
ಮೈಸೂರು: ನನಗೆ ಬೂಕರ್ ಪ್ರಶಸ್ತಿ ಬಂದ ಸಂದರ್ಭದಲ್ಲಿ ನನ್ನ ಆಪ್ತ ಗೆಳತಿ ನನ್ನನ್ನು ಮೈಸೂರು ಚಾಮುಂಡಿ ಬೆಟ್ಟಕ್ಕೆ ಕರೆದುಕೊಂಡು ಬರುವುದಾಗಿ ಹೇಳಿಕೊಂಡಿದ್ದಳು. ಇಂದು ಮೈಸೂರು ಚಾಮುಂಡಿ ದೇವಿಯೇ ನನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದಾಳೆ. ಇದು ನನ್ನ ಜೀವಮಾನದ ಸೌಭಾಗ್ಯ, ಸರ್ಕಾರ ದಸರಾ ಉದ್ಘಾಟನೆಗೆ ನನ್ನನ್ನು ಕರೆಸಿಕೊಂಡಿದ್ದಾಳೆ ಎಂದು ಮೈಸೂರು ದಸರಾಕ್ಕೆ ಪುಷ್ಪಾರ್ಚನೆ ಮೂಲಕ ಚಾಲನೆ ನೀಡಿದ ಬಳಿಕ ಬಾನು ಮುಷ್ತಾಕ್ ಹೇಳಿದರು.
ಈ ಬಾರಿಯ ದಸರಾ ಉದ್ಘಾಟನೆಗೆ ನನಗೆ ಸರ್ಕಾರ ಆಹ್ವಾನ ನೀಡಿದಾಗ ಹಲವು ವಿರೋಧ,ವಿಘ್ನಗಳು ಬಂದವು. ಆದರೆ ಅವೆಲ್ಲವನ್ನೂ ನಿವಾರಿಸಿ ಗಟ್ಟಿಯಾಗಿ ನಿಂತು ನನ್ನನ್ನು ಉದ್ಘಾಟನೆಗೆ ಆಹ್ವಾನಿಸಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಸರ್ಕಾರದ ಜನಪ್ರತಿನಿಧಿಗಳಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದರು.
ನಾವೆಲ್ಲರೂ ಒಂದೇ ಗಗನದ ಅಡಿಯ ಪಯಣಿಗರು ಇಲ್ಲಿ ಅರಳುವಂಥ ಹೂವುಗಳ ಸುಗಂಧಕ್ಕೆ ಮಿತಿಯಿಲ್ಲ, ಇಲ್ಲಿ ಯಾರನ್ನೂ ಹೊರತಲ್ಲ, ಇಲ್ಲಿ ಹಾಕಿರುವ ಗಡಿಗಳನ್ನು ನಾವೇ ಅಳಿಸಿ ಹಾಕಬೇಕು, ನಮ್ಮೊಳಗಿರುವ ದ್ವೇಷ, ಅಸಹಿಷ್ಣುತೆ ನಾಶವಾಗಲಿ ಎಂದರು.
ತಾಯಿ ಚಾಮುಂಡಿ ಧೈರ್ಯ, ಶಕ್ತಿ, ರಕ್ಷಕತ್ವದ ಸಂಕೇತ, ಇಂದಿನ ಜಗತ್ತು ಯುದ್ಧದ ಜ್ವಾಲೆಯಲ್ಲಿ ಸುಡುತ್ತಿದೆ, ಹಗೆಗಳಿಂದ ಅಲ್ಲ ಪ್ರೀತಿಯಿಂದ ಜಗವನ್ನು ಗೆಲ್ಲೋಣ
ನನ್ನ ಪುಸ್ತಕ ನಾಳೆ ಬಿಡುಗಡೆ
ನನ್ನ ಆತ್ಮಚರಿತ್ರೆಯ ಬರಹಗಳನ್ನೊಳಗೊಂಡ ಪುಸ್ತಕ ಕನ್ನಡ ಪುಸ್ತಕ ಪ್ರಾಧಿಕಾರದಿಂದ ನಾಳೆ ಬಿಡುಗಡೆಯಾಗುತ್ತಿದೆ. ಅದರಲ್ಲಿ ನಾನು ಹಿಂದೂ ಧರ್ಮದೊಂದಿಗೆ ಹೇಗೆ ಬಾಂಧವ್ಯ ಹೊಂದಿಕೊಂಡು ಇಷ್ಟು ವರ್ಷಗಳಿಂದ ಬಂದಿದ್ದೇನೆ ಎಂಬುದನ್ನು ವಿವರಿಸಿದ್ದೇನೆ ಎಂದರು.
Advertisement