
ಚಿಕ್ಕಮಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ.
ಕೋರ್ಟ್ ನಿರ್ದೇಶನದಂತೆ ರಾಜೇಗೌಡ ವಿರುದ್ಧ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗಿತ್ತು. ಎಫ್‌ಐಆರ್ ದಾಖಲು ಬೆನ್ನಲ್ಲೇ ಲೋಕಾಯುಕ್ತ ತನಿಖೆ ಚುರುಕುಗೊಳಿಸಿದೆ.
ಕೊಪ್ಪ ನಿವಾಸಿ ದಿನೇಶ್ ಎಚ್.ಕೆ. ಸಲ್ಲಿಸಿದ್ದ ಖಾಸಗಿ ದೂರು ಆಧರಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತನಿಖೆಗೆ ಆದೇಶಿಸಿತ್ತು. ರಾಜೇಗೌಡ, ಪತ್ನಿ ಡಿ.ಕೆ. ಪುಷ್ಪಾ, ಪುತ್ರ ರಾಜ್‌ದೇವ್ ಟಿ.ಆರ್. ವಿರುದ್ಧ ಸೆ.23ರಂದು ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.
ಮಂಗಳವಾರ ಬೆಳಿಗ್ಗೆಯೇ ಖಾಂಡ್ಯ ಹೋಬಳಿ ಬಸಾಪುರ ಗ್ರಾಮದಲ್ಲಿರುವ ರಾಜೇಗೌಡ ಅವರ ನಿವಾಸಕ್ಕೆ ತೆರಳಿರುವ ಅಧಿಕಾರಿಗಳು, ದಾಖಲೆಗಳ ಸಂಗ್ರಹಕ್ಕೆ ಶೋಧ ನಡೆಸುತ್ತಿದ್ದಾರೆ. ಟಿ.ಡಿ.ರಾಜೇಗೌಡ 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡೆವಿಟ್‌ನಲ್ಲಿ ಆಸ್ತಿ ಘೋಷಣೆ ಮಾಡದ ದೂರು ನೀಡಲಾಗಿತ್ತು.
ಬೆಂಗಳೂರಿನಲ್ಲಿ ಸಂಬಂಧಿಕರ ಮನೆ ಮತ್ತು ಅವರ ಫಾರಂ ಹೌಸ್ ಸೇರಿ ನಾಲ್ಕು ಕಡೆ ಶೋಧ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಶಾಸಕರಾಗಿ ಅಕ್ರಮ ಆಸ್ತಿ ಸಂಪಾದನೆ ಮಾಡಿರುವ ಬಗ್ಗೆ ಬಿಜೆಪಿ ಮುಖಂಡ ದಿನೇಶ್ ಹೊಸೂರು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಜನಪ್ರತಿನಿಧಿಗಳ ನ್ಯಾಯಾಲಯದ ಸೂಚನೆ ಮೇರೆಗೆ ಚಿಕ್ಕಮಗಳೂರು ಲೋಕಾಯುಕ್ತ ಕಚೇರಿಯಲ್ಲಿ ಪ್ರಕರಣ ದಾಖಲಾಗಿತ್ತು. ಟಿ.ಡಿ. ರಾಜೇಗೌಡ ಅವರು ಅಧಿಕಾರ ದುರುಪಯೋಗ ಮಾಡಿಕೊಳ್ಳುವ ಜತೆಗೆ ಸರ್ಕಾರಕ್ಕೆ ಮತ್ತು ಆದಾಯ ತೆರಿಗೆ ಇಲಾಖೆಗೆ ವಂಚನೆ ಮಾಡಿದ್ದಾರೆ.
ಅವರ ವಿರುದ್ಧ ಸಮಗ್ರ ತನಿಖೆ ನಡೆಸಬೇಕು ಎಂದು ದಿನೇಶ್ ಎಚ್.ಕೆ. ದೂರಿನಲ್ಲಿ ಮನವಿ ಮಾಡಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ ಸೆ.16ರಂದು ಆದೇಶ ನೀಡಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ಸೂಚಿಸಿತ್ತು.
ಎಫ್‌ಐಆರ್ ದಾಖಲಾದ ಬೆನ್ನಲ್ಲೇ ಚಿಕ್ಕಮಗಳೂರು ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರಾಜೇಗೌಡರ ನಿವಾಸ ಬಸಾಪುರದ ಮನೆಯಲ್ಲಿ ಲೋಕಾಯುಕ್ತ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
Advertisement