
ಕಲಬುರಗಿ: ಉತ್ತರ ಕರ್ನಾಟಕದಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ರೈತರ ನೆರವಿಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಎನ್‌ಡಿಆರ್‌ಎಫ್ ಪರಿಹಾರದ ಜತೆಗೆ ಹೆಚ್ಚುವರಿ ಪ್ಯಾಕೇಜ್ ಅನ್ನು ಸಿಎಂ ಸಿದ್ದರಾಮಯ್ಯ ಬುಧವಾರ ಘೋಷಿಸಿದ್ದಾರೆ.
ವೈಮಾನಿಕ ಸಮೀಕ್ಷೆ ಮತ್ತು ಅಧಿಕಾರಿಗಳ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ, NDRF ಹಣದ ಜತೆಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಪ್ರತೀ ಹೆಕ್ಟೇರ್‌ಗೆ ರೂ. 8500 ಪರಿಹಾರ ಕೊಡಲಿದೆ. ಎನ್‌ಡಿಆರ್‌ಎಫ್ ಮತ್ತು ರಾಜ್ಯ ಸರ್ಕಾರದ ಪ್ಯಾಕೇಜ್ ಸೇರಿ ರೂ. 2000 ರಿಂದ ರೂ. 2500 ಕ್ಕೂ ಹೆಚ್ಚು ಕೋಟಿ ಹಣ ಪರಿಹಾರ ಕೊಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಎನ್‌ಡಿಆರ್‌ಎಫ್ ನಿಯಮದ ಪ್ರಕಾರ ಕುಷ್ಕಿ ಜಮೀನಿಗೆ ಹೆಕ್ಟೇರ್‌ಗೆ 8500 ರೂ, ನೀರಾವರಿ ಜಮೀನಿಗೆ ಹೆಕ್ಟೇರ್‌ಗೆ 17 ಸಾವಿರ, ಬಹು ವಾರ್ಷಿಕ ಬೆಳೆಗೆ 22,500 ರೂ. ಪರಿಹಾರ ಇದೆ. ಈ ಹಣವನ್ನು ಸಮೀಕ್ಷೆ ಮುಗಿದ ತಕ್ಷಣ ಬಿಡುಗಡೆ ಮಾಡಲಾಗುತ್ತದೆ.
ಎನ್‌ಡಿಆರ್‌ಎಫ್ ಹಣದ ಜತೆಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಪ್ರತೀ ಹೆಕ್ಟೇರ್ ಗೆ 8500 ರೂ ಪರಿಹಾರ ಕೊಡಲಿದೆ. ಇದರಿಂದಾಗಿ ಕುಷ್ಕಿ ಜಮೀನಿಗೆ ಹೆಕ್ಟೇರ್‌ಗೆ 8500 ರೂ+8500 ರೂ. ಸೇರಿ ಒಟ್ಟು 17000 ಆಗುತ್ತದೆ. ನೀರಾವರಿ ಜಮೀನಿಗೆ 17000+8500 ಸೇರಿ ಒಟ್ಟು ರೂ. 25500 ಆಗಲಿದೆ.
ಬಹುವಾರ್ಷಿಕ ಬೆಳೆಗೆ ಹೆಕ್ಟೇರ್‌ಗೆ ರೂ. 22,500ರ ಜೊತೆಗೆ ರೂ. 8500 ಸೇರಿ ಒಟ್ಟು 31,000 ಸಾವಿರ ರೂಪಾಯಿ ಆಗುತ್ತದೆ. ಪ್ರವಾಹದಿಂದ ಬೆಳೆ ಜೊತೆಗೆ ಮೂಲಭೂತ ಸೌಕರ್ಯಗಳು ಅಪಾರ ಪ್ರಮಾಣದಲ್ಲಿ ಹಾನಿ ಆಗಿರುವುದರಿಂದ ರಾಜ್ಯಕ್ಕೆ ಪರಿಹಾರ ಒದಗಿಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
Advertisement