
ಕೋಲಾರ: ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರಿಂದ ಮನನೊಂದ ಪ್ರೇಮಿಗಳು ರೈಲಿಗೆ ತಲೆಕೊಟ್ಟು ಆತಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಬ್ಯಾಟರಾಯನಹಳ್ಳಿ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಮಾಲೂರು ತಾಲ್ಲೂಕಿನ ಶೆಟ್ಟಹಳ್ಳಿ ನಿವಾಸಿಗಳಾದ ಸತೀಶ್ (19) ಹಾಗೂ ಶ್ವೇತಾ (18) ಆತಹತ್ಯೆಗೆ ಶರಣಾದ ಪ್ರೇಮಿಗಳು.
ಸತೀಶ್ ಐಟಿಐ ವ್ಯಾಸಂಗ ಮಾಡಿದ್ದು, ಶ್ವೇತಾ ಮೊದಲ ವರ್ಷದ ಬಿಎ ವ್ಯಾಸಂಗ ಮಾಡುತ್ತಿದ್ದಳು. ಇವರಿಬ್ಬರು ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿಸುತ್ತಿದ್ದರು. ಮನೆಯವರ ಒಪ್ಪಿಗೆ ಪಡೆದೇ ಮದುವೆ ಆಗುವುದಕ್ಕೆ ನಿರ್ಧರಿಸಿದ್ದರು ಎನ್ನಲಾಗಿದೆ.
ಅದರಂತೆ ಪರಸ್ಪರ ಪ್ರೀತಿಯನ್ನು ಪೋಷಕರ ಬಳಿ ಇಬ್ಬರೂ ಹೇಳಿಕೊಂಡಿದ್ದಾರೆ. ಇವರಿಬ್ಬರೂ ಬೇರೆ ಬೇರೆ ಜಾತಿಗೆ ಸೇರಿದ್ದವರಾಗಿದ್ದರಿಂದ ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ನಿನ್ನೆ ಸತೀಶ್ ತನ್ನ ಹುಟ್ಟುಹಬ್ಬವನ್ನು ಸ್ನೇಹಿತರೊಂದಿಗೆ ಆಚರಿಸಿಕೊಂಡಿದ್ದಾನೆ. ಇಂದು ಬೆಳಗ್ಗೆ ಇಬ್ಬರು ಮನೆಯಿಂದ ಹೊರಬಂದಿದ್ದಾರೆ. ನಂತರ ಸತೀಶ್ ಬೈಕ್‌ನಲ್ಲಿ ತನ್ನ ಲವರ್ ಶ್ವೇತಾಳನ್ನು ಕರೆದುಕೊಂಡು ಮಾಲೂರಿನ ಬ್ಯಾಟರಾಯನಹಳ್ಳಿ ರೈಲ್ವೆ ನಿಲ್ದಾಣದ ಬಳಿಹೋಗಿ ಬೈಕ್ ನಿಲ್ಲಿಸಿದ್ದಾನೆ. ನಂತರ ಕೋಲಾರದಿಂದ ಬೆಂಗಳೂರಿಗೆ ಹೊರಡುವ ರೈಲು ಬರುವುದನ್ನೇ ಕಾದು ನಿಂತಿದ ಪ್ರೇಮಿಗಳು ರೈಲು ಬರುತ್ತಿದ್ದಂತೆ 6.30 ರ ಸುಮಾರಿನಲ್ಲಿ ಇಬ್ಬರೂ ಕೈ-ಕೈ ಹಿಡಿದು ಹಳಿ ಮೇಲೆ ಹಾರಿ ರೈಲಿಗೆ ಸಿಕ್ಕಿ ಆತಹತ್ಯೆ ಮಾಡಿಕೊಂಡಿದ್ದಾರೆ.
ಸುದ್ದಿ ತಿಳಿದು ಕಂಟೋನೆಂಟ್ ರೈಲ್ವೆ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದು, ಇಬ್ಬರ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿ ಅವರ ಪೋಷಕರುಗಳಿಗೆ ಮಾಹಿತಿ ರವಾನಿಸಿದ್ದಾರೆ. ಈ ಬಗ್ಗೆ ಕಂಟೋನೆಂಟ್ ರೈಲ್ವೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
Advertisement