News Wrap 04-02-2026 | ಅಬಕಾರಿ ಇಲಾಖೆ ಹಗರಣ: ಸಚಿವ ಆರ್ ಬಿ ತಿಮ್ಮಾಪುರ ರಾಜೀನಾಮೆಗೆ ಬಿಜೆಪಿ ಪಟ್ಟು; Namma Metro ಪ್ರಯಾಣ ದರ ಶೇ.5 ರಷ್ಟು ಏರಿಕೆಗೆ ನಿರ್ಧಾರ!

News Wrap 04-02-2026 | ಅಬಕಾರಿ ಇಲಾಖೆ ಹಗರಣ: ಸಚಿವ ಆರ್ ಬಿ ತಿಮ್ಮಾಪುರ ರಾಜೀನಾಮೆಗೆ ಬಿಜೆಪಿ ಪಟ್ಟು; Namma Metro ಪ್ರಯಾಣ ದರ ಶೇ.5 ರಷ್ಟು ಏರಿಕೆಗೆ ನಿರ್ಧಾರ!

1. ಅಬಕಾರಿ ಇಲಾಖೆ ಹಗರಣ: ಸಚಿವ ಆರ್ ಬಿ ತಿಮ್ಮಾಪುರ ರಾಜೀನಾಮೆಗೆ ಬಿಜೆಪಿ ಪಟ್ಟು

ಅಬಕಾರಿ ಇಲಾಖೆಯಲ್ಲಿ ಲಂಚ, ವರ್ಗಾವಣೆ ದಂಧೆ ಮತ್ತು ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿರುವ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್, ಈ ಸಂಬಂಧ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ರಾಜೀನಾಮೆಗೆ ಪಟ್ಟು ಹಿಡಿದಿವೆ. ಸದಸ್ಯರು ಅಬಕಾರಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷಗಳು ಮಂಗಳವಾರ ಸದನದಲ್ಲೇ ಆಹೋರಾತ್ರಿ ಧರಣಿ ನಡೆಸಿದ್ದವು. ಇಂದು ಕಲಾಪ ಪುನಾರಂಭಗೊಂಡ ನಂತರವೂ ವಿಪಕ್ಷಗಳು ಸಚಿವ ತಿಮ್ಮಾಪುರ ರಾಜೀನಾಮೆಗೆ ಪಟ್ಟು ಹಿಡಿದು ಧರಣಿ ಮುಂದುವರಿಸಿದವು. ಪ್ರತಿಭಟನೆಗೆ ನಾಯಕತ್ವ ನೀಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು, ಅಬಕಾರಿ ಇಲಾಖೆಯಲ್ಲಿ ಪರವಾನಗಿ ನೀಡಲು ಹಾಗೂ ವರ್ಗಾವಣೆ ಸುಗಮಗೊಳಿಸಲು ಲಂಚ ಪಡೆಯಲಾಗುತ್ತಿದೆ ಎಂದು ಆರೋಪಿಸಿದರು. ಮದ್ಯ ವ್ಯಾಪಾರಿಗಳ ಸಂಘವು ಅಬಕಾರಿ ಇಲಾಖೆಯ ಹಗರಣವು ಸುಮಾರು 6,000 ಕೋಟಿ ರೂಪಾಯಿ ಮೊತ್ತದಷ್ಟು ಇದೆ. ಸಂಬಂಧಿತ ಆಡಿಯೋ ದಾಖಲೆಗಳನ್ನು ಬಿಡುಗಡೆ ಮಾಡಲಾಗಿದೆ. ಲೋಕಾಯುಕ್ತರಿಗೆ ದೂರುಗಳು ಸಲ್ಲಿಸಲಾಗಿದೆ. ಅಸ್ಸಾಂ, ಕೇರಳ ಚುನಾವಣೆಗಳಿಗೆ ಬಳಸುತ್ತಿರುವ ಹಣ ಕರ್ನಾಟಕ ಅಬಕಾರಿ ಇಲಾಖೆಯಿಂದ ಬಂದಿದೆ ಎಂದು ಹೇಳಿದರು. ಸ್ವಲ್ಪ ಸಮಯದ ಬಳಿಕ ಘೋಷಣೆಗಳು ಮತ್ತು ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಾಗ, ಉಪ ಸ್ಪೀಕರ್ ರುದ್ರಪ್ಪ ಮಾನಪ್ಪ ಲಮಾಣಿ ಸದನವನ್ನು ಕೆಲಕಾಲ ಮುಂದೂಡಿದರು. ಬಿಜೆಪಿ ಆರೋಪ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, ಲಂಚ ಪಡೆದಿದ್ದರೆ, ಆ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕು. ನಾನು ಯಾವ ತಪ್ಪು ಮಾಡಿದ್ದೇನೆ? ಹೀಗಾಗಿ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

2. ಬೆಂಗಳೂರು ಮತ್ತು ಹೊಸೂರು ನಡುವಿನ ಹೆದ್ದಾರಿಯಲ್ಲಿ ರಸ್ತೆ ಕುಸಿತ; ಟ್ರಾಫಿಕ್ ಜಾಮ್

ಬೆಂಗಳೂರು ಮತ್ತು ಹೊಸೂರು ನಡುವಿನ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಅತ್ತಿಬೆಲೆ ಬಳಿ ಭಾರೀ ಪ್ರಮಾಣದಲ್ಲಿ ರಸ್ತೆ ಕುಸಿದಿದ್ದು, ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಅತ್ತಿಬೆಲೆ ಮತ್ತು ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇದ್ದಕ್ಕಿದ್ದಂತೆ ರಸ್ತೆ ಕುಸಿತ ಸಂಭವಿಸಿದ್ದು, ಘಟನೆಯ ನಂತರ ವಾಹನ ಸವಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪೀಕ್ ಅವರ್‌ನಲ್ಲಿ ಈ ಘಟನೆ ಸಂಭವಿಸಿದ್ದರಿಂದ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪ್ರಸ್ತುತ ನಡೆಯುತ್ತಿರುವ ರಸ್ತೆ ವಿಸ್ತರಣೆ ಮತ್ತು NHAI ಯೋಜನೆಗಳು ಈ ಘಟನೆಗೆ ಕಾರಣವಾಗಿದ್ದು, ಅಸ್ಥಿರವಾದ ಮಣ್ಣು ಮತ್ತು ಭಾರೀ ಯಂತ್ರೋಪಕರಣಗಳ ಸಂಚಾರದಿಂದ ರಸ್ತೆ ಕುಸಿತವಾಗಿದೆ ಎನ್ನಲಾಗುತ್ತಿದೆ.

3. Namma Metro ಪ್ರಯಾಣ ದರ ಶೇ.5 ರಷ್ಟು ಏರಿಕೆಗೆ ನಿರ್ಧಾರ

ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆ ವಿಚಾರ ಮತ್ತೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಬೆಂಗಳೂರು ಮೆಟ್ರೋ ರೈಲು ನಿಗಮ ಬೋರ್ಡ್ ಸಭೆಯಲ್ಲಿ ಶೇ 5ರಷ್ಟು ಟಿಕೆಟ್ ದರ ಹೆಚ್ಚಳಕ್ಕೆ ಒಪ್ಪಿಗೆ ನೀಡಿದೆ.

ಆದರೆ ಈ ದರ ಏರಿಕೆ ಜಾರಿಗೆ ಬರಲು ರಾಜ್ಯ ಸರ್ಕಾರದ ಅನುಮತಿ ಅಗತ್ಯವಾಗಿದ್ದು, ಅದಕ್ಕಾಗಿ ಬಿಎಂಆರ್‌ಸಿಎಲ್ ಅಧಿಕಾರಿಗಳು ಸರ್ಕಾರದ ಒಪ್ಪಿಗೆ ಪಡೆಯಲು ಸಿದ್ಧತೆ ನಡೆಸಿದ್ದಾರೆ. ಕಳೆದ ವರ್ಷ ಫೆಬ್ರವರಿ 9ರಂದು ಮೆಟ್ರೋ ಟಿಕೆಟ್ ದರವನ್ನು ಶೇ101.5ರಷ್ಟು ಏರಿಸಲಾಗಿತ್ತು. ಇದಕ್ಕೆ ಪ್ರಯಾಣಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇವಲ ಮೂರು ದಿನಗಳಲ್ಲೇ ದರವನ್ನು ಶೇ.71.5ಕ್ಕೆ ಇಳಿಸಲಾಗಿತ್ತು.

4. ನಿಮಗೆ ಮಾನ, ಮರ್ಯಾದೆ ಇದ್ಯಾ?: ಬಿಜೆಪಿ ವಿರುದ್ಧ ಶಿವಲಿಂಗೇ ಗೌಡ ಗರಂ

ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ ಹಿನ್ನೆಲೆ ಸಚಿವ ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸಿ ಬುಧವಾರ ವಿಧಾನಸಭೆಯಲ್ಲಿ ಪ್ರತಿಭಟನೆ ಮುಂದುವರಿಸಿದ ಬಿಜೆಪಿ ನಾಯಕರ ವಿರುದ್ದ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಏಕವಚನದಲ್ಲೇ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ ಪ್ರಸಂಗ ನಡೆಯಿತು. ವಿಧಾನಸಭೆಯಲ್ಲಿ ಬಿಜೆಪಿ ನಾಯಕರ ವಿರುದ್ದ ಕೆಂಡಕಾರಿದ ಶಾಸಕ ಕೆ.ಎಂ ಶಿವಲಿಂಗೇಗೌಡ, ನಿಮಗೆ ಏನಾದರೂ ಮಾನ ಮರ್ಯಾದೆ ಇದೆಯಾ? ಇದು ಅಸೆಂಬ್ಲಿನಾ ಅಥವಾ ಡ್ಯಾನ್ಸ್ ಮಾಡೋಕೆ ಬಂದಿದ್ದೀರಾ? ನಾವು ಧರಣಿ ಮಾಡುತ್ತೇವೆ ಆದರೆ ಈ ರೀತಿಯಾಗಿ ಮಾಡಿಲ್ಲ. ನಿಮ್ಮತರ ಕೆಟ್ಟ ಜನರನ್ನ ನಾನು ಎಲ್ಲಿಯೂ ನೋಡಿಲ್ಲ ಎಂದು ಜಾಡಿಸಿದರು.

5. ಮಾನಸಿಕ ತುರ್ತು ಪರಿಸ್ಥಿತಿಗಳಿಗೆ ಸಮಯೋಚಿತ ಸಹಾಯದ ಉದ್ದೇಶ; 112ಕ್ಕೆ TeleMANAS ಸಹಾಯವಾಣಿ ಜೋಡಣೆ

ಮಾನಸಿಕ ತುರ್ತು ಪರಿಸ್ಥಿತಿಗಳಿಗೆ, ಆತ್ಮಹತ್ಯೆ ಅಪಾಯ ಸೇರಿದಂತೆ, ಮಾನಸಿಕ ಒತ್ತಡಕ್ಕೆ ಸಂಬಂಧಿಸಿದ ಕರೆಗಳ ಸರಾಗ ವರ್ಗಾವಣೆ ಮತ್ತು ಸಮಯೋಚಿತ ಸಹಾಯ ಒದಗಿಸಲು ಪೊಲೀಸರು ಬುಧವಾರ ಟೆಲಿ ಮಾನಸ್ ಅನ್ನು 112ನೊಂದಿಗೆ ಸಂಯೋಜಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತುರ್ತು ಮಾನಸಿಕ ಆರೋಗ್ಯ ಪ್ರತಿಕ್ರಿಯೆಯನ್ನು ಮತ್ತಷ್ಟು ಬಲಪಡಿಸಲು ಟೆಲಿ ಮಾನಸ್ ಗಾಗಿ ಏಕೀಕರಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇಂದು ಹಮಿಕೊಂಡಿದ್ದ ತುರ್ತು ಸ್ಪಂದನ ಸಹಾಯ ವ್ಯವಸ್ಥೆ (ನಮ್ಮ 112) ಸಹಯೋಗದೊಂದಿಗೆ ಟೆಲಿ ಮಾನಸ್‌ ಸಂಯೋಜನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರ ಪೊಲೀಸ್‌ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಅವರು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ NIMHANS ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಸಹ ಭಾಗವಹಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com