ಹಿಂದಿ ಪ್ರಚಾರ ಸಭೆ ವಿರೋಧಿಸಿ ಬೆಂಗಳೂರಿನ ಹೊಟೇಲ್ ಗೆ ನುಗ್ಗಿದ 41 ಮಂದಿ ಕರವೇ ಕಾರ್ಯಕರ್ತರು ಅರೆಸ್ಟ್: 14 ದಿನ ನ್ಯಾಯಾಂಗ ಬಂಧನ-Video

ಕಾರ್ಯಕ್ರಮದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಸಭೆಯು ಹಿಂದಿಯೇತರ ಮಾತನಾಡುವ ರಾಜ್ಯಗಳ ಮೇಲೆ ಹಿಂದಿ ಹೇರುವ ಪ್ರಯತ್ನ ಮಾಡುತ್ತಿದೆ ಎಂದು ಕಾರ್ಯಕರ್ತರು ಆರೋಪಿಸಿದರು.
Pro kannada group activists protest
ಕರವೇ ಕಾರ್ಯಕರ್ತರ ಪ್ರತಿಭಟನೆ
Updated on

ಬೆಂಗಳೂರು: ಹಿಂದಿ ದಿವಸ್ ಕಾರ್ಯಕ್ರಮವನ್ನು ವಿರೋಧಿಸಿ ಇಲ್ಲಿನ ಪಂಚತಾರಾ ಹೋಟೆಲ್‌ಗೆ ಬಲವಂತವಾಗಿ ನುಗ್ಗಿ ಗದ್ದಲ ಎಬ್ಬಿಸಿದ ಆರೋಪದ ಮೇಲೆ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಪರ ಸಂಘಟನೆಯ 41 ಮಂದಿ ಸದಸ್ಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಗೃಹ ವ್ಯವಹಾರಗಳ ಸಚಿವಾಲಯದ ರಾಜಭಾಷಾ ಸಮಿತಿಯು ಹೋಟೆಲ್‌ನಲ್ಲಿ "ಹಿಂದಿ ಪ್ರಚಾರ ಸಭೆ"ಯನ್ನು ನಿನ್ನೆ ಆಯೋಜಿಸಿತ್ತು, ಇದರಲ್ಲಿ ಆರು ಸಂಸದರು ಭಾಗವಹಿಸಿದ್ದರು, ಆಗ ಕನ್ನಡ ಪರ ಸಂಘಟನೆಯ ಸದಸ್ಯರು ಒಳಗೆ ನುಗ್ಗಿದರು ಎಂದು ಮೂಲಗಳು ತಿಳಿಸಿವೆ.

ಕಾರ್ಯಕ್ರಮದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಸಭೆಯು ಹಿಂದಿಯೇತರ ಮಾತನಾಡುವ ರಾಜ್ಯಗಳ ಮೇಲೆ ಹಿಂದಿ ಹೇರುವ ಪ್ರಯತ್ನ ಮಾಡುತ್ತಿದೆ ಎಂದು ಕಾರ್ಯಕರ್ತರು ಆರೋಪಿಸಿದರು.

ನಿನ್ನೆ ಆಗಿದ್ದೇನು?

ಪೊಲೀಸ್ ಹೇಳಿಕೆಯ ಪ್ರಕಾರ, ಅಧಿಕೃತ ಭಾಷೆಯ ಸಂಸದೀಯ ಸಮಿತಿಯು ಸೆಪ್ಟೆಂಬರ್ 23 ರಿಂದ 25 ರವರೆಗೆ ಇಲ್ಲಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಹೋಟೆಲ್‌ನಲ್ಲಿ ಸಭೆಯನ್ನು ಆಯೋಜಿಸಿತ್ತು. ಸಭೆಯ ಕೊನೆಯ ದಿನದಂದು, ಅಧಿವೇಶನವು ಬೆಳಿಗ್ಗೆ 9.30 ಕ್ಕೆ ಪ್ರಾರಂಭವಾಯಿತು.

ಬೆಳಗ್ಗೆ 10.45 ರಿಂದ 11 ಗಂಟೆಯ ಸುಮಾರಿಗೆ, ಸುಮಾರು 30 ರಿಂದ 40 ಮಂದಿ ಕನ್ನಡಪರ ಸಂಘಟನೆಯ ಸದಸ್ಯರು ಸಭೆಯ ಕಾರ್ಯಸೂಚಿಯನ್ನು ವಿರೋಧಿಸಿ ಅಕ್ರಮವಾಗಿ ಸ್ಥಳಕ್ಕೆ ಪ್ರವೇಶಿಸಿ, ಹಾಜರಿದ್ದ ಸರ್ಕಾರಿ ಅಧಿಕಾರಿಗಳ ಕೆಲಸಕ್ಕೆ ಅಡ್ಡಿಪಡಿಸಿ, ಗೊಂದಲ ಸೃಷ್ಟಿಸಿದರು. ಇದರಿಂದ ಸಭೆಗೆ ತಾತ್ಕಾಲಿಕ ಅಡ್ಡಿ ಉಂಟಾಯಿತು.

ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ, ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಪರಿಣಾಮವಾಗಿ, ಹೋಟೆಲ್‌ನಲ್ಲಿ ನಡೆದ ಸಭೆಗೆ ಸ್ವಲ್ಪ ಅಡಚಣೆ ಉಂಟಾಯಿತು ಆದರೆ ಪೊಲೀಸರ ಸಕಾಲಿಕ ಹಸ್ತಕ್ಷೇಪದಿಂದಾಗಿ ಯೋಜಿಸಿದಂತೆ ಪೂರ್ಣಗೊಂಡಿತು.

ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲಿಸಲಾಯಿತು. ಒಟ್ಟು 41 ಪ್ರತಿಭಟನಾಕಾರರನ್ನು ಬಂಧಿಸಿ 1 ನೇ ಎಸಿಜೆಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು, ನ್ಯಾಯಾಲಯವು ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ.

ಕರವೇ ಅಧ್ಯಕ್ಷ ನಾರಾಯಣ ಗೌಡ ಖಂಡನೆ

ಈ ವಿಚಾರವಾಗಿ ನಗರದಲ್ಲಿ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಹೇಳಿಕೆ ನೀಡಿದ್ದು, 41 ಜನ ಜೈಲಿಗೆ ಹೋಗಿದ್ದಾರೆ ಆ ಕುಟುಂಬದ ಸದಸ್ಯರು ಭಯಪಡಬೇಕಿಲ್ಲ. ಸರ್ಕಾರದ ಹಣ ಲೂಟಿ ಮಾಡುವ ರಾಜಕಾರಣಿಗಳಿಗೇ ಭಯವಿಲ್ಲ. ನಮ್ಮ ಭಾಷೆ, ನಾಡಿಗಾಗಿ ಜೈಲಿಗೆ ಹೋದವರು ಅಂಜಬಾರದು ಎಂದಿದ್ದಾರೆ.

ನೀವು ನೂರು ಕೇಸ್ ಹಾಕಿದರು ಕನ್ನಡ ಹೋರಾಟಗಾರರು ಅಂಜುವುದಿಲ್ಲ. ಅರೆಸ್ಟ್ ಆಗಿರೋ 41 ಜನರ ಪೈಕಿ 13 ಮಹಿಳೆಯರೂ ಕೂಡಾ ಇದ್ದಾರೆ. 6 ತಿಂಗಳ ಮಗು ಬಿಟ್ಟು ಬಂದು ಹೋರಾಟಕ್ಕೆ ಬಂದವರು ಅರೆಸ್ಟ್ ಆಗಿದ್ದಾರೆ. ಕರ್ನಾಟಕದ ರಾಜಕಾರಣಿಗಳು ರಣಹೇಡಿಗಳ ರೀತಿ ಕುಳಿತುಕೊಂಡಿದ್ದೀರಿ. ತಮಿಳುನಾಡಿನಲ್ಲಿ ಭೇದಭಾವ ಮರೆತು ಮಾತೃಭಾಷೆಯ ಪರ ನಿಲ್ಲುತ್ತಾರೆ ಎಂದು ನಾರಾಯಣ ಗೌಡ ವಾಗ್ದಾಳಿ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com