
ಬೆಂಗಳೂರು: ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಸೆಕ್ಷನ್ 79(3)(b) ಅಡಿ ಟ್ವೀಟ್ ಗಳನ್ನು ನಿರ್ಬಂಧಿಸುವಂತೆ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶಗಳನ್ನು ಪ್ರಶ್ನಿಸಿ ಎಕ್ಸ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.
ನಿರ್ಬಂಧಿಸುವ ಆದೇಶ ನೀಡುವ ಕೇಂದ್ರ ಸರ್ಕಾರದ ಸೆನ್ಸಾರ್‌ಶಿಪ್(ಸಹಯೋಗ್) ಪೋರ್ಟಲ್, ತನ್ನ ವಿರುದ್ಧ ಬಲವಂತದ ಅಥವಾ ಪೂರ್ವಾಗ್ರಹ ಪೀಡಿತ ಕ್ರಮ ಕೈಗೊಳ್ಳದಂತೆ ತಡೆಯುವಂತೆ ಎಕ್ಸ್ ಕಾರ್ಪ್ ನ್ಯಾಯಾಲಯವನ್ನು ಕೋರಿತ್ತು.
ಸಾಮಾಜಿಕ ಮಾಧ್ಯಮವನ್ನು ನಿಯಂತ್ರಿಸುವುದು 'ಅಗತ್ಯ'. ವಿಶೇಷವಾಗಿ ಮಹಿಳೆ ಮತ್ತು ಮಕ್ಕಳ ಗೌರವ ಕಾಪಾಡಲು ಸಾಮಾಜಿಕ ಮಾಧ್ಯಮಗಳ ಮೇಲೆ ನಿಯಂತ್ರಣ ಅಗತ್ಯ. ಇಲ್ಲದಿದ್ದರೆ ಸಂವಿಧಾನದಲ್ಲಿ ನಿಗದಿಪಡಿಸಲಾದ ಘನತೆಯ ಹಕ್ಕನ್ನು ಹಳಿತಪ್ಪಿಸಲಾಗುತ್ತದೆ ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಹೇಳಿದೆ.
"ಮಾಹಿತಿ ಮತ್ತು ಸಂವಹನ, ಅದರ ಹರಡುವಿಕೆ ಅಥವಾ ವೇಗವನ್ನು ಯಾವತ್ತೂ ನಿಯಂತ್ರಿಸದೆ ಬಿಟ್ಟಿಲ್ಲ. ಇದು ನಿಯಂತ್ರಣದ ವಿಷಯವಾಗಿದೆ. ತಂತ್ರಜ್ಞಾನವು ಸಂದೇಶವಾಹಕರಿಂದ ಅಂಚೆ ಸಾಧನಗಳವರೆಗೆ, ವಾಟ್ಸಾಪ್, ಇನ್‌ಸ್ಟಾಗ್ರಾಮ್ ಮತ್ತು ಸ್ನ್ಯಾಪ್‌ಚಾಟ್‌ಗಳ ಯುಗದವರೆಗೆ ಅಭಿವೃದ್ಧಿ ಹೊಂದಿದಾಗ, ಎಲ್ಲವನ್ನೂ ಜಾಗತಿಕವಾಗಿ ಮತ್ತು ಸ್ಥಳೀಯವಾಗಿ ಆಡಳಿತಗಳಿಂದ ನಿಯಂತ್ರಿಸಲಾಗಿದೆ. ಸಾಮಾಜಿಕ ತಾಣಗಳ ಮೇಲೆ ನಿಯಂತ್ರಣ ಹೇರುವುದು ಈ ಕಾಲದ ಅತ್ಯಂತ ಅವಶ್ಯವಾಗಿದೆ" ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ದೇಶದ ನಾಗರಿಕರು ಮತ್ತು ಟ್ವೀಟರ್ ಮಧ್ಯೆ ಸಹಯೋಗ್ ಪೋರ್ಟಲ್ ಭರವಸೆ ಬೆಳಕಾಗಿ ಕೆಲಸ ಮಾಡಲಿದೆ ಎಂದು ಹೈಕೋರ್ಟ್ ಹೇಳಿದೆ. ದೇಶದಲ್ಲಿ ಸೈಬರ್ ಕ್ರೈಮ್ ಗಳನ್ನು ತಡೆಯುವ ವ್ಯವಸ್ಥೆಯಾಗಿ ಸಹಯೋಗ್ ಪೋರ್ಟಲ್ ಕೆಲಸ ಮಾಡಲಿದೆ.
ಹೈಕೋರ್ಟ್ ಆದೇಶ ಪ್ರಶ್ನಿಸಿ ಟ್ವೀಟರ್ ಅಥವಾ ಎಕ್ಸ್ ಈಗ ಸುಪ್ರೀಂಕೋರ್ಟ್ ಮೆಟ್ಟಿಲೇರಬಹುದು. ಈ ಅವಕಾಶ ಕಾನೂನಿನಲ್ಲಿದೆ.
Advertisement