News wrap of the day 17-02-2026| Muda case: CS ಶಾಲಿನಿ ರಜನೀಶ್ ವಿರುದ್ಧ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ, ಆಡಿಯೋ ಬಿಡುಗಡೆ; ನಾಯಿ, ನಾಯಕತ್ವ: ಮಹದೇವಪ್ಪ ಹೇಳಿಕೆಗೆ DK Suresh ಪ್ರತಿಕ್ರಿಯೆ ಏನು?

News wrap of the day
ಸುದ್ದಿ ಮುಖ್ಯಾಂಶಗಳುonline desk

1. "ಭ್ರಷ್ಟಾಚಾರ ರೇಟ್ ಕಾರ್ಡ್" ಜಾಹೀರಾತು: ರಾಹುಲ್ ಗಾಂಧಿಗೆ ಹೈಕೋರ್ಟ್ ರಿಲೀಫ್

2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಮುಖ ದಿನಪತ್ರಿಕೆಗಳಲ್ಲಿ "ಭ್ರಷ್ಟಾಚಾರ ರೇಟ್ ಕಾರ್ಡ್" ಜಾಹೀರಾತು ಪ್ರಕಟಿಸಿದ್ದಕ್ಕಾಗಿ ರಾಜ್ಯ ಬಿಜೆಪಿ ಘಟಕ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ರದ್ದುಗೊಳಿಸಿದೆ. ಈ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಬಿಡುಗಡೆ ಮಾಡಿದ್ದ ‘ಕರಪ್ಶನ್ ರೇಟ್ ಕಾರ್ಡ್’ ಜಾಹೀರಾತನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಪರವಾಗಿ ಕೇಶವಪ್ರಸಾದ್ ಎಂಬುವವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇದನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಹೈಕೋರ್ಟ್ ಮೆಟ್ಟಿಲೇರಿದ್ದರು.

2. ನಾಯಿ, ನಾಯಕತ್ವ: ಮಹದೇವಪ್ಪ ಹೇಳಿಕೆಗೆ DK Suresh ಪ್ರತಿಕ್ರಿಯೆ ಏನು?

ನಾಯಕತ್ವ ಬದಲಾವಣೆ ಸಂಬಂಧ ಕೆಲ ಶಾಸಕರ ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದು, ಈ ನಡುವಲ್ಲೇ ಸಚಿವ ಹೆಚ್.ಸಿ.ಮಹದೇವಪ್ಪ ನೀಡಿದ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ನಾಯಕತ್ವ ಬದಲಾವಣೆ ಸಂಬಂಧ ಶಾಸಕರು ಹೇಳಿಕೆಗಳನ್ನು ನೀಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಇಲ್ಲಿ ನಾಯಕತ್ವದ ಚರ್ಚೆ ಎಲ್ಲಿದೆ..?. ಹೈಕೋರ್ಟ್ ಬೀದಿ ನಾಯಿಗಳನ್ನೆಲ್ಲ ಹಿಡಿದು ಒಳಗೆ ಹಾಕಿ ಅಂತ ಪದೇ ಪದೆ ಹೇಳುತ್ತಿದೆ.‌ ಇಲ್ಲಿ ರಾಜಕೀಯ ನಾಯಕತ್ವ ಗಟ್ಟಿಯಾಗಿದೆ ಎಂದು ಹೇಳಿದ್ದಾರೆ. ಬಳಿಕ ಮಾಧ್ಯಮಗಳು ಮರು ಪ್ರಶ್ನೆ ಹಾಕಿದ್ದಕ್ಕೆ ಉತ್ತರಿಸಿ, ಹೈಕೋರ್ಟ್ ಹೇಳಿದ್ದನ್ನು ನಾನು ಹೇಳಿದೆ ಅಷ್ಟೇ. ನಾಯಕರು ನಾಯಿಗಳು ಅಂತ ನಾನು ಹೇಳಿದ್ದೀನಾ? ಹೈಕಮಾಂಡ್‌ಗೆ ನಿರ್ದೇಶನ ಕೊಡುವವರು ಯಾರು? ನಾನಾ ನೀವಾ? ಬಾಲವೇ ನಾಯಿಯನ್ನು ಅಲ್ಲಾಡಿಸಲು ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ನುಡಿದ್ದಾರೆ. ಮಹದೇವಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಂಸದ ಡಿಕೆ ಸುರೇಶ್, ನಾಯಿಗಳನ್ನು ಯಾರಿಗೆ ಹೋಲಿಸಿದ್ದಾರೋ ಗೊತ್ತಿಲ್ಲ, ನಿಯತ್ತಿಗೆ ನಾಯಿಯೇ ಪ್ರಸಿದ್ಧಿ. ಕಟ್ಟಾ ಕಾಂಗ್ರೆಸ್ಸಿಗರು ನಿಯತ್ತಿನ ನಾಯಿಗಳು, ಬೀದಿ ನಾಯಿಗಳಲ್ಲ, ಯಜಮಾನನಿಗೆ ಋಣ ತೀರಿಸುತ್ತೆ, ನಮ್ಮನ್ನ ಕಾಪಾಡುತ್ತೆ ಎಂಬ ವಿಶ್ವಾಸದಲ್ಲಿ ಮಾಲೀಕ ನಾಯಿಗೆ ಊಟ ಹಾಕುತ್ತಾರೆ ಎಂದಿದ್ದಾರೆ.

3. ಚಿಕ್ಕಮಗಳೂರು: ಹಿಂದೂ ಮನೆ ಮೇಲೆ ನಿರಂತರ ಕಲ್ಲು ತೂರಾಟ; ಉದ್ವಿಗ್ನ ವಾತಾವರಣ

ಚಿಕ್ಕಮಗಳೂರು ನಗರದ ವಿಜಯನಗರ ಬಡಾವಣೆಯಲ್ಲಿ ಮನೆಯೊಂದರ ಮೇಲೆ ಕಳೆದ ಒಂದು ವಾರದಿಂದ ಕಿಡಿಗೇಡಿಗಳು ರಾತ್ರಿ ವೇಳೆ ನಿರಂತರ ಕಲ್ಲುತೂರಾಟ ನಡೆಸಿದ್ದು, ಘಟನೆಯಿಂದ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಘಟನೆ ಬೆನ್ನಲ್ಲೇ ಕೆಲ ಮುಸ್ಲಿಂ ಯುವಕರನ್ನು ಬಜರಂಗದಳ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದರಿಂದಾಗಿ ಸ್ಥಳದಲ್ಲಿ ಸೋಮವಾರ ರಾತ್ರಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಮತ್ತೊಂದೆಡೆ, ಘರ್ಷಣೆ ವೇಳೆ ಇಬ್ಬರು ಮುಸ್ಲಿಂ ಯುವಕರು ಗಾಯಗೊಂಡಿದ್ದು, ಅವರನ್ನು ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಏತನ್ಮಧ್ಯೆ ಬಜರಂಗದಳ ಹಾಗೂ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈ ನಡುವೆ ಕಲ್ಲು ತೂರಾಟಕ್ಕೊಳಗಾದ ಮನೆಯ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದು, ದೂರಿನಲ್ಲಿ ಮಧ್ಯಾಹ್ನ ಹಾಗೂ ರಾತ್ರಿ ವೇಳೆ ಮನೆ ಮೇಲೆ ಕಲ್ಲು ಎಸೆಯಲಾಗುತ್ತಿದೆ. ನಾವು ಭಯದಲ್ಲಿ ಜೀವನ ನಡೆಸುವಂತಾಗಿದೆ ಎಂದು ಹೇಳಿದ್ದಾರೆ.

4. Muda case: CS ಶಾಲಿನಿ ರಜನೀಶ್ ವಿರುದ್ಧ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ, ಆಡಿಯೋ ಬಿಡುಗಡೆ

ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ನನಗೆ ಹಣದ ಆಮಿಷವೊಡ್ಡಿ ಮುಡಾ ಹಗರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡ್ತಿದ್ದಾರೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧವೂ ಸ್ನೇಹಮಯಿ ಕೃಷ್ಣ ಕಮಿಷನ್ ಆರೋಪ ಮಾಡಿದ್ದಾರೆ. ಮಾಜಿ ಮುಡಾ ಆಯುಕ್ತ ಡಿ.ಬಿ. ನಟೇಶ್ ಅವರು ನನ್ನನ್ನು ಸಂಪರ್ಕಿಸುವ ಪ್ರಯತ್ನ ಮಾಡಿದ್ದು, ನನಗೆ ಹಣದ ಆಮಿಷವೊಡ್ಡಿ ಮುಡಾ ಹಗರಣವನ್ನು ಮುಚ್ಚಿ ಹಾಕಲು ಪ್ರಯತ್ನ ನಡೆಸಿದರು ಎಂದು ಸ್ನೇಹಮಯಿ ಕೃಷ್ಣ ಆರೋಪ ಮಾಡಿದ್ದಾರೆ. ಈ ಸಂಬಂಧ ಆಡಿಯೋ ಕ್ಲಿಪ್ ಬಿಡುಗಡೆ ಮಾಡಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಕೋಟ್ಯಂತರ ಹಣ ಕೊಟ್ಟು ನಟೇಶ್ ಮುಂಬಡ್ತಿ ಪಡೆದಿದ್ದಾರೆ. ಮುಂಬಡ್ತಿಗಾಗಿ ಶಾಲಿನಿ ರಜನೀಶ್ ಅವರಿಗೆ ಹಣ ನೀಡಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ.

5. ಫೆ.28 ರಿಂದ ಮಾರ್ಚ್‌ 17 ರ ವರೆಗೆ ದ್ವಿತೀಯ ಪಿಯು; ಮಾರ್ಚ್‌ 18 ರಿಂದ ಏಪ್ರಿಲ್‌ 2 ರ ವರೆಗೆ SSLC ಪರೀಕ್ಷೆ

ಫೆ.28 ರಿಂದ ಮಾರ್ಚ್‌ 17 ರ ವರೆಗೆ ದ್ವಿತೀಯ ಪಿಯುಸಿ ಹಾಗೂ ಮಾರ್ಚ್‌ 18 ರಿಂದ ಏಪ್ರಿಲ್‌ 2 ರ ವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿವೆ ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ದ್ವಿತೀಯ ಪಿಯುಸಿ ಪರೀಕ್ಷೆಗಳು ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ನಡೆದರೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬೆಳಗ್ಗೆ 10 ರಿಂದ ಮಧ್ಯಾಹ್ನ 1:15 ಗಂಟೆ ವರೆಗೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com