ಭಾರಿ ಮಳೆ ಪರಿಣಾಮ ಕಲ್ಯಾಣ ಕರ್ನಾಟಕ ಪ್ರದೇಶದ ಹಲವಾರು ಜಿಲ್ಲೆಗಳ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ನಿರಂತರ ಮಳೆ ಮತ್ತು ಉಕ್ಕಿ ಹರಿಯುತ್ತಿರುವ ಭೀಮಾ ನದಿ ಸಾಮಾನ್ಯ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಅಣೆಕಟ್ಟುಗಳಿಂದ ನೀರು ಬಿಟ್ಟ ಪರಿಣಾಮ ಲಕ್ಷಾಂತರ ಎಕರೆ ಪ್ರದೇಶದಲ್ಲಿದ್ದ ಬೆಳೆಗಳು ನಾಶವಾಗಿವೆ. ಬಾಗಲಕೋಟೆಯ ರಬಕವಿಬನಹಟ್ಟಿಯಲ್ಲಿ ಕಳೆದ ತಡರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಮನೆಯ ಗೋಡೆ ಕುಸಿದು 11 ವರ್ಷದ ಬಾಲಕ ದರ್ಶನ್ ನಾಗಪ ಲಾಥುರ ಎಂಬಾತ ಸಾವನ್ನಪ್ಪಿದ್ದಾನೆ. ಇನ್ನು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ 'ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ನಿರಂತರ ಮಳೆ ಮತ್ತು ಉಕ್ಕಿ ಹರಿಯುವ ನದಿಗಳು ಕಲಬುರಗಿಯ 36 ಹಳ್ಳಿಗಳಿಗೆ ಅಪಾರ ತೊಂದರೆಯನ್ನುಂಟು ಮಾಡಿವೆ. ನಮ್ಮ ಜನರ ಸುರಕ್ಷತೆ ನಮ್ಮ ಆದ್ಯತೆಯಾಗಿದೆ. ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಬೆಂಗಳೂರಿನಲ್ಲಿ ಮಳೆಯಿಂದಾಗಿ ರಸ್ತೆ ಗುಂಡಿಗಳು ಹೆಚ್ಚಾಗಿದ್ದು ಗುಂಡಿ ಮುಚ್ಚುವಂತೆ ರಾಜ್ಯ ಸರ್ಕಾರ ನವೆಂಬರ್ ತಿಂಗಳ ಡೆಡ್ ಲೈನ್ ಹಾಕಿಕೊಂಡಿದೆ. ಈ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಸಿಟಿ ರೌಂಡ್ಸ್ ನಡೆಸಿದರು. ಅಧಿಕೃತ ನಿವಾಸ ಕಾವೇರಿಯಿಂದ ಹೊರಟ ಸಿದ್ದರಾಮಯ್ಯ ವಿಂಡ್ಸರ್ ಮ್ಯಾನರ್ ಸಮೀಪ ರಸ್ತೆಯ ಮೇಲೆ ಮಳೆ ನೀರು ಸಂಗ್ರಹವಾಗುತ್ತಿದ್ದ ಸ್ಥಳಕ್ಕೆ ಭೇಟಿನೀಡಿ, ಅಧಿಕಾರಿಗಳಿಂದ ನೀರು ನಿಲ್ಲಲು ಕಾರಣವೇನು ಎಂಬ ಬಗ್ಗೆ ಮಾಹಿತಿ ಪಡೆದರು.. ಬಳಿಕ ವಿಬ್ ಗಯಾರ್ ರಸ್ತೆಗೆ ಭೇಟಿ ನೀಡಿ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಯ ಪರಿಶೀಲನೆ ನಡೆಸಿದರು. ಆ ನಂತರ ಹೆಣ್ಣೂರಿನ ಬಾಗಲೂರು ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿಯನ್ನು ಪರಿಶೀಲನೆ ನಡೆಸಿದ ಸಿದ್ದರಾಮಯ್ಯ, ರಸ್ತೆ ಗುಂಡಿಗಳಿಗೆ ಜಲ್ಲಿ ಹಾಕಿ ಬಿಡೋದಲ್ಲ. ಸರಿಯಾಗಿ ನಿರ್ವಹಿಸಬೇಕು. ವೇಗವಾಗಿ ಕಾಮಗಾರಿ ನಡೆಸುವಂತೆ ಸೂಚಿಸಿದರು. ಸಿಎಂ ಜೊತೆಗೆ ಸಚಿವರಾದ ಕೆಜೆ ಜಾರ್ಜ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಜಿಬಿಎ ಆಯುಕ್ತ ಮಹೇಶ್ವರ ರಾವ್, ತುಷಾರ್ ಗಿರಿನಾಥ್ ಸಿಟಿ ರೌಂಡ್ಸ್ ನಡೆಸುತ್ತಿದ್ದಾರೆ.
ಬೆಂಗಳೂರು ಮತ್ತು ಮುಂಬೈ ನಡುವೆ ಹೊಸ ಸೂಪರ್‌ಫಾಸ್ಟ್ ರೈಲಿಗೆ ಕೇಂದ್ರ ರೈಲ್ವೆ ಸಚಿವಾಲಯ ಅನುಮೋದನೆ ನೀಡಿದೆ ಎಂದು ಸಂಸದ ತೇಜಸ್ವಿ ಸೂರ್ಯ ಮಾಹಿತಿ ನೀಡಿದ್ದಾರೆ. ಈ ಅನುಮೋದನೆಯಿಂದ ಎರಡೂ ನಗರಗಳ ನಾಗರಿಕರ 30 ವರ್ಷಗಳ ಬೇಡಿಕೆ ಈಡೇರುತ್ತದೆ. ಬೆಂಗಳೂರು ಮತ್ತು ಮುಂಬೈ ಭಾರತದ ಎರಡು ಪ್ರಮುಖ ಆರ್ಥಿಕ ಕೇಂದ್ರಗಳಾಗಿದ್ದರೂ, ಈ ಎರಡೂ ನಗರಗಳು ಕೇವಲ ಒಂದೇ ಒಂದು ರೈಲಿನಿಂದ ಸಂಪರ್ಕ ಹೊಂದಿತ್ತು. ಉದ್ಯಾನ ಎಕ್ಸ್‌ಪ್ರೆಸ್ ಮಾತ್ರ ಓಡಾಡುತ್ತಿದ್ದು ಇದು 24 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ಇದು 30 ವರ್ಷಗಳಿಂದ ಬಾಕಿ ಉಳಿದಿದ್ದ ಬೇಡಿಕೆಯಾಗಿದೆ. ಕಳೆದ ವರ್ಷವೊಂದರಲ್ಲೇ 26 ಲಕ್ಷಕ್ಕೂ ಹೆಚ್ಚು ಜನರು ಈ ಎರಡು ನಗರಗಳ ನಡುವೆ ವಿಮಾನದಲ್ಲಿ ಪ್ರಯಾಣಿಸಿದ್ದಾರೆ ಎಂದು ತೇಜಸ್ವಿ ಸೂರ್ಯ ಹೇಳಿದರು.
ಉಡುಪಿಯಲ್ಲಿ AKMS ಮಾಲೀಕ, ರೌಡಿಶೀಟರ್ ಸೈಫುದ್ದೀನ್ ಆತ್ರಾಡಿಯನ್ನು ದುಷ್ಕರ್ಮಿಗಳ ತಂಡವೊಂದು ಬರ್ಬರವಾಗಿ ಹತ್ಯೆಗೈದಿದೆ. ಕೊಡವೂರು ಸಮೀಪದ ಸಾಲ್ಮರ ಎಂಬಲ್ಲಿರುವ ಸೈಫ್ ಮನೆಗೆ ಇಂದು ಬೆಳಗ್ಗೆ 10.30ಕ್ಕೆ ನುಗ್ಗಿ ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಸೈಫುದ್ದೀನ್ ಒಡೆತನದ ಬಸ್ ಸಂಸ್ಥೆಯಲ್ಲಿ ಚಾಲಕರಾಗಿ ದುಡಿಯುತ್ತಿದ್ದ ಮೂರು ಆರೋಪಿಗಳೇ ಇರಿದು ಕೊಲೆ ಮಾಡಿರುವುದು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೈಫುದ್ದೀನ್ ಮೇಲೆ 18 ಕ್ರಿಮಿನಲ್ ಪ್ರಕರಣಗಳಿದ್ದ ಹಿರಿಯಡ್ಕ ಠಾಣೆ ಮತ್ತು ಉಡುಪಿ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ. ಜೊತೆಗೆ ಈ ಸೈಫ್ ಎರಡು ಕೊಲೆ ಪ್ರಕರಣದ ಆರೋಪಿ ಕೂಡ ಆಗಿದ್ದ ಎಂದು ತಿಳಿಸಿದ್ದಾರೆ.
ಗೋಕರ್ಣದ ರಾಮತೀರ್ಥ ಬೆಟ್ಟದ ಗುಹೆಯೊಂದರಲ್ಲಿ ವಾಸವಿದ್ದ ಮಹಿಳೆ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ರಷ್ಯಾಗೆ ಕಳುಹಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಹೇಳಿದೆ. ಮಹಿಳೆಯ ಪತಿ ರಷ್ಯಾ ನಿವಾಸಿ ಡೋರ್‌ಶ್ಲೋಮೋ ಗೋಲ್ಡ್‌ಸ್ಟೈನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಅವರ ಪೀಠ ಕೇಂದ್ರಕ್ಕೆ ಈ ಸೂಚನೆ ನೀಡಿ ಅರ್ಜಿ ಇತ್ಯರ್ಥಪಡಿಸಿದೆ. ಗುಹೆಯಲ್ಲಿ ತಂಗಿದ್ದ ಮಹಿಳೆ ಮತ್ತು ಆಕೆಯ ಪುತ್ರಿಯರು ರಷ್ಯಾದಿಂದ ಭಾರತಕ್ಕೆ ಬಂದು ವೀಸಾ ಅವಧಿ ಮೀರಿ ನೆಲೆಸಿದ್ದರು. ಹಾಗಾಗಿ ಪ್ರಕರಣ ಕುರಿತು ರಷ್ಯಾ ಸರ್ಕಾರಕ್ಕೆ ಎಲ್ಲಾ ವಿವರ ಒದಗಿಸಬೇಕು. ಜತೆಗೆ, ಮಹಿಳೆ ಸಹ ತನ್ನ ಮಕ್ಕಳ ಜೊತೆ ರಷ್ಯಾಗೆ ಹಿಂತಿರುಗಲು ಅನುಮತಿ ನೀಡಬೇಕೆಂದು ಮಹಿಳೆಯ ಪತಿ ಕೋರಿದ್ದರು.
Advertisement