಮ ಕೈಗೊಳ್ಳುತ್ತೀರಿ. ಒಟ್ಟಿನಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಸಂಪೂರ್ಣ ಮತಾಂಧರ ಪರವಿರುವಂಥ ಕೆಟ್ಟ ಸರ್ಕಾರವಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com