

ಬೆಂಗಳೂರು: ಅದಾನಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಗೂ ಉದ್ಯಮಿ ಗೌತಮ್ ಅದಾನಿ (Gautam Adani) ಅವರು ಸದಾಶಿವನಗರದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರ ನಿವಾಸಕ್ಕೆ ಭಾನುವಾರ ಭೇಟಿ ನೀಡಿ ಮಾತುಕತೆ ನಡೆಸಿರುವುದು ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
ಉದ್ದಿಮೆ ಅವಕಾಶಗಳ ಜತೆಗೆ, ಬಹುನಿರೀಕ್ಷಿತ ಬೆಂಗಳೂರು ಸುರಂಗ ರಸ್ತೆ ಯೋಜನೆ ಟೆಂಡರ್‌ಗೆ ಸಂಬಂಧಿಸಿದಂತೆ ಇಬ್ಬರ ನಡುವೆ ಮಹತ್ವದ ಚರ್ಚೆ ನಡೆದಿದೆ ಎನ್ನಲಾಗಿದೆ.
ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್‌ಗೆ ಗೌತಮ್ ಅದಾನಿ ಭೇಟಿ ನೀಡಿದ್ದರು. ಅಲ್ಲಿಂದ ಏರ್‌ಪೋರ್ಟ್‌ಗೆ ವಾಪಸ್ ತೆರಳುವ ವೇಳೆ ಸಿಎಂ ಡಿಕೆಶಿ ಅವರನ್ನು ಭೇಟಿಯಾಗಿದ್ದಾರೆ.
ಅತ್ತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅದಾನಿ ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತ ಎಂದು ಟೀಕೆ ಮಾಡುತ್ತಿದ್ದರೆ, ಇತ್ತ ಸಿಎಂ ಡಿ.ಕೆ.ಶಿವಕುಮಾರ್ ಅವರು ಗೌತಮ್ ಅದಾನಿಯನ್ನು ಭೇಟಿಯಾಗಿರುವುದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ.
ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದೇನು?
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಡಿ.ಕೆ.ಶಿವಕುಮಾರ್, ಗೌತಮ್ ಅದಾನಿ ಅವರಿಗೆ ಇಲ್ಲಿ ಹಲವು ಉದ್ಯಮಗಳಿವೆ. ನಾನು ಮೊದಲ ಬಾರಿ ಸಿಎಂ ಆಗಿರುವುದರಿಂದ ಸೌಜನ್ಯಯುತ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.