ಹಿಂದಿನ ಸರ್ಕಾರಕ್ಕಿಂತ ನಿಮ್ಮ ನೇತೃತ್ವದ ಸರ್ಕಾರದಲ್ಲಿ ಬಿಲ್ ಪಾವತಿಗೆ ಕಮಿಷನ್ ದುಪ್ಪಟ್ಟಾಗಿದೆ ಎಂದು ಆರೋಪಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯ ಗುತ್ತಿಗೆದಾರರ ಸಂಘ ಪತ್ರ ಬರೆದಿದೆ. ತಾವು ವಿರೋಧ ಪಕ್ಷದ ನಾಯಕರಾಗಿದ್ದಾಗ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಗುತ್ತಿಗೆದಾರರ ಬಾಕಿ ಹಣ ಬಿಡುಗಡೆಗೆ ಯಾವುದೇ ಕಮಿಷನ್ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದ್ದೀರಿ. ಆದರೆ, ಹಿಂದಿನ ಸರ್ಕಾರಕ್ಕಿಂತ ಎಲ್ಲ ಇಲಾಖೆಗಳಲ್ಲೂ ಈಗ ಕಮಿಷನ್ ದುಪ್ಪಟ್ಟು ಆಗಿದೆ ಎಂದು ನಿಮ್ಮ ಗಮನಕ್ಕೆ ತರಲು ಸಂಘ ವಿಷಾದ ವ್ಯಕ್ತಪಡಿಸುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಹಿಂದಿದ್ದ ಬಿಜೆಪಿ ಸರ್ಕಾರಕ್ಕಿಂತ ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ, ಅಧಿಕಾರಿಗಳು ಹೆಚ್ಚು ಕಮಿಷನ್ ಪಡೆಯುತ್ತಾರೆ ಎಂದು ರಾಜ್ಯ ಗುತ್ತಿಗೆದಾರರ ಸಂಘ 2025ರ ಮಾರ್ಚ್‌ನಲ್ಲಿ ಆರೋಪಿಸಿತ್ತು. ಸುಮಾರು ಎರಡು ವರ್ಷಗಳಿಂದ ಗುತ್ತಿಗೆದಾರರಿಗೆ ಬಾಕಿ ಇರುವ ಹಣ ಬಿಡುಗಡೆ ವಿಚಾರ ಮತ್ತು ಹಲವು ಸಮಸ್ಯೆಗಳ ಬಗ್ಗೆ ನಿಮ್ಮ ಜೊತೆ ಹಲವು ಬಾರಿ ಸಂಘದ ಪದಾಧಿಕಾರಿಗಳು ಚರ್ಚೆ ಮಾಡಿದ್ದೇವೆ. ನಮ್ಮ ಸಂಘ ಭ್ರಷ್ಟಾಚಾರದ ವಿರುದ್ಧ ಹೋರಾಡಿದ ಫಲವಾಗಿ, ತಮ್ಮ ಸರ್ಕಾರ ಬರುವುದಕ್ಕೆ ಸ್ವಲ್ಪವಾದರೂ ನಾವು ಕಾರಣಕರ್ತರಾಗಿದ್ದೇವೆ ಎಂಬುದನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇವೆ ಎಂದು ಸಂಘದ ಅಧ್ಯಕ್ಷ ಆರ್. ಮಂಜುನಾಥ್ ಪತ್ರದಲ್ಲಿ ತಿಳಿಸಿದ್ದಾರೆ.
ಸರ್ಕಾರದ ಮೇಲೆ ನನಗೆ ನಂಬಿಕೆಯಿಲ್ಲ, ನಿಮ್ಮ ಮಾಹಿತಿ ಸುರಕ್ಷಿತವಾಗಿರಲ್ಲ. ಹಾಗಾಗಿ, ಜಾತಿಗಣತಿ ಬಹಿಷ್ಕರಿಸಿ ಎಂದು ಜನತೆಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕರೆ ನೀಡಿದ್ದಾರೆ. ಜಾತಿಗಣತಿ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಮಾಹಿತಿ ಸುರಕ್ಷಿತವಾಗಿರುತ್ತೆ ಅನ್ನೋ ನಂಬಿಕೆ ಇಲ್ಲ. ಹೀಗಾಗಿ, ನಾನು ಜಾತಿಗಣತಿಯಲ್ಲಿ ಪಾಲ್ಗೊಳ್ಳಲ್ಲ ಎಂದು ಹೇಳಿದ್ದಾರೆ. ಜಾತಿ ಜಾತಿ ಮಧ್ಯೆ ಗಲಾಟೆ ತರಲು ಮಾತ್ರ ಇದನ್ನು ಮಾಡುತ್ತಿದ್ದಾರೆ. ದಯವಿಟ್ಟು ನೀವು ಇದರಲ್ಲಿ ಪಾಲ್ಗೊಳ್ಳಬೇಡಿ ಎಂದು ಜನತೆಗೆ ತಿಳಿಸಿದ್ದಾರೆ. ಜಾತಿ ಗಣತಿಯು ರಾಜಕೀಯ ಪ್ರೇರಿತವಾಗಿದ್ದು, ಲಾಲು ಪ್ರಸಾದ್ ಯಾದವ್ ಮತ್ತು ಮುಲಾಯಂ ಸಿಂಗ್ ಯಾದವ್ ಅವರಂತಹ ನಾಯಕರು ಮಾಡಿದ ತಂತ್ರಗಳಂತೆಯೇ ಇಲ್ಲಿಯೂ ಬಳಕೆ ಮಾಡಲಾಗುತ್ತಿದೆ. ಭಾಗವಹಿಸುವಿಕೆ ಸ್ವಯಂಪ್ರೇರಿತವಾಗಿದೆ, ಕಡ್ಡಾಯವಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಧರ್ಮಸ್ಥಳ ಪ್ರಕರಣದ ದೂರುದಾರ ಚಿನ್ನಯ್ಯ ಬೆಳ್ತಂಗಡಿಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಮುಂದೆ ಸ್ವಯಂಪ್ರೇರಿತ ಹೇಳಿಕೆಯನ್ನು ದಾಖಲಿಸಿದ್ದಾರೆ. ಧರ್ಮಸ್ಥಳದಲ್ಲಿ ಎರಡು ದಶಕಗಳ ಅವಧಿಯಲ್ಲಿ ನಡೆದ ಅನೇಕ ಅತ್ಯಾಚಾರಗಳು, ಕೊಲೆಗಳು ಮತ್ತು ಸಾಮೂಹಿಕ ಅಂತ್ಯಕ್ರಿಯೆ ಕುರಿತಾದ ದೂರು ಮತ್ತು ಅವರು ಈ ಹಿಂದೆ ನೀಡಿದ ಸಾಕ್ಷ್ಯ ಎರಡೂ ಸುಳ್ಳು ಮತ್ತು ಕೆಲವು ವ್ಯಕ್ತಿಗಳ ಆಜ್ಞೆಯ ಮೇರೆಗೆ ಮಾಡಲಾಗಿತ್ತು ಎಂದು ಒಪ್ಪಿಕೊಂಡಿದ್ದಾರೆ. ತಾಂತ್ರಿಕ ಸಮಸ್ಯೆಗಳಿಂದಾಗಿ ಪೊಲೀಸರು ಆ ವ್ಯಕ್ತಿಗಳ ಹೆಸರನ್ನು ಬಹಿರಂಗಪಡಿಸಲು ಸಾಧ್ಯವಾಗಲಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಕಲಬುರಗಿ, ಬೀದರ್, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಕೃಷ್ಣಾ ಮತ್ತು ಭೀಮಾ ನದಿಗಳ ತೀರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಕೂಡಲೇ ರಕ್ಷಣಾ ಮತ್ತು ಪರಿಹಾರ ಕಾರ್ಯ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಉನ್ನತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮತ್ತು ಮಹಾರಾಷ್ಟ್ರದ ಉಜನಿ ಮತ್ತು ನೀರಾ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದ ನೀರನ್ನು ಬಿಡುಗಡೆ ಮಾಡುತ್ತಿರುವುದರಿಂದ ಹಲವಾರು ತಗ್ಗು ಪ್ರದೇಶದ ಹಳ್ಳಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗುವ ಅಪಾಯಕ್ಕೆ ಸಿಲುಕಿವೆ.
ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋ ಇಂದಿನಿಂದ ಆರಂಭವಾಗುತ್ತಿದ್ದು, ಸ್ಪರ್ಧಿಗಳ ಬಗ್ಗೆ ಕುತೂಹಲ ಮೂಡಿದೆ. ಪ್ರಮುಖವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಇನ್ ಫ್ಲುಯೆನ್ಸರ್ ಗಳ ಹೆಸರುಗಳು ಹೆಚ್ಚಾಗಿ ಕೇಳಿಬರುತ್ತಿವೆ. ಈ ನಡುವೆ ಇಂತಹುದೇ ಇನ್ ಫ್ಲುಯೆನ್ಸರ್ ಓರ್ವ ಬಿಗ್ ಬಾಸ್ ಸ್ಪರ್ಧಿಯಾಗಲು ಹೋಗಿ ಬಂಧನಕ್ಕೊಳಗಾಗಿದ್ದಾನೆ. ಇನ್ ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದ್ದ ವಿಡಿಯೋದಲ್ಲಿ ವ್ಯಕ್ತಿಯೋರ್ವ ಕನ್ನಡ ಬಿಗ್ ಬಾಸ್ ಶೋನಲ್ಲಿ ತಮಗೆ ಅವಕಾಶ ನೀಡದೇ ಇದ್ದರೆ ಬಿಗ್ ಬಾಸ್ ಗೇ ಬಾಂಬ್ ಹಾಕ್ತೀನಿ ಎಂದು ಬೆದರಿಕೆಯೊಡ್ಡಿದ್ದ. ಇದೇ ವಿಡಿಯೋವನ್ನು ಸಾಕ್ಷ್ಯವನ್ನಾಗಿ ಪರಿಗಣಿಸಿ ಕುಂಬಳಗೂಡು ಪೊಲೀಸ್ ಠಾಣೆಯ ಸಾಮಾಜಿಕ ಜಾಲತಾಣ ನಿರ್ವಹಣಾ ವಿಭಾಗದ ಪಿಸಿ ವರದಿಯನ್ನಾಧರಿಸಿ ಅಧಿಕಾರಿಗಳು ವ್ಯಕ್ತಿಯನ್ನು ಬಂಧಿಸಿದ್ದಾರೆ.
Advertisement