
ಬೆಂಗಳೂರು: ತಾಯಿ ಮತ್ತು ನವಜಾತ ಶಿಶುಗಳ ಸಾವಿನ ಪ್ರಮಾಣವನ್ನು ತಗ್ಗಿಸಲು ತಾಲ್ಲೂಕು ಮಟ್ಟದ 148 ಆಸ್ಪತ್ರೆಗಳಲ್ಲಿ ದಿನದ 24 ಗಂಟೆಯೂ ತ್ರಿವಳಿ ತಜ್ಞರ ಲಭ್ಯತೆ ಸೇರಿ ವಿವಿಧ ಕ್ರಮಗಳನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಕಟಿಸಿದ್ದಾರೆ.
ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆಗಳ ಬಲವರ್ಧನೆಗೆ ತ್ರಿವಳಿ ತಜ್ಞರ ತರ್ಕಬದ್ಧಗೊಳಿಸುವಿಕೆ ಪ್ರಸ್ತಾವನೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ. ಈ ಬಗ್ಗೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ವಿವರ ನೀಡಿದರು. ತಾಯಂದಿರು ಮತ್ತು ಮಕ್ಕಳ ಆರೋಗ್ಯ ಸೇವೆಗಳನ್ನು ಬಲಪಡಿಸುವುದು ಮತ್ತು ರಾಜ್ಯದಲ್ಲಿ ತಾಯಂದಿರು ಮತ್ತು ನವಜಾತ ಶಿಶುಗಳ ಮರಣವನ್ನು ಕಡಿಮೆ ಮಾಡುವುದು ಸರ್ಕಾರದ ಗುರಿಯಾಗಿದೆ ಎಂದು ಗುಂಡೂರಾವ್ ಸುದ್ದಿಗಾರರಿಗೆ ತಿಳಿಸಿದರು.
ತ್ರಿವಳಿ ತಜ್ಞರು ಎಂದರೆ ಸ್ತ್ರೀರೋಗ, ಅರಿವಳಿಕೆ ಮತ್ತು ಮಕ್ಕಳ ತಜ್ಞರು. ಈ ಮೂವರು ತಜ್ಞರು ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ 24 ಗಂಟೆಯೂ ಪಾಳಿಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. ಇದ್ದಕ್ಕಾಗಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿ ತಜ್ಞರ ಸಂಖ್ಯೆ ಹೆಚ್ಚಿಸುವುದರ ಜತೆಗೆ, ಯಾವುದೇ ಆಸ್ಪತ್ರೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ತಜ್ಞರಿದ್ದರೆ, ತಜ್ಞರ ಸಂಖ್ಯೆ ಕೊರತೆ ಇರುವ ಕಡೆಗೆ ನಿಯೋಜಿಸಲಾಗುವುದು. ತಜ್ಞ ವೈದ್ಯರು ಇಲ್ಲದೇ ಯಾವ ತಾಯಿಯೂ ಸಾವಿಗೀಡಾಗಬಾರದು ಎಂಬುದು ಸರ್ಕಾರದ ಆದ್ಯತೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಈಗ ಪ್ರತಿ 1 ಲಕ್ಷಕ್ಕೆ 60 ಮಂದಿ ತಾಯಂದಿರ ಸಾವು ಸಂಭವಿಸುತ್ತಿದೆ. ನೆರೆಯ ರಾಜ್ಯಗಳಾದ ತಮಿಳುನಾಡು ಮತ್ತು ಕೇರಳಕ್ಕೆ ಹೋಲಿಸಿದರೆ, ನಮ್ಮ ರಾಜ್ಯದಲ್ಲಿ ಸಾವಿನ ಸಂಖ್ಯೆ ಹೆಚ್ಚು ಇದೆ. ಇದನ್ನು ಮೊದಲ ಹಂತದಲ್ಲಿ 40ಕ್ಕೆ ಇಳಿಸಿ, ಬಳಿಕ ಶೂನ್ಯಕ್ಕೆ ತರುವುದು ನಮ್ಮ ಉದ್ದೇಶ. ಇದಕ್ಕೆ ಪೂರಕವಾಗಿ ಸಾವಿನ ಆಡಿಟ್ ನಡೆಸಲಾಗಿದೆ. ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಲಭ್ಯತೆ ಸೇರಿ ವಿವಿಧ ಲೋಪಗಳನ್ನು ಸರಿಪಡಿಸಲಾಗಿದೆ ಎಂದು ದಿನೇಶ್ ತಿಳಿಸಿದರು.
ಹೊಸದಾಗಿ 223 ವೈದ್ಯರ ನೇಮಕದ ಜತೆಗೆ, 114 ರೇಡಿಯಾಲಾಜಿಸ್ಟ್ ಹುದ್ದೆಗಳನ್ನು ಸೃಜಿಸಿ ಭರ್ತಿ ಮಾಡಲಾಗುವುದು. ಪ್ರತಿ ತಾಲ್ಲೂಕು ಆಸ್ಪತ್ರೆಗಳ ಪ್ರಸೂತಿ ವಿಭಾಗಕ್ಕೆ ಹೆಚ್ಚುವರಿಯಾಗಿ ನರ್ಸಿಂಗ್ ಸಿಬ್ಬಂದಿಯನ್ನು ನೀಡಲಾಗುವುದು. ತಾಲ್ಲೂಕು ಆಸ್ಪತ್ರೆಗಳಲ್ಲಿ ವೈದ್ಯ ಸಿಬ್ಬಂದಿಯನ್ನು ಹೆಚ್ಚಿಸುವುದರಿಂದ ಜಿಲ್ಲಾ ಆಸ್ಪತ್ರೆಗಳ ಮೇಲಿನ ಹೊರೆಯೂ ತಗ್ಗಲಿದೆ ಎಂದು ಅವರು ವಿವರಿಸಿದರು.
ವೈದ್ಯರನ್ನು ಹೆಚ್ಚು ಕಾರ್ಯನಿರತ ತಾಲ್ಲೂಕು ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗುವುದು ಎಂದು ಅವರು ಹೇಳಿದರು. ದತ್ತಾಂಶದ ಪ್ರಕಾರ, 2024–25ರ ಅವಧಿಯಲ್ಲಿ ಕರ್ನಾಟಕವು 4.71 ಲಕ್ಷ ಹೆರಿಗೆಗಳನ್ನು ದಾಖಲಿಸಿದೆ ಮತ್ತು ತಾಲ್ಲೂಕು ಆಸ್ಪತ್ರೆಗಳು ಅತಿ ಹೆಚ್ಚು ಅಂದರೆ ಶೇ. 33% ರಷ್ಟು ಹೆರಿಗೆಗಳನ್ನು ದಾಖಲಿಸಿವೆ. ಆದಾಗ್ಯೂ, 148 ತಾಲ್ಲೂಕು ಆಸ್ಪತ್ರೆಗಳಲ್ಲಿ ಕೇವಲ 31 ಮಾತ್ರ ತಿಂಗಳಿಗೆ 100 ಕ್ಕಿಂತ ಹೆಚ್ಚು ಹೆರಿಗೆಗಳನ್ನು ದಾಖಲಿಸಿವೆ.
Advertisement