

ಬೆಂಗಳೂರು: ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ, ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಹಾಗೂ ಪೆನ್‌ಡ್ರೈವ್ ಪತ್ತೆಯಾಗಿದೆ. ಇದು ಕಾರಾಗೃಹ ಇಲಾಖೆಯಲ್ಲಿ ದೊಡ್ಡ ಸಂಚಲನ ಮೂಡಿಸಿದ್ದು, ಮೊಬೈಲ್ ಹಾಗೂ ಪೆನ್ಡ್ರೈವ್ನಲ್ಲಿ ಏನೇನಿದೆ ಎನ್ನುವುದು ಪರಿಶೀಲನೆ ನಡೆಸಿದಾಗ ಅಶ್ಲೀಲ ವಿಡಿಯೋಗಳು ಇರುವುದು ಪತ್ತೆಯಾಗಿವೆ. ರಾಜ್ಯದ ಗೃಹ ಇಲಾಖೆಯ ಕಾರ್ಯವೈಖರಿ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದ್ದು, ಇದರ ಪರಿಣಾಮ ಪ್ರಜ್ವಲ್ ರೇವಣ್ಣನನ್ನು ವಿಐಪಿ ಸೆಲ್ನಿಂದ ಸಾಮಾನ್ಯ ಸಜಾ ಬಂಧಿಗಳ ಸೆಲ್ಗೆ ಶಿಫ್ಟ್ ಮಾಡಲಾಗಿದೆ.
ಪ್ರಜ್ವಲ್ ರೇವಣ್ಣ ಸೆಲ್ ನಲ್ಲಿ ನೀಲಿ ಬಣ್ಣದ ರೆಡ್ ಮಿ 5ಜಿ ಮೊಬೈಲ್ ಫೋನ್ , ಒಂದು ಚಾರ್ಜರ್ , ಒಂದು ನೀಲಿ ಪಾಕೆಟ್ ನೋಟ್‌ಬುಕ್ ಹಾಗೂ ಒಂದು ಕಪ್ಪು ಬಣ್ಣದ ಸ್ಯಾಂಡಿಸ್ಕ್ ಪೆನ್‌ಡ್ರೈವ್ ಸಿಕ್ಕಿದೆ. ಮೊಬೈಲ್ ಹಾಗೂ ಪೆನ್ಡ್ರೈವ್ನಲ್ಲಿ ಅಶ್ಲೀಲ ವಿಡಿಯೋಗಳು ಇರುವುದು ಕಂಡುಬಂದಿದ್ದು, ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯಾಗಿ ಜೈಲು ಸೇರಿ ಎರಡು ವರ್ಷವಾಗುತ್ತಾ ಬಂದರೂ ಇನ್ನೂ ಪ್ರಜ್ವಲ್ ರೇವಣ್ಣನಿಗೆ ಬುದ್ದಿ ಬಂದಿಲ್ವಾ ಎಂದು ಜನರು ಪ್ರಶ್ನೆ ಮಾಡುವಂತೆ ಮಾಡಿದೆ.
ಹಾಗಾದರೆ ಪ್ರಜ್ವಲ್ ರೇವಣ್ಣಗೆ ಮೊಬೈಲ್, ಪೆನ್‌ಡ್ರೈವ್ ಕೊಟ್ಟವರು ಯಾರು ಅದರಲ್ಲಿ ಅಶ್ಲೀಲ ವಿಡಿಯೋಗಳು ಹೇಗೆ ಬಂದವು ಎಂಬುದರ ಬಗ್ಗೆ ತನಿಖೆ ಮಾಡಬೇಕಿದೆ. ಈ ಸಂಬಂಧ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಡಿಜಿಪಿ ಅಲೋಕ್ ಕುಮಾರ್ ಅವರು, ಜೈಲು ಸುಪರಿಡೆಂಟ್ಗೆ ನೊಟೀಸ್ ಜಾರಿ ಮಾಡಿದ್ದಾರೆ.
ಸಾಮಾನ್ಯ ಸೆಲ್ಗೆ ಶಿಫ್ಟ್, ಲೈಬ್ರರಿ ಕೆಲಸ ಮಾಡುವಂತೆ ತಾಕೀತು
ಮೊಬೈಲ್ ಸಿಕ್ಕ ಪ್ರಕರಣ ತೀವ್ರ ಸುದ್ದಿಯಾಗುತ್ತಿದ್ದಂತೆ ಪ್ರಜ್ವಲ್ನ್ನು ವಿಐಪಿಯಿಂದ ಸಮಾನ್ಯಾ ಸಜಾ ಬಂಧಿ ಖೈದಿಗಳ ಸೆಲ್ಗೆ ಶಿಫ್ಟ್ ಮಾಡಲಾಗಿದೆ. ವಿಐಪಿ ಸೆಲ್ನಲ್ಲಿ ಪ್ರಜ್ವಲ್ ರೇವಣ್ಣ ಹಾಗೂ ಮತ್ತೋರ್ವ ವಿಚಾರಣಾ ಖೈದಿ ಪ್ರತಾಪ್ ರಾಯ್ ಇದ್ದರು. ಪೊಕ್ಸೋ ಕೇಸ್ ನಲ್ಲಿ ಬಂಧಿತ ಪ್ರತಾಪ್ ರಾಯ್, ಪ್ರಜ್ವಲ್ ರೇವಣ್ಣಗೆ ಅಸಿಸ್ಟೆಂಟ್ ರೀತಿ ಇದ್ದ ಎಂದು ತಿಳಿದುಬಂದಿದೆ. ಇದೀಗ ಪ್ರಜ್ವಲ್ 20 ಖೈದಿಗಳ ಜೊತೆ ಒಂದೇ ಟಾಯ್ಲೆಟ್ ಇರೋ ಸೆಲ್ ಗೆ ಶಿಫ್ಟ್ ಆಗಿದ್ದಾರೆ. ಪ್ರಜ್ವಲ್ 20 ಖೈದಿಗಳ ಜೊತೆ ಒಂದೇ ಟಾಯ್ಲೆಟ್ ಬಳಸಬೇಕಿದೆ. ಯೂನಿಫಾರ್ಮ್ ಹಾಕಿ ಲೈಬ್ರರಿ ಕೆಲಸ ಮಾಡಲು ಸೂಚನೆ ನೀಡಲಾಗಿದೆ. ಕಠಿಣ ಶಿಕ್ಷೆ ಹಿನ್ನೆಲೆ ಜೈಲಿನ ಕಡ್ಡಾಯ ಸಮವಸ್ತ್ರ ಧರಿಸಿ ಲೈಬ್ರರಿ ಕೆಲಸ ಮಾಡಲು ತಿಳಿಸಲಾಗಿದೆ.
ಕರ್ತವ್ಯ ಲೋಪ ಎಸಗಿದ ಹಿನ್ನೆಲೆ ಜೈಲಿನ ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಈರಣ್ಣ ರಂಗಾಪುರರನ್ನು ಅಮಾನತುಗೊಳಿಸಲಾಗಿದೆ. ಜೈಲು ಎಸ್.ಪಿ ಅನ್ಶುಕುಮಾರ್ ಗೂ ಡಿಜಿಪಿ ಅಲೋಕ್ ಕುಮಾರ್ ನೋಟಿಸ್ ಜಾರಿ ಮಾಡಿದ್ದು, ಕರ್ತವ್ಯ ಲೋಪಕ್ಕೆ ಕಾರಣ ನೀಡುವಂತೆ ಸೂಚಿಸಿದ್ದಾರೆ.