Bengaluru Potholes: ರಸ್ತೆಗುಂಡಿ ಮುಚ್ಚಲು 1 ತಿಂಗಳು ಗಡುವು; ಇಂಜಿನಿಯರ್ ಅಮಾನತ್ತಿಗೆ ಸಿದ್ದರಾಮಯ್ಯ ಆದೇಶ; Video

ಬೆಂಗಳೂರಿನಲ್ಲಿ ಮಳೆಯಿಂದಾಗಿ ರಸ್ತೆ ಗುಂಡಿಗಳು ಹೆಚ್ಚಾಗಿದ್ದು ಗುಂಡಿ ಮುಚ್ಚುವಂತೆ ರಾಜ್ಯ ಸರ್ಕಾರ ನವೆಂಬರ್ ತಿಂಗಳ ಡೆಡ್ ಲೈನ್ ಹಾಕಿಕೊಂಡಿದೆ. ಈ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಸಿಟಿ ರೌಂಡ್ಸ್ ನಡೆಸಿದರು.
Siddaramaiah City Rounds
ಸಿಎಂ ಸಿದ್ದರಾಮಯ್ಯ ಸಿಟಿ ರೌಂಡ್ಸ್
Updated on

ಬೆಂಗಳೂರು: ಬೆಂಗಳೂರಿನಲ್ಲಿ ಮಳೆಯಿಂದಾಗಿ ರಸ್ತೆ ಗುಂಡಿಗಳು ಹೆಚ್ಚಾಗಿದ್ದು ಗುಂಡಿ ಮುಚ್ಚುವಂತೆ ರಾಜ್ಯ ಸರ್ಕಾರ ನವೆಂಬರ್ ತಿಂಗಳ ಡೆಡ್ ಲೈನ್ ಹಾಕಿಕೊಂಡಿದೆ. ಈ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಸಿಟಿ ರೌಂಡ್ಸ್ ನಡೆಸಿದರು. ಅಧಿಕೃತ ನಿವಾಸ ಕಾವೇರಿಯಿಂದ ಹೊರಟ ಸಿದ್ದರಾಮಯ್ಯ ವಿಂಡ್ಸರ್ ಮ್ಯಾನರ್ ಸಮೀಪ ರಸ್ತೆಯ ಮೇಲೆ ಮಳೆ ನೀರು ಸಂಗ್ರಹವಾಗುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ, ಅಧಿಕಾರಿಗಳಿಂದ ನೀರು ನಿಲ್ಲಲು ಕಾರಣವೇನು ಎಂಬ ಬಗ್ಗೆ ಮಾಹಿತಿ ಪಡೆದರು. ಬಳಿಕ ವಿಬ್ ಗಯಾರ್ ರಸ್ತೆಗೆ ಭೇಟಿ ನೀಡಿ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಯ ಪರಿಶೀಲನೆ ನಡೆಸಿದರು. ಆ ನಂತರ ಹೆಣ್ಣೂರಿನ ಬಾಗಲೂರು ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿಯನ್ನು ಪರಿಶೀಲನೆ ನಡೆಸಿದ ಸಿದ್ದರಾಮಯ್ಯ, ರಸ್ತೆ ಗುಂಡಿಗಳಿಗೆ ಜಲ್ಲಿ ಹಾಕಿ ಬಿಡೋದಲ್ಲ. ಸರಿಯಾಗಿ ನಿರ್ವಹಿಸಬೇಕು. ವೇಗವಾಗಿ ಕಾಮಗಾರಿ ನಡೆಸುವಂತೆ ಸೂಚಿಸಿದರು.

ಮಳೆಗಾಲದಲ್ಲಿ ರಸ್ತೆಗಳಲ್ಲಿ ಗುಂಡಿಗಳು ಹೆಚ್ಚಾಗಿದ್ದು, ಇವುಗಳನ್ನು ದುರಸ್ತಿಗೊಳಿಸಿ, ರಸ್ತೆಗಳನ್ನು ಸಂಚಾರ ಯೋಗ್ಯವಾಗಿಸಲು ಒಂದು ತಿಂಗಳ ಕಾಲಾವಕಾಶವನ್ನು ನೀಡಲಾಗಿದೆ. ಪಣತ್ತೂರು ಟಿ ಕ್ರಾಸ್ ಬಳಿ ರಸ್ತೆಯುದ್ದಕ್ಕೂ ಕಟ್ಟಡ ನಿರ್ಮಾಣದ ತ್ಯಾಜ್ಯ, ಸಿಸಿಟಿವಿ ಅಳವಡಿಸಿ ಕ್ರಮ ಕೈಗೊಳ್ಳಲು ಮತ್ತು ಬಿಬಿಎಂಪಿ ಮಾರ್ಷಲ್ ಗಳನ್ನು ಕರ್ತವ್ಯಕ್ಕೆ ನಿಯೋಜಿಸಿ ತ್ಯಾಜ್ಯ ಸುರಿಯುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಥಳದಲ್ಲಿದ್ದ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಮತ್ತು ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದರು.

ನಗರದ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಲು ಸೂಚನೆ ನೀಡಲಾಗಿದ್ದು, ಈ ಕಾರ್ಯ ಗುಣಮಟ್ಟದಿಂದ ಕೂಡಿರಬೇಕು. ಕರ್ತವ್ಯದಲ್ಲಿ ನಿರ್ಲಕ್ಷ್ಯದ ಕಾರಣ ಹೆಣ್ಣೂರು ಬಾಗಲೂರು ವಿಭಾಗದ ಎಕ್ಸಿಕ್ಯೂಟಿವ್ ಇಂಜಿನಿಯರ್ ನ್ನು ಅಮಾನತ್ತುಗೊಳಿಸಲಾಗಿದೆ. ಗುಂಡಿ ಮುಚ್ಚಲು ಕೇವಲ ಜಲ್ಲಿ ಹಾಕಿ ಟಾರ್ ಹಾಕದೇ ಹಾಗೇ ಬಿಟ್ಟಿದ್ದ ಕಾರಣ, ಅವರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಹೆಣ್ಣೂರು ರಸ್ತೆ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದ್ದು, ರಸ್ತೆಯ ನಿರ್ವಹಣೆಯನ್ನು ಸಂಬಂಧಪಟ್ಟ ಗುತ್ತಿಗೆದಾರರ ಜವಾಬ್ದಾರಿಯಾಗಿರುತ್ತದೆ. 5 ಕಿ.ಮೀ ರಸ್ತೆ ಕಾಮಗಾರಿಯನ್ನು ಕಿ.ಮೀ. ಒಂದಕ್ಕೆ 13 ಕೋಟಿಗಳನ್ನು ಸರ್ಕಾರ ವ್ಯಯಿಸುತ್ತಿದೆ. ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲು ಒಂದು ತಿಂಗಳ ಕಾಲಾವಕಾಶವನ್ನು ನೀಡಲಾಗಿದೆ. ರಸ್ತೆಗಳಲ್ಲಿ ಯಾವುದೇ ಗುಂಡಿಗಳಿಲ್ಲದಂತೆ ಮುಚ್ಚಬೇಕೆಂದು ಸೂಚನೆ ನೀಡಲಾಗಿದೆ.

ರಸ್ತೆ ಗುಂಡಿಗಳಿರುವುದು ನಿಜ. ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ರಸ್ತೆ ಗುಂಡಿಗಳ ದುರಸ್ತಿ ನಡೆದಿದ್ದರೆ, ರಸ್ತೆಗಳು ಇಂತಹ ಪರಿಸ್ಥಿತಿಗೆ ತಲುಪುತ್ತಿರಲಿಲ್ಲ. ಮಳೆಗಾಲ ಮುಗಿಯುವುದರೊಳಗೆ ರಸ್ತೆ ಗುಂಡಿಗಳನ್ನು ಮುಚ್ಚಲು ಅಗತ್ಯ ಕ್ರಮ ಕೈಗೊಳ್ಳಬೇಕು. ರಸ್ತೆಗಳ ಕೆಲೆವೆಡೆಗಳಲ್ಲಿ ತ್ಯಾಜ್ಯವನ್ನು ನಿರ್ವಹಿಸದೇ ಹಾಗೇ ಬಿಟ್ಟಿದ್ದು, ತ್ಯಾಜ್ಯವನ್ನು ತ್ವರಿತವಾಗಿ ತೆಗೆಯಬೇಕೆಂದು ಸೂಚನೆ ನೀಡಲಾಗಿದ್ದು,, ಇಲ್ಲವಾದಲ್ಲಿ ಸಂಬಂಧಪಟ್ಟ ಕಮೀಷನರ್ ಹಾಗೂ ಇಂಜಿನಿಯರ್ ಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಿದ್ದರಾಮಯ್ಯ ಸಿಟಿ ರೌಂಡ್ಸ್ ಮುಖ್ಯಾಂಶಗಳು:

* ಬಳ್ಳಾರಿ ರಸ್ತೆಯ ವಿಂಡ್ಸರ್ ಮ್ಯಾನರ್ ಬಳಿ ಒಳಚರಂಡಿ ವ್ಯವಸ್ಥೆ ಕಲ್ಪಿಸಿ ರಸ್ತೆಯಲ್ಲಿ ನೀರು ನಿಲ್ಲದೆ ಸರಾಗವಾಗಿ ಹರಿದು ಒಳಚರಂಡಿ ಸೇರುವಂತೆ ವ್ಯವಸ್ಥೆ ಕಲ್ಪಿಸಲು ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ .

* ವಿಡ್ಸಂರ್ ಮ್ಯಾನರ್ ವೃತ್ತದಲ್ಲಿನ ರಸ್ತೆ ಕಾರ್ಯ, ರಾತ್ರಿಯಲ್ಲಿ ಮುಗಿಸಬೇಕು ಎಂದು ಅಧಿಕಾರಿಗಳು ಸೂಚನೆ

* ರಿಂಗ್ ರಸ್ತೆಯ ಬದಿಯಲ್ಲಿ ಸಿಸಿ ಕ್ಯಾಮರಾ ಇಲ್ಲದಿರುವ ಜಾಗದಲ್ಲಿ ಹಳೆ ಕಟ್ಟಡ ತ್ಯಾಜ್ಯ ಸುರಿದಿರುವುದನ್ನು ಗಮನಿಸಿದ್ದು, ಈ ಜಾಗದಲ್ಲಿ ತ್ಯಾಜ್ಯ ಸುರಿದಿರುವವರನ್ನು ಪತ್ತೆ ಹಚ್ಚಿ ಅವರ ವಾಹನ ಮುಟ್ಟುಗೋಲು ಹಾಕಿಕೊಂಡು ಪ್ರಕರಣ ದಾಖಲಿಸುವಂತೆ ಸೂಚನೆ.

* ರಸ್ತೆಗೆ ತ್ಯಾಜ್ಯ ಸುರಿದಿರುವುದನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು ಎಂದು ಬಿಬಿಎಂಪಿ, ಬಿಡಿಎ ಮತ್ತು ಪೊಲೀಸರಿಗೆ ಸೂಚನೆ.

* ಮೆಟ್ರೋ ಕಾಮಗಾರಿ ನಡೆಯುವ ಸಂದರ್ಭಗಳಲ್ಲಿ ಮೆಟ್ರೋ ಸಿಬ್ಬಂದಿ ಸರ್ವೀಸ್ ರಸ್ತೆಗಳ ನಿರ್ಲಕ್ಷ್ಯ ಮಾಡಬಾರದು. ರಸ್ತೆ ಬದಿ ನೀರು ಸರಾಗವಾಗಿ ಹರಿಯಲು ಇರುವ ವ್ಯವಸ್ಥೆಯನ್ನು ಸರಿಪಡಿಸಬೇಕು ಹಾಗೂ ಹಾಳಾಗಿರುವ ವೈಟ್ ಟಾಪಿಂಗ್ ರಸ್ತೆಯನ್ನು ತಕ್ಷಣ ದುರಸ್ತಿ ಮಾಡಬೇಕು ಹಾಗೂ ಸರ್ವೀಸ್ ರಸ್ತೆಗಳ ನಿರ್ವಹಣೆ ಮಾಡುವಂತೆ ಸೂಚನೆ .

* ಮೆಟ್ರೋ ಕಾಮಗಾರಿ ನಡೆಯುವಾಗ ಸರ್ವೀಸ್ ರಸ್ತೆಗಳ ನಿರ್ಲಕ್ಷ್ಯ ಸಲ್ಲದು. ಈ ಬಗ್ಗೆ ಎಚ್ಚರಿಕೆ ಅಗತ್ಯ ಎಂದು ಸೂಚಿಸಿದರು.

* ಹೆಣ್ಣೂರು ಫ್ಲೈಓವರ್ ಕೆಳಗೆ ಕಟ್ಟಡ ನಿರ್ಮಾಣ ತ್ಯಾಜ್ಯ ಸುರಿದಿದ್ದು, ಅದರೊಳಗೆ ತಲೆ ಎತ್ತರಕ್ಕೆ ಗಿಡಗಳು ಬೆಳೆದಿವೆ. ಹಳೆ ತ್ಯಾಜ್ಯವಾಗಿದ್ದು, 24 ಗಂಟೆಗಳ ಒಳಗೆ ತ್ಯಾಜ್ಯ ತೆರವುಗೊಳಿಸುವಂತೆ ಸೂಚನೆ .

* ಹೆಣ್ಣೂರಿನ ಬಾಗಲೂರು ರಸ್ತೆಯಲ್ಲಿ ವೈಟ್ ಟಾಪಿಂಗ್ ಮಾಡಲು ಆರಿಸಿಕೊಂಡ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿರುವುದರ ಹೊಣೆಯನ್ನು ಗುತ್ತಿಗೆದಾರರೇ ಹೊರಬೇಕು ಒಮ್ಮೆ ವೈಟ್ ಟಾಪಿಂಗ್ ಗೆ ರಸ್ತೆಯನ್ನು ಒಪ್ಪಿಸಿದ ಮೇಲೆ ಆ ರಸ್ತೆಗಳ ನಿರ್ವಹಣೆಗೆ ಬಿಬಿಎಂಪಿ ಹಣ ಕೊಡಲು ಬರುವುದಿಲ್ಲ.

* ವೈಟ್ ಟಾಪಿಂಗ್ ಮುಗಿಯುವಾಗ 2-3 ವರ್ಷ ಆಗುತ್ತದೆ. ಅಲ್ಲಿಯವರೆಗೂ ಗುತ್ತಿಗೆದಾರರೇ ರಸ್ತೆಗಳ ನಿರ್ವಹಣೆ ಮಾಡಬೇಕು.

* ಸಮರ್ಪಕ ನಿರ್ವಹಣೆ ಮಾಡದ ವೈಟ್ ಟಾಪಿಂಗ್ ಗುತ್ತಿಗೆದಾರರು ಮತ್ತು ಎಂಜಿನಿಯರ್ ಗಳ ವಿರುದ್ದ ಕ್ರಮಕ್ಕೆ ಸೂಚನೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com