ವಿಜ್ಞಾನದ ಮೂಲಕ ಭಾರತೀಯ ಶಿಕ್ಷಣದಲ್ಲಿ ಹೊಸ ದೃಷ್ಟಿ: ಏಕೀಕೃತ ದೃಷ್ಟಿಗೆ ಪರಮ್ ಫೌಂಡೇಶನ್‌ ಚಾಲನೆ

ರಾಷ್ಟ್ರೀಯ ಶಿಕ್ಷಣ ನೀತಿ 2020ರ ಆಶಯಗಳಿಗೆ ಅನುಗುಣವಾಗಿ, ಈ ಉಪಕ್ರಮವು ಕಂಠಪಾಠ ಶಿಕ್ಷಣದಿಂದ ದೂರಸರಿದು, ವಿದ್ಯಾರ್ಥಿಗಳಲ್ಲಿ ಚಿಂತನೆ ಹಾಗೂ ಅನ್ವೇಷಣಾ ಮನೋಭಾವವನ್ನು ಬೆಳೆಸಲು ಉತ್ತೇಜಿಸುತ್ತದೆ.
Param Foundation
ಪರಮ್‌ ಫೌಂಡೇಶನ್‌ ಉಪಕ್ರಮದ ಆರನೇ ಆವೃತ್ತಿ
Updated on

ಬೆಂಗಳೂರು: ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಯನ್ನು ಪರಮ್‌ ಫೌಂಡೇಶನ್‌ ತರುತ್ತಿದೆ. ವಿಜ್ಞಾನಕ್ಕಾಗಿ ಏಕೀಕೃತ ದೃಷ್ಟಿ ಎಂಬ ಮಹತ್ವಾಕಾಂಕ್ಷೆಯ ಉಪಕ್ರಮದ ಆರನೇ ಆವೃತ್ತಿಯನ್ನು ಪರಮ್‌ ಫೌಂಡೇಶನ್‌ ಅನಾವರಣಗೊಳಿಸಿದೆ. ಮಕ್ಕಳನ್ನು ಕೇಂದ್ರವಾಗಿಟ್ಟುಕೊಂಡು ಅನುಭವ ಆಧಾರಿತ ಕಲಿಕೆಗೆ ಒತ್ತು ನೀಡುವ ಮೂಲಕ ತರಗತಿಗಳನ್ನು ಜ್ಞಾನದ ಅನ್ವೇಷಣಾ ಕೇಂದ್ರಗಳಾಗಿ ಪರಿವರ್ತಿಸುವುದು ಈ ಉಪಕ್ರಮದ ಮುಖ್ಯ ಗುರಿಯಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿ 2020ರ ಆಶಯಗಳಿಗೆ ಅನುಗುಣವಾಗಿ, ಈ ಉಪಕ್ರಮವು ಕಂಠಪಾಠ ಶಿಕ್ಷಣದಿಂದ ದೂರಸರಿದು, ವಿದ್ಯಾರ್ಥಿಗಳಲ್ಲಿ ಚಿಂತನೆ ಹಾಗೂ ಅನ್ವೇಷಣಾ ಮನೋಭಾವವನ್ನು ಬೆಳೆಸಲು ಉತ್ತೇಜಿಸುತ್ತದೆ. ವಿಜ್ಞಾನವನ್ನು ಕೇವಲ ಒಂದು ವಿಷಯವಾಗಿ ನೋಡದೆ, ಅದನ್ನು ಕಲಿಕೆಯ ಪ್ರಮುಖ ಭಾಗವಾಗಿಸುವ ಮೂಲಕ ನೈಜ ಪ್ರಪಂಚದ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗುವುದು.

ಈ ದೃಷ್ಟಿಕೋನವು ತರಗತಿಗಳಲ್ಲಿ ಪ್ರಾಯೋಗಿಕ ಯೋಜನೆಗಳು, ಸಂವಾದಾತ್ಮಕ ಕಲಿಕೆ, ಕಡಿಮೆ ವೆಚ್ಚದ ಪ್ರಯೋಗಾಲಯಗಳು ಮತ್ತು ಮೌಲ್ಯಮಾಪನ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುತ್ತದೆ. ಸ್ಥಳೀಯ ನೀರಿನ ಸಮಸ್ಯೆ, ತ್ಯಾಜ್ಯ ನಿರ್ವಹಣೆಯಿಂದ ಹಿಡಿದು ಹವಾಮಾನ ಬದಲಾವಣೆಯಂತಹ ಜಾಗತಿಕ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ವಿದ್ಯಾರ್ಥಿಗಳಿಗೆ ಕೌಶಲ್ಯಗಳನ್ನು ಕಲಿಸುವುದು ಇದರ ಉದ್ದೇಶವಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಂಹಿತಾ ಅಕಾಡೆಮಿಯ ಪ್ರಾಂಶುಪಾಲೆ ಶ್ರೀಮತಿ ಕೆಎಸ್ ಜ್ಯೋತಿ ಅವರು, ವಿಜ್ಞಾನ ಕೇವಲ ಒಂದು ವಿಷಯವಲ್ಲ, ಅದೊಂದು ಜೀವನ ವಿಧಾನ. ಮಕ್ಕಳು ಪ್ರಯೋಗಗಳಲ್ಲಿ ಮತ್ತು ಸಮುದಾಯದ ಜೊತೆ ನೇರವಾಗಿ ತೊಡಗಿಸಿಕೊಂಡಾಗ, ಅವರು ಕೇವಲ ಜ್ಞಾನ ಗಳಿಸುವುದಿಲ್ಲ, ಬದಲಾಗಿ ಸ್ಥೈರ್ಯ, ತಾರ್ಕಿಕತೆ ಮತ್ತು ಜವಾಬ್ದಾರಿಯನ್ನು ಕಲಿಯುತ್ತಾರೆ. ಇಂತಹ ಕಲಿಕೆಯೇ ಭಾರತದ ಭವಿಷ್ಯವನ್ನು ರೂಪಿಸುತ್ತದೆ ಎಂದು ಹೇಳಿದರು.

ಈ ಉಪಕ್ರಮವು ಶಿಕ್ಷಕರ ಪಾತ್ರವನ್ನು ಗುರುತಿಸಿ, ಅವರ ಸಬಲೀಕರಣಕ್ಕೆ ವಿಶೇಷ ಒತ್ತು ನೀಡುತ್ತದೆ. ಶಿಕ್ಷಕರಿಗೆ ಪ್ರಾಯೋಗಿಕ ತರಬೇತಿ, ಮಾರ್ಗದರ್ಶನ ಮತ್ತು ಆಧುನಿಕ ಮೌಲ್ಯಮಾಪನ ವಿಧಾನಗಳ ಬಗ್ಗೆ ತಿಳುವಳಿಕೆ ನೀಡುವ ಮೂಲಕ ಅವರನ್ನು ಕೇವಲ ಬೋಧಕರನ್ನಾಗಿಸದೇ, ಜ್ಞಾನದ ಸಹವರ್ತಿಗಳಾಗಿ ರೂಪಿಸುವ ಗುರಿಯನ್ನು ಹೊಂದಿದೆ. ಇದಕ್ಕಾಗಿ ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು ಮತ್ತು ಎನ್‌ಜಿಒಗಳ ಜೊತೆ ಪಾಲುದಾರಿಕೆ ಮಾಡಿಕೊಂಡಿದ್ದು, ಈ ವ್ಯವಸ್ಥೆಯನ್ನು ಬಲಗೊಳಿಸುವ ನಿರೀಕ್ಷೆ ಇದೆ.

ಇನ್ನು, ಪ್ರಯೋಗ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಶನ್ ರಿಸರ್ಚ್‌ನ ಸಂಸ್ಥಾಪಕರಾದ ಡಾ ಎಚ್ಎಸ್ ನಾಗರಾಜ ಅವರು ಮಾತನಾಡಿ, ನೀತಿ, ಬೋಧನೆ ಮತ್ತು ಅಭ್ಯಾಸ ಒಟ್ಟಾಗಿ ಸಾಗಬೇಕು. ರಾಷ್ಟ್ರೀಯ ಶಿಕ್ಷಣ ನೀತಿ 2020ರ ಚೌಕಟ್ಟಿನಲ್ಲಿ, ಪಠ್ಯಕ್ರಮದಿಂದ ಹಿಡಿದು ಶಿಕ್ಷಕರ ತರಬೇತಿಯವರೆಗೆ ಎಲ್ಲದರಲ್ಲೂ ಸುಸಂಬದ್ಧತೆ ಬೇಕು. ಆಗ ಮಾತ್ರ ನಾವು ಅಂಕಗಳನ್ನು ಮೀರಿ, ಮಕ್ಕಳಲ್ಲಿನ ಕುತೂಹಲ, ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ಮತ್ತು ಸಾಮಾಜಿಕ ಪ್ರಜ್ಞೆಯನ್ನು ಯಶಸ್ಸಿನ ಅಳತೆಗೋಲಾಗಿ ನೋಡಲು ಸಾಧ್ಯ ಎನ್ನುವ ಮೂಲಕ ವ್ಯವಸ್ಥಿತ ಬೆಂಬಲದ ಅಗತ್ಯವನ್ನು ಒತ್ತಿ ಹೇಳಿದರು.

ವಿಜ್ಞಾನಕ್ಕಾಗಿ ಏಕೀಕೃತ ದೃಷ್ಟಿಯ ಪ್ರಮುಖ ಅಂಶಗಳು:

  • ಪೂರ್ವ ನಿಯೋಜಿತ ತರಗತಿ ಮಾದರಿಯಾಗಿ ಪ್ರಶ್ನೆ-ಆಧಾರಿತ ಕಲಿಕೆಗೆ ಆದ್ಯತೆ.

  • ಕಡಿಮೆ ಖರ್ಚಿನ ಪ್ರಯೋಗಾಲಯಗಳು ಮತ್ತು ಆಟಿಕೆ ಆಧಾರಿತ ಬೋಧನಾ ಪದ್ಧತಿಯಿಂದ ಸರ್ವರಿಗೂ ವಿಜ್ಞಾನದ ಶಿಕ್ಷಣ.

  • ಮಕ್ಕಳನ್ನು ಕೇಂದ್ರವಾಗಿಟ್ಟುಕೊಂಡಿರುವ ಆಟ, ಗುಂಪು ಚಟುವಟಿಕೆಗಳು ಮತ್ತು ನಿರಂತರ ಮೌಲ್ಯಮಾಪನ.

  • ಶಿಕ್ಷಕರ ಅಭಿವೃದ್ಧಿ ಮತ್ತು ಸಮುದಾಯದ ಸಹಭಾಗಿತ್ವಕ್ಕೆ ಒತ್ತು.

  • ಪರೀಕ್ಷೆಯ ಅಂಕಗಳನ್ನು ಮೀರಿ ನೈಜ ಪ್ರಪಂಚದ ಕಲಿಕೆಯ ಫಲಿತಾಂಶಗಳಿಗೆ ಮಾನ್ಯತೆ.

ಪರಮ್ ಫೌಂಡೇಶನ್‌ನ ಸಲಹಾ ಮಂಡಳಿಯ ಸಂಚಾಲಕರಾದ ಅರುಣ್ ಸೀತಾರಾಮ್ ಅವರು, ಇದು ಸಾಮೂಹಿಕ ಕಲ್ಪನೆಗೆ ಒಂದು ಕರೆ. ಭಾರತದ ತರಗತಿಗಳು ಸಂತೋಷ, ಅನ್ವೇಷಣೆ ಮತ್ತು ನಾಗರಿಕ ಜವಾಬ್ದಾರಿಯ ಕೇಂದ್ರಗಳಾಗಬೇಕು. ಈ ಪರಿವರ್ತನೆಗೆ ವಿಜ್ಞಾನವು ಅತ್ಯುತ್ತಮ ಮಾಧ್ಯಮವಾಗಿದೆ, ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com