ಬೆಂಗಳೂರು ಸಮೀಪ ವರ್ತೂರು ನರಸೀಪುರ ಬಳಿ 1,200 ಕೋ.ಮೌಲ್ಯದ 350 ಎಕರೆ ಭೂಕಬಳಿಕೆ, ಭಾರೀ ಅಕ್ರಮ: ರಾಜ್ಯ ಸಂಪುಟ ಸಚಿವರು ಭಾಗಿ !

ಹಾಲಿ ಸಂಪುಟದ ಸಚಿವರೊಂದಿಗೆ ಸಂಬಂಧ ಹೊಂದಿರುವ ಬೆಂಗಳೂರು ಡಿವಿನಿಟಿ ಎಲ್ ಎಲ್ ಪಿ ಎಂಬ ಬೇನಾಮಿ ಸಂಸ್ಥೆ ರಿಯಲ್ ಎಸ್ಟೇಟ್ ಪ್ರಮುಖ ಕಂಪೆನಿ ಡಿಎಲ್‌ಎಫ್ ಮತ್ತು ಸ್ಥಳೀಯ ರಾಜಕೀಯ ದಲ್ಲಾಳಿಗಳೊಂದಿಗೆ ಶಾಮೀಲಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರಾಜ್ಯ ಸಚಿವ ಸಂಪುಟದ ಸಚಿವರೊಬ್ಬರ ವಿರುದ್ಧ ಭಾರೀ ಪ್ರಮಾಣದ ಭೂಕಬಳಿಕೆ ಆರೋಪ ಕೇಳಿಬಂದಿದೆ. ಬೆಂಗಳೂರಿನ ಪ್ರಮುಖ ರಿಯಲ್ ಎಸ್ಟೇಟ್ ಕಂಪೆನಿ ಮೂಲಕ ಸುಮಾರು 1, 200 ಕೋಟಿ ರೂಪಾಯಿ ಮೌಲ್ಯದ 350 ಎಕರೆಗೂ ಹೆಚ್ಚು ಬೃಹತ್ ಭೂಕಬಳಿಕೆ ಹಗರಣವು ರಾಜ್ಯಾದ್ಯಂತ ಸಂಚಲನ ಮೂಡಿಸಿದೆ.

ಹಾಲಿ ಸಂಪುಟದ ಸಚಿವರೊಂದಿಗೆ ಸಂಬಂಧ ಹೊಂದಿರುವ ಬೆಂಗಳೂರು ಡಿವಿನಿಟಿ ಎಲ್ ಎಲ್ ಪಿ ಎಂಬ ಬೇನಾಮಿ ಸಂಸ್ಥೆ ರಿಯಲ್ ಎಸ್ಟೇಟ್ ಪ್ರಮುಖ ಕಂಪೆನಿ ಡಿಎಲ್‌ಎಫ್ ಮತ್ತು ಸ್ಥಳೀಯ ರಾಜಕೀಯ ದಲ್ಲಾಳಿಗಳೊಂದಿಗೆ ಶಾಮೀಲಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಈ ಬಗ್ಗೆ ಸ್ಪಷ್ಟ ಪುರಾವೆಗಳು ಸಿಕ್ಕಿದ ನಂತರ ಎಚ್ಚೆತ್ತುಕೊಂಡ ಇನ್ಸ್‌ಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಷನ್ (IGR) ಉನ್ನತ ಮಟ್ಟದ ಸಮಿತಿಯನ್ನು ತನಿಖೆಗೆ ರಚಿಸಿದ್ದಾರೆ, ಈ ಸಮಿತಿಯು, ಬೆಂಗಳೂರು ಡಿವಿನಿಟಿ ಎಲ್‌ಎಲ್‌ಪಿ ಕಂಪೆನಿಯು ಡಿಎಲ್‌ಎಫ್ ಜೊತೆ ಪಾಲುದಾರಿಕೆಯಲ್ಲಿ ನಕಲಿ ಮಾಲೀಕತ್ವ ದಾಖಲೆಗಳನ್ನು ಪಡೆಯಲು ನಕಲಿ ದಾಖಲೆಗಳನ್ನು ಸೃಷ್ಟಿಸಿದೆ ಎಂದು ಜುಲೈ 29ರಂದೇ ದೃಢಪಡಿಸಿತ್ತು.

Representational image
ಭೂಕಬಳಿಕೆ ಪ್ರಕರಣ: ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ತಡೆ

ಜಮೀನು ಇರುವುದೆಲ್ಲಿ?

ಈ ಭೂಮಿ ಬೆಂಗಳೂರು ಸಮೀಪ ತಾವರೆಕೆರೆ ಹೋಬಳಿಯ ವರ್ತೂರು ನರಸೀಪುರ ಗ್ರಾಮದಲ್ಲಿ ಸರ್ವೇ ನಂಬರ್ 1-31 ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿದೆ, ಇದು ಸುಮಾರು 350 ಎಕರೆ ವಿಸ್ತೀರ್ಣ ಹೊಂದಿದೆ. ಮೂಲತಃ ನಿವೇಶನಗಳನ್ನು ವರ್ಷಗಳ ಹಿಂದೆ 2,500 ಕ್ಕೂ ಹೆಚ್ಚು ಮಧ್ಯಮ ಮತ್ತು ಕಡಿಮೆ ಆದಾಯದ ಜನರು ಖರೀದಿಸಿಕೊಂಡಿದ್ದರು. ಇಲ್ಲಿ 30x40 ಚದರ ಅಡಿ ಮತ್ತು 20x30 ಚದರ ಅಡಿ ಅಳತೆಯ ನಿವೇಶನಗಳನ್ನು ಸಣ್ಣ ಡೆವಲಪರ್‌ಗಳ ಮೂಲಕ ಪ್ರತಿ ಸೈಟ್‌ಗೆ ಸುಮಾರು 1.5 ಲಕ್ಷ ರೂಪಾಯಿಗಳಂತೆ ಖರೀದಿಸಲಾಗಿತ್ತು.

ಸ್ಥಳೀಯ ರಾಜಕೀಯ ದಲ್ಲಾಳಿಗಳು ರೂಪಿಸಿದ "ರಾಜಿ ಸೂತ್ರ"ದ ಮೂಲಕ 2021 ರಲ್ಲಿ, ಬೆಂಗಳೂರು ಡಿವಿನಿಟಿ ಎಲ್‌ಎಲ್‌ಪಿ ಇದ್ದಕ್ಕಿದ್ದಂತೆ ಈ ವ್ಯವಹಾರದಲ್ಲಿ ಪ್ರವೇಶವಾಯಿತು. ಡಿಎಲ್‌ಎಫ್‌ನ ಮಾಲೀಕತ್ವವನ್ನು ಪ್ರತಿನಿಧಿಸುವುದಾಗಿ ಹೇಳಿಕೊಂಡು, ಬೆಂಗಳೂರು ಡಿವಿನಿಟಿ ಎಲ್‌ಎಲ್‌ಪಿ ಹಿರಿಯ ಕಾಂಗ್ರೆಸ್ ನಾಯಕರ ಹೆಸರುಗಳನ್ನು ಬಳಸಿಕೊಂಡು ಮೂಲ ಖರೀದಿದಾರರನ್ನು ಬೆದರಿಸಿ ಭೂಮಿಯ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿತು ಎಂಬ ಆರೋಪ ಕೇಳಿಬರುತ್ತಿದೆ.

ಹಗರಣ ಹೇಗೆ ಬಯಲಾಯಿತು?

ಇಲ್ಲಿ ನಿವೇಶನಗಳನ್ನು ಹೊಂದಿರುವ ಕೆಲವು ಮಾಲೀಕರು ಧೈರ್ಯ ಮಾಡಿ ಮಾಹಿತಿ ಹಕ್ಕು (RTI) ಅರ್ಜಿಗಳನ್ನು ಸಲ್ಲಿಸಿದಾಗ ವಂಚನೆ ಬಹಿರಂಗವಾಗಿದೆ. ಡಿಎಲ್‌ಎಫ್‌ಗೆ ಭೂಮಿಯ ಮೇಲೆ ಯಾವುದೇ ಕಾನೂನುಬದ್ಧ ಮಾಲೀಕತ್ವ ಹೊಂದಿಲ್ಲ ಎಂದು ಕೇಳಿಬಂತು. ಡಿಎಲ್‌ಎಫ್ ಮತ್ತು ಬೆಂಗಳೂರು ಡಿವಿನಿಟಿ ಎಲ್‌ಎಲ್‌ಪಿ ನಡುವಿನ 2018-2019 ಒಪ್ಪಂದದ ಹಕ್ಕುಗಳ ಹೊರತಾಗಿಯೂ, ಅಂತಹ ಯಾವುದೇ ಮೆಮೊ ಅಥವಾ ಕಾನೂನು ವರ್ಗಾವಣೆ ಇಲ್ಲ ಎಂದು RTI ಮೂಲಕ ತಿಳಿದುಬಂತು.

ನಕಲಿ ದಾಖಲೆ

ಐಜಿಆರ್ ಕೆಎ ದಯಾನಂದರಿಂದ ದೆಹಲಿಗೆ ಬಂದ ಔಪಚಾರಿಕ ಪತ್ರದಲ್ಲಿ (ಫೈಲ್ ಸಂಖ್ಯೆ. ಎಫ್.10(6)/ಇತರೆ/ಸಿಒಎಸ್(ಹೆಚ್‌ಕ್ಯೂ)/2016/2168, ದಿನಾಂಕ ಮೇ 5, 2025) ಡಿಎಲ್‌ಎಫ್‌ಗೆ ಭೂಮಿಯ ಮೇಲೆ ಯಾವುದೇ ಕಾನೂನುಬದ್ಧ ಹಕ್ಕು ಇಲ್ಲ ಎಂದು ಸ್ಪಷ್ಟವಾಗಿ ದೃಢಪಡಿಸಿದೆ. ಮಾಲೀಕತ್ವದ ದಾಖಲೆಗಳು ಮತ್ತು ಅದಕ್ಕೆ ಪೂರಕವಾಗಿ ಸಂಸ್ಥೆ ಸಲ್ಲಿಸಿದ ದಾಖಲೆಗಳು ನಕಲಿ ಎಂದು ದೃಢವಾಯಿತು.

ಬೆಂಗಳೂರು ಡಿವಿನಿಟಿ ಎಲ್‌ಎಲ್‌ಪಿ, 1908 ರ ಭಾರತೀಯ ನೋಂದಣಿ ಕಾಯ್ದೆಯ ಸೆಕ್ಷನ್ 67 ರ ಅಡಿಯಲ್ಲಿ ದೆಹಲಿಯಲ್ಲಿ ನೋಂದಾಯಿಸಲಾಗಿದೆ ಎಂದು ಹೇಳಿಕೊಂಡಾಗ ಇದರಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂತು. ಕಳೆದ ಆಗಸ್ಟ್ 12ರಂದು ನಡೆದ ಐಜಿಆರ್ ಪರಿಶೀಲನಾ ಸಭೆಯಲ್ಲಿ, ಸಂಸ್ಥೆ ಹೇಳಿಕೊಂಡಿರುವ ಹಕ್ಕು ಸಂಪೂರ್ಣವಾಗಿ ವಂಚನೆ ಎಂದು ತಿಳಿದುಬಂದಿದೆ.

ದೆಹಲಿಯಲ್ಲಿ ದಾಖಲೆಯೇ ಆಗಿಲ್ಲ !

ಕಂಪೆನಿ ದೆಹಲಿಯಲ್ಲಿ ನೋಂದಣಿಯನ್ನೇ ಮಾಡಿಕೊಂಡಿಲ್ಲ. ಬದಲಾಗಿ, ನಕಲಿ ದಾಖಲೆಗಳನ್ನು ಬೆಂಗಳೂರಿನ ಕಚೇರಿಯಲ್ಲಿ ತಯಾರಿಸಲಾಗಿದೆ. JINOJA/OSD/02/2020-21 ರಿಂದ JINOJA/OSD/17/2020-21 ವರೆಗಿನ ಮೆಮೊ ಸಂಖ್ಯೆಗಳು ನಕಲಿಯಾಗಿವೆ. ಈ ಮೆಮೊಗಳನ್ನು ಮೊನ್ನೆ ಸೆಪ್ಟೆಂಬರ್ 20ರಂದು RGN 469/2024-25 E 37381 ಅಡಿಯಲ್ಲಿ ಕರ್ನಾಟಕ ನೋಂದಣಿ ಕಾಯ್ದೆ, 1989 ಮತ್ತು ಅನ್ವಯವಾಗುವ ಕೇಂದ್ರ ಕಾನೂನುಗಳ ನಿಬಂಧನೆಗಳ ಅಡಿಯಲ್ಲಿ ಅಧಿಕೃತವಾಗಿ ರದ್ದುಗೊಳಿಸಲಾಗಿದೆ.

ವಂಚನೆಗೊಳಗಾಗಿರುವ ನಿವೇಶನ ಖರೀದಿದಾರರು

ಇಲ್ಲಿ ನಿವೇಶನಗಳನ್ನು ಖರೀದಿಸಿದವರು ಮತ್ತು ಡೆವಲಪರ್‌ಗಳು ಆತಂಕಕ್ಕೊಳಗಾಗಿದ್ದಾರೆ. ತಮಗಾದ ವಂಚನೆಯನ್ನು ಹೇಳಿಕೊಳ್ಳುತ್ತಿರುವುದರಿಂದ ಅನೇಕರು ರಾಜಕೀಯ ಕಾರ್ಯಕರ್ತರಿಂದ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ಇಲ್ಲಿ ಪ್ರಭಾವಿ ಸಚಿವರು ಭಾಗಿಯಾಗಿರುವುದರಿಂದ ಅವರ ಪ್ರಭಾವದಿಂದ ಕಾನೂನು ಜಾರಿ ಮತ್ತು ನ್ಯಾಯಾಂಗ ಪ್ರಕ್ರಿಯೆಗಳೇ ಬುಡಮೇಲು ಆಗಬಹುದು ಎಂದು ನಿವಾಸಿಗಳು ಭಯಭೀತರಾಗಿದ್ದಾರೆ. ಅಧಿಕಾರಿಗಳು ತೀವ್ರ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ, ಸಚಿವರು ತನಿಖೆಗಳನ್ನು ಹಳಿತಪ್ಪಿಸಬಹುದು ಮತ್ತು ಅಪರಾಧಿಗಳನ್ನು ರಕ್ಷಿಸಬಹುದು ಎಂದು IGR ಕಚೇರಿಯ ಮೂಲಗಳೇ ಒಪ್ಪಿಕೊಳ್ಳುತ್ತವೆ.

2018 ರಲ್ಲಿ ರಚನೆಯಾದ ವರ್ತೂರು ನರಸೀಪುರ ನಿವೇಶನ ಮಾಲೀಕರ ಕಲ್ಯಾಣ ಸಂಘವು ಈ ಹಿಂದೆ ನ್ಯಾಯಾಲಯದ ಮೊರೆ ಹೋಗಿ ಯಥಾಸ್ಥಿತಿ ಆದೇಶವನ್ನು ಪಡೆದುಕೊಂಡಿತ್ತು. ಆದರೆ, ರಾಜಕೀಯ ಒತ್ತಡದ ಅಡಿಯಲ್ಲಿ ಸ್ಪಷ್ಟೀಕರಣ ದಾಖಲೆಗಳು ಮತ್ತು ರದ್ದತಿ ಆದೇಶಗಳನ್ನು ರದ್ದುಪಡಿಸಬಹುದು ಎಂಬ ಭಯ, ಆತಂಕದಲ್ಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com