ಮದ್ಯ ಪ್ರಿಯರಿಗೆ ಸಿಹಿಸುದ್ದಿ: ನಮ್ಮ ಮೆಟ್ರೋದಲ್ಲಿ ಸೀಲ್ಡ್ ಲಿಕ್ಕರ್ ಬಾಟಲಿ ಕೊಂಡೊಯ್ಯಲು ಶೀಘ್ರ ಅನುಮತಿ

ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಮೂಲಗಳ ಪ್ರಕಾರ, ಈ ವಿಷಯವನ್ನು ಹಲವು ಬಾರಿ ಚರ್ಚಿಸಲಾಗಿದ್ದು, ಇತ್ತೀಚಿನ ಸಭೆಯಲ್ಲೂ ಮತ್ತೆ ಪ್ರಸ್ತಾಪಿಸಲಾಗಿದೆ.
Namma Metro
ನಮ್ಮ ಮೆಟ್ರೊ
Updated on

ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರಿಗೆ ಶೀಘ್ರದಲ್ಲೇ ಮುಚ್ಚಿದ (ಸೀಲ್ಡ್) ಮದ್ಯದ ಬಾಟಲಿಗಳನ್ನು ಕೊಂಡೊಯ್ಯಲು ಅನುಮತಿ ದೊರೆಯುವ ಸಾಧ್ಯತೆ ಇದೆ.

ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಮೂಲಗಳ ಪ್ರಕಾರ, ಈ ವಿಷಯವನ್ನು ಹಲವು ಬಾರಿ ಚರ್ಚಿಸಲಾಗಿದ್ದು, ಇತ್ತೀಚಿನ ಸಭೆಯಲ್ಲೂ ಮತ್ತೆ ಪ್ರಸ್ತಾಪಿಸಲಾಗಿದೆ. ತಾತ್ವಿಕವಾಗಿ ಅನುಮೋದನೆ ದೊರೆತಿದ್ದರೂ, ಜಾರಿಗೆ ಬರಲು ಇನ್ನೂ ಸ್ವಲ್ಪ ಸಮಯ ಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ.

ದೆಹಲಿ ಮಾದರಿಯನ್ನು ಅನುಸರಿಸಲಾಗುತ್ತದೆ. ಪ್ರಸ್ತುತ ದೆಹಲಿ ಮೆಟ್ರೋದ ಏರ್‌ಪೋರ್ಟ್ ಮಾರ್ಗದಲ್ಲಿ ಮದ್ಯ ಕೊಂಡೊಯ್ಯಲು ಅನುಮತಿ ಇದೆ. ನಮ್ಮ ಮೆಟ್ರೋ ಏರ್‌ಪೋರ್ಟ್ ಸಂಪರ್ಕ ಹೊಂದಿದ ನಂತರ, ಅಂದಾಜು ಎರಡು ವರ್ಷಗಳಲ್ಲಿ, ಮದ್ಯವನ್ನು ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗುತ್ತದೆ ಎಂದು ಮೂಲವೊಂದು ತಿಳಿಸಿದೆ.

Namma Metro
ನಮ್ಮ ಮೆಟ್ರೊ ಪ್ರಯಾಣ ದುಬಾರಿ ಸಾಧ್ಯತೆ: ಟಿಕೆಟ್ ದರ ಪರಿಷ್ಕರಣೆಗೆ BMRCL ಅಸ್ತು

BMRCL ಅಧಿಕಾರಿಗಳ ಪ್ರಕಾರ, ಮದ್ಯದ ಬಾಟಲಿಗಳನ್ನು ತೆಗೆದುಕೊಂಡು ಹೋಗಲು ವಿಶೇಷ ಪರವಾನಗಿ ಅಥವಾ ಪ್ರತ್ಯೇಕ ಅನುಮತಿ ಅಗತ್ಯವಿಲ್ಲ. ಅನುಮೋದನೆಯಾದ ಬಳಿಕ ಈ ನಿಯಮವನ್ನು ಮೆಟ್ರೋ ನಿಯಮಾವಳಿಗಳಲ್ಲಿ ಸೇರಿಸಲಾಗುತ್ತದೆ.

ಪ್ರಸ್ತುತ ಮದ್ಯ ಕೊಂಡೊಯ್ಯಲು ಅನುಮತಿ ಇಲ್ಲ. ಆದರೆ ಇದಕ್ಕೆ ಯಾವುದೇ ವಿಶೇಷ ಕಾರಣವಿಲ್ಲ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿರುವುದರಿಂದ, ಮದ್ಯ ಸೇವಿಸಿ ಪ್ರಯಾಣಿಸಲು ಅವಕಾಶ ಇದೆ. ಆದರೆ ನಿಗದಿತ ಮಿತಿಯೊಳಗೆ ಇರಬೇಕು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದರೆ, ಆ ಮಿತಿಯನ್ನು ಸ್ಪಷ್ಟವಾಗಿ ವಿವರಿಸಲಾಗಿಲ್ಲ. ಪ್ರಯಾಣಿಕರು ಅಸಭ್ಯವಾಗಿ ವರ್ತಿಸಬಾರದು ಅಥವಾ ಇತರರಿಗೆ ತೊಂದರೆ ಉಂಟುಮಾಡಬಾರದು ಎಂದು ಅವರು ತಿಳಿಸಿದ್ದಾರೆ.

Namma Metro
ನಮ್ಮ ಮೆಟ್ರೊ ಹಳದಿ ಮಾರ್ಗ: 6ನೇ ರೈಲು ಆಗಮನ; ಕಾಯುವ ಅವಧಿ ಮತ್ತಷ್ಟು ಇಳಿಕೆ..!

ಪ್ರಸ್ತುತ ಎಲ್ಲಾ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ನಿಷೇಧಿತ ವಸ್ತುಗಳ ಪಟ್ಟಿಯನ್ನು ಪ್ರದರ್ಶಿಸಲಾಗಿದೆ. BMRCL ಎಂಟು ವಿಭಾಗಗಳಲ್ಲಿ ಒಟ್ಟು 58 ವಸ್ತುಗಳನ್ನು ನಿಷೇಧಿಸಿದೆ. ಅವುಗಳಲ್ಲಿ ತೀಕ್ಷ್ಣ ವಸ್ತುಗಳು, ಶಸ್ತ್ರಾಸ್ತ್ರಗಳು, ಸ್ಫೋಟಕ ವಸ್ತುಗಳು ಹಾಗೂ ಇತರೆ ಅಪಾಯಕಾರಿ ವಸ್ತುಗಳು ಸೇರಿವೆ. ಮದ್ಯವನ್ನು ದಹನಶೀಲ ವಸ್ತುಗಳ ವಿಭಾಗದಲ್ಲಿ ಸೇರಿಸಲಾಗಿದೆ.

ಸಾರ್ವಜನಿಕ ಸಾರಿಗೆಯಲ್ಲಿ ಮದ್ಯ ಕೊಂಡೊಯ್ಯುವುದನ್ನು ಯಾಕೆ ನಿಷೇಧಿಸಲಾಗಿದೆ ಎಂಬುದಾಗಿ ವರ್ಷಗಳಿಂದ ಹಲವಾರು ಮನವಿಗಳು ಮತ್ತು ಅಭಿಪ್ರಾಯಗಳು ಬಂದಿವೆ. ರೈಲಿನಲ್ಲಿ ತಿನ್ನಲು ಮತ್ತು ಕುಡಿಯಲು ಅನುಮತಿ ಇಲ್ಲದಿದ್ದರೂ, ಇತರೆ ಸಾಮಾನುಗಳಂತೆ ಸೀಲ್ಡ್ ಬಾಟಲಿಗಳನ್ನು ಕೊಂಡೊಯ್ಯಲು ಅವಕಾಶ ಇರಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಕೆಲವೆಡೆ ಭದ್ರತಾ ಸಿಬ್ಬಂದಿ ಪ್ರಯಾಣಿಕರಿಗೆ ಬಾಟಲಿಗಳನ್ನು ಕೊಂಡೊಯ್ಯಲು ಅವಕಾಶ ನೀಡಿದ ಘಟನೆಗಳೂ ಇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು BMRCL ನಿರ್ದೇಶಕ (RES ಮತ್ತು O&M) ಸುಮಿತ್ ಭಟ್ನಾಗರ್ ಅವರು, ಮೆಟ್ರೋದಲ್ಲಿ ಮದ್ಯದ ಬಾಟಲಿಗಳನ್ನು ಅನುಮತಿಸುವ ಕುರಿತು ಚರ್ಚೆಗಳು ಮುಂದುವರಿದಿವೆ ಎಂದು ದೃಢಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com