

ಮಂಡ್ಯ : ಆದಿಚುಂಚನಗಿರಿ ಮಠದ 71ನೇ ಪೀಠಾಧಿಪತಿ ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿಯವರ ಗದ್ದುಗೆ ಇರುವ ಗುರು ಭೈರವೈಕ್ಯ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಏ.15ರಂದು ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುರು ಭೈರವೈಕ್ಯ ಮಂದಿರದ ಲೋಕಾರ್ಪಣೆಗೆ ಸಂಬಂಧಿಸಿದಂತೆ ಧಾರ್ಮಿಕ ವಿಧಿವಿಧಾನಗಳು ಪ್ರಾಣ ಪ್ರತಿಷ್ಠಾಪನಾ ಕಾರ್ಯ ಪೂಜಾ ಕೈಂಕರ್ಯಗಳು ಸಂಪನ್ನಗೊಂಡಿವೆ ಎಂದರು.
ಬೆಳಿಗ್ಗೆ ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. 10:50ಕ್ಕೆ ಎಚ್‌ಎಎಲ್‌ನಿಂದ ಹೆಲಿಕಾಪ್ಟರ್ ಮೂಲಕ ಆದಿಚುಂಚನಗಿರಿ ಹೆಲಿಪ್ಯಾಡ್ ತಲುಪಲಿದ್ದಾರೆ. ಅಲ್ಲಿಂದ ಗುರು ಗೋರಖ್ ನಾಥರು ತಪಸ್ಸು ಮಾಡಿದ್ದ ಜ್ವಾಲಾಪೀಠ (ಉರಿಗದ್ದುಗೆ) ದರ್ಶನ ಮಾಡಲಿದ್ದಾರೆ. ಕ್ಷೇತ್ರಪಾಲಕ ಕಾಲಭೈರವನಿಗೆ ಮಂಗಳಾರತಿ ಸಲ್ಲಿಸಿ ನಂತರ ಮಂದಿರ ಉದ್ಘಾಟಿಸಿ ವೇದಿಕೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರಧಾನಿ ಮೋದಿ ಆಗಮನದ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರಕ್ಕೆ ಏ.15ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಸಾರ್ವಜನಿಕರಿಗೆ ನಿರ್ಬಂಧ ಇರುತ್ತದೆ. ಹೀಗಾಗಿ ಬಿಜಿಎಸ್ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬರುವ ಭಕ್ತರು ಬೆಳಿಗ್ಗೆ 9 ಗಂಟೆಯೊಳಗೆ ಬರಬೇಕು ಎಂದು ತಿಳಿಸಿದರು. ಮೋದಿಯವರ ನಿರ್ಗಮನದ ನಂತರ ದೇವಾಲಯ ಹಾಗೂ ಗುರು ಭೈರವೈಕ್ಯ ಮಂದಿರಕ್ಕೆ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗುತ್ತದೆ ಎಂದರು.
ಮೈಸೂರು ಪೇಟ ಉಡುಗೊರೆ
ಪ್ರಧಾನಿ ನರೇಂದ್ರ ಮೋದಿ ಅವರು ಆದಿಚುಂಚನಗಿರಿ ಶ್ರೀ ಮಠಕ್ಕೆ ಭೇಟಿ ನೀಡುವ ವೇಳೆ ಅವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಧರಿಸುತ್ತಿದ್ದ ಮಾದರಿಯ ಪೇಟವನ್ನ ಉಡುಗೊರೆಯಾಗಿ ನೀಡಲು ಸಿದ್ಧತೆ ನಡೆದಿದೆ. ಬನಾರಸ್ ಸೀರೆ, ಮೋಲ್ಡ್ ಬಳಸಿ ಪೇಟ ತಯಾರಿಸಲಾಗಿದೆ.
ಕಲಾವಿದ ನಂದನ್ ಸಿಂಗ್ ಅವರು ಈ ಪೇಟವನ್ನು ಸಿದ್ಧಗೊಳಿಸಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಧರಿಸುತ್ತಿದ್ದ ಮಾದರಿಯ ಪೇಟ ಇದಾಗಿದ್ದು, ಕೆಂಪು ವರ್ಣದ ಮೈಸೂರು ರೇಷ್ಮೆ, ಬನಾರಸ್ ಸಾಫ್ಟ್ ಸಿಲ್ಕ್ ಅನ್ನು ಬಳಸಲಾಗಿದೆ. ಮಧ್ಯದಲ್ಲಿ ಮೈಸೂರಿನ ರಾಜ ಲಾಂಛನ ಗಂಡುಬೇರುಂಡವನ್ನು ಸೇರಿಸಲಾಗಿದೆ. ಎರಡೂಕಡೆ ಸಣ್ಣ ಸಣ್ಣ ಮುತ್ತುಗಳನ್ನು ಪೋಣಿಸಲಾಗಿದೆ. ಇದಕ್ಕಾಗಿ ಕಲಾವಿದ ನಂದನ್ ಸಿಂಗ್ 5 ದಿನಗಳ ಕಾಲ ಶ್ರಮಿಸಿದ್ದಾರೆ.
ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಇಡೀ ಆದಿಚುಂಚನಗಿರಿ ಕ್ಷೇತ್ರ ಮಧುವಣಗಿತ್ತಿಯಂತೆ ಕಂಗೊಳಿಸುತ್ತಿದೆ. ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಈ ಭೈರವೈಕ್ಯ ಮಂದಿರವು ಹಲವು ವಿಶೇಷತೆಗಳಿಂದ ಕೂಡಿದೆ. ಕಾರ್ಯಕ್ರಮಕ್ಕಾಗಿ ಬಿಜಿಎಸ್ ಕ್ರೀಡಾಂಗಣದಲ್ಲಿ ಬೃಹತ್ ವೇದಿಕೆ ನಿರ್ಮಾಣವಾಗಿದ್ದು, ಒಂದು ಲಕ್ಷಕ್ಕೂ ಅಧಿಕ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಮುನ್ನೆಚ್ಚರಿಕಾ ಕ್ರಮವಾಗಿ 2000ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಕಾರ್ಯಕ್ರಮದ ನಂತರ ಮತ್ತೆ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಮರಳಿ, ಅಲ್ಲಿಂದ ಕೇರಳ ಪ್ರವಾಸಕ್ಕೆ ತೆರಳಲಿದ್ದಾರೆ.
Advertisement