ಏಪ್ರಿಲ್ ಅಂತ್ಯದ ವೇಳೆಗೆ ಬೆಂಗಳೂರಿನ ಎಲ್ಲಾ ರಸ್ತೆ ಕಾಮಗಾರಿ ಪೂರ್ಣ: ತೆರಿಗೆ ಪಾವತಿ ಮಾಡದವರ ಆಸ್ತಿ ಹರಾಜು; ಡಿ.ಕೆ.ಶಿವಕುಮಾರ್

‘ಸುಮಾರು 10 ಲಕ್ಷಕ್ಕೂ ಹೆಚ್ಚು ನಾಗರಿಕರ ಆಸ್ತಿಗಳನ್ನು ಸ್ಕ್ಯಾನ್ ಮಾಡಿಸಿದ್ದು, ಒಂದೇ ದಿನ ಈ ನಾಗರಕರಿಗೆ ಇ ಖಾತಾ ನೀಡಲಾಗುವುದು. ಏಪ್ರಿಲ್ ತಿಂಗಳ ಮೂರನೇ ಭಾನುವಾರದಂದು ಈ ಕಾರ್ಯಕ್ರಮ ಮಾಡಲು ದಿನಾಂಕ ನಿಗದಿ ಮಾಡಿದ್ದೇನೆ.
 DK Shivakumar
ಡಿ.ಕೆ ಶಿವಕುಮಾರ್
Updated on

ಬೆಂಗಳೂರು: ನಗರದಲ್ಲಿ ಸುಮಾರು ₹2,671 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಏಪ್ರಿಲ್‌ ಅಂತ್ಯಕ್ಕೆ ಎಲ್ಲ ರಸ್ತೆಗಳ ಕಾಮಗಾರಿ ಮುಗಿಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಜಿಬಿಎ ಕಚೇರಿಯಲ್ಲಿ ಕಾಮಗಾರಿಗಳ ಪ್ರಗತಿ ಸಭೆಯನ್ನು ಶನಿವಾರ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಎರಡು ಪ್ಯಾಕೇಜ್‌ಗಳಲ್ಲಿ ಹೊರ ವರ್ತುಲ ರಸ್ತೆಗೆ ₹420 ಕೋಟಿ, ವಾರ್ಡ್ ರಸ್ತೆಗಳಿಗೆ 82 ಪ್ಯಾಕೇಜ್‌ಗಳಲ್ಲಿ ₹1,000 ಕೋಟಿ, ಸರ್ಕಾರದ ಅನುದಾನದ 81 ಪ್ಯಾಕೇಜ್‌ಗಳಲ್ಲಿ ₹1,241 ಕೋಟಿ ಸೇರಿದಂತೆ ₹2,671 ಕೋಟಿ ರೂ. ಮೊತ್ತದ ರಸ್ತೆ ಅಭಿವೃದ್ಧಿ ಕೆಲಸ ಪ್ರಾರಂಭವಾಗಿದೆ. ಈ ಕಾಮಗಾರಿ ಕೆಲಸಗಳು ತ್ವರಿತವಾಗಿ ಮಾಡಬೇಕು, ಮಳೆ ಆರಂಭವಾಗುವ ಮುನ್ನ ಎಲ್ಲಾ ಕೆಲಸ ಮುಗಿಸಬೇಕು ಎಂದು ಸೂಚಿಸಿದ್ದೇನೆ ಎಂದರು.

ಮೂರು ತಿಂಗಳಲ್ಲಿ ₹2,671 ಕೋಟಿ ಅನುದಾನವನ್ನು ಸರ್ಕಾರದ ವತಿಯಿಂದ ನೀಡಲಾಗಿದ್ದು,ಶೇ 80ರಷ್ಟು ಟೆಂಡರ್ ಕರೆಯಲಾಗಿದೆ. ಕಳೆದ ವರ್ಷ 389 ಕಿ. ಮೀ. ರಸ್ತೆಗಳ ಬ್ಲಾಕ್ ಟಾಪಿಂಗ್‌ಗೆ ₹694 ಕೋಟಿ ಹಾಗೂ ವೈಟ್ ಟಾಪಿಂಗ್‌ಗೆ ₹1,700 ಕೋಟಿ ಸೇರಿ ₹2,394 ಕೋಟಿ ವಿಶ್ವ ಬ್ಯಾಂಕ್‌ನಿಂದ ಕೆನಾಲ್ ಲಿಂಕ್ ಲೈನಿಂಗ್ ಕೆಲಸಕ್ಕೆ ₹1,600 ಕೋಟಿ ಟೆಂಡರ್ ಕರೆದು ಕೆಲಸ ಆರಂಭವಾಗಿದೆ’ ಎಂದು ಮಾಹಿತಿ ನೀಡಿದರು.

‘ಸುಮಾರು 10 ಲಕ್ಷಕ್ಕೂ ಹೆಚ್ಚು ನಾಗರಿಕರ ಆಸ್ತಿಗಳನ್ನು ಸ್ಕ್ಯಾನ್ ಮಾಡಿಸಿದ್ದು, ಒಂದೇ ದಿನ ಈ ನಾಗರಕರಿಗೆ ಇ ಖಾತಾ ನೀಡಲಾಗುವುದು. ಏಪ್ರಿಲ್ ತಿಂಗಳ ಮೂರನೇ ಭಾನುವಾರದಂದು ಈ ಕಾರ್ಯಕ್ರಮ ಮಾಡಲು ದಿನಾಂಕ ನಿಗದಿ ಮಾಡಿದ್ದೇನೆ. ನಗರದಲ್ಲಿ ಬಿ ಯಿಂದ ಎ ಖಾತಾ ಪರಿವರ್ತನೆ ಆರಂಭವಾಗಿದೆ. ಅವರ ಆಸ್ತಿಗಳನ್ನು ಕಂದಾಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಖಾತಾ ಪರಿವರ್ತನೆ ಮಾಡಲಾಗುವುದು. ಎಲ್ಲಾ ಕಂದಾಯ ಜಾಗದಲ್ಲಿ ಮಾಡಲಾಗಿರುವ ಬಡಾವಣೆ ರಸ್ತೆಗಳನ್ನು ಪಾಲಿಕೆ ರಸ್ತೆಗಳನ್ನಾಗಿ ಮಾಡಿದ್ದೇವೆ’ ಎಂದರು.

 DK Shivakumar
ಮತದಾರರ ಪಟ್ಟಿ ದೋಷ ಸರಿಪಡಿಸಲು ಬೀದಿ, ಮನೆವಾರು ಮ್ಯಾಪಿಂಗ್ ಮಾಡಿ: ಚುನಾವಣೆ ಆಯೋಗಕ್ಕೆ ಡಿ.ಕೆ ಶಿವಕುಮಾರ್ ಮನವಿ

ಬೀದಿ ವ್ಯಾಪಾರಿಗಳು, ನಾಗರಕರಿಗೆ ಸಹಾಯ ಮಾಡುವ ಕಲ್ಯಾಣ ಯೋಜನೆಗಳನ್ನು ಪ್ರತಿ ಪಾಲಿಕೆಯಲ್ಲಿ ಪ್ರತ್ಯೇಕ ಕಾರ್ಯಕ್ರಮ ಮಾಡಿ ಫಲಾನುಭವಿಗಳಿಗೆ ವಿತರಣೆ ಮಾಡಲಾಗುವುದು. 30 ಸಾವಿರ ಬೀದಿ ವ್ಯಾಪಾರಿಗಳು ನೋಂದಣಿ ಮಾಡಿಸಿಕೊಂಡಿದ್ದು, ತಳ್ಳುಗಾಡಿ, ತ್ರಿಚಕ್ರ ಹಾಗೂ ನಾಲ್ಕು ಚಕ್ರ ವಾಹನ ನೀಡಲಾಗುವುದು. ಬೀದಿ ವ್ಯಾಪಾರಿಗಳು ಪಾದಚಾರಿ ಮಾರ್ಗದ ಬದಲು ವಾಹನಗಳಲ್ಲಿ ವ್ಯಾಪಾರ ಮಾಡುವಂತೆ ಮಾಡಲು ತೀರ್ಮಾನಿಸಿದ್ದೇವೆ. ಮುಂದಿನ ಎರಡು ತಿಂಗಳ ಒಳಗೆ ಈ ಬೀದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಹಾಗೂ ವಾಹನ ವಿತರಣೆ ಮಾಡಲಾಗುವುದು’ ಎಂದು ಹೇಳಿದರು.

‘ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆ ಭೂ ಸಂತ್ರಸ್ತರಿಗೆ ಪರಿಹಾರ ರೂಪವಾಗಿ ಕೆಲವು ಕಡೆ ಜಿಬಿಎ ವತಿಯಿಂದ ಟಿಡಿಆರ್ ನೀಡಬೇಕಾಗಿದೆ. ಪಾಲಿಕೆ ವತಿಯಿಂದ ಒಂದು ಕೇಂದ್ರ ಆರಂಭಿಸಿ ಸಂತ್ರಸ್ತರು ಅರ್ಜಿ ಕೊಟ್ಟ ಬಳಿಕ ಕೂಡಲೇ ಸ್ಥಳ ಪರಿಶೀಲನೆ ಮಾಡಿ ಎರಡು ಮೂರು ದಿನಗಳಲ್ಲಿ ಟಿಡಿಆರ್ ನೀಡಲು ತೀರ್ಮಾನಿಸಲಾಗಿದೆ. ಟಿಡಿಆರ್ ವಿನಿಮಯ ಬಗ್ಗೆ ಮುಂದಿನ ಎರಡು ವಾರದಲ್ಲಿ ಮಾಹಿತಿ ನೀಡಲಾಗುವುದು’ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

‘ಸಣ್ಣ ಪುಟ್ಟ ಮನೆಯವರು ಹೊರತಾಗಿ ಉಳಿದವರು ಅವರು ಪ್ರತಿ ತಿಂಗಳು ಬಾಡಿಗೆ ಪಡೆಯುತ್ತಿದ್ದಾರೆ. ಶೇ 80ರಷ್ಟು ಜನ ವಾಣಿಜ್ಯ ಆಸ್ತಿಗಳಿಂದ 7-8 ವರ್ಷಗಳಿಂದ ತೆರಿಗೆ ಪಾವತಿ ಮಾಡಿಲ್ಲ. ಕೆಲವು ಮಾಜಿ ಶಾಸಕರ ಆಸ್ತಿಗಳಿವೆ. ನಾನು ಅವರ ಹೆಸರು ಹೇಳುವುದಿಲ್ಲ. ಆಸ್ತಿ ತೆರಿಗೆ ಪಾವತಿ ಮಾಡದಿದ್ದರೆ, ನಾವು ಹೇಗೆ ನಡೆಬೇಕು. ಅವಕಾಶ ನೀಡಬೇಕು ಎಂದು ಓಟಿಎಸ್ ವ್ಯವಸ್ಥೆ ಕಲ್ಪಿಸಿದ್ದೆವು. ತೆರಿಗೆ ಸಂಗ್ರಹ ಬಗ್ಗೆ ನಾನು ಹಸ್ತಕ್ಷೇಪ ಮಾಡುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಓಟಿಎಸ್ ಯೋಜನೆಯಲ್ಲಿ 2.65 ಲಕ್ಷ ಜನರು ಪ್ರಯೋಜನ ಪಡೆದಿದ್ದಾರೆ. ಇದರಿಂದ ಪಾಲಿಕೆಗೆ ₹1,200 ಕೋಟಿ ಸಂಗ್ರಹವಾಗಿದೆ. ಇದು ಐತಿಹಾಸಿಕ ನಿರ್ಧಾರ’ ಎಂದರು.

 DK Shivakumar
ಸೋಲುವ ಭಯದಲ್ಲಿ ಹಿಮಂತ್ ಬಿಸ್ವಾಸ್ ಶರ್ಮಾ ಆಧಾರರಹಿತ ಹೇಳಿಕೆ: ಡಿ.ಕೆ ಶಿವಕುಮಾರ್ ವಾಗ್ದಾಳಿ

ಮಂತ್ರಿ ಮಾಲ್ ನವರು 35 ಕೋಟಿ ಬಾಕಿ ಉಳಿಸಿಕೊಂಡಿದ್ದು, ಅವರಿಗೆ ಈ ರೀತಿ ಮಾಡುತ್ತಿಲ್ಲ ಬೇರೆಯವರಿಗೆ ಯಾಕೆ ಎಂದು ಕೇಳಿದಾಗ, ‘ಮಂತ್ರಿ ಮಾಲ್‌ಗೆ ಬೀಗಹಾಕಿಸಿ ₹8 ಕೋಟಿ ತೆರಿಗೆ ಪಾವತಿಸಿಕೊಳ್ಳಲಾಗಿದೆ. ಅವರಿಗೆ ನ್ಯಾಯಾಲಯ ಕಾಲಾವಕಾಶ ನಿಡಿದೆ. ₹20 ಕೋಟಿ ಬಾಕಿ ಇದೆ’ ಎಂದು ಹೇಳಿದರು.

₹5,065 ಕೋಟಿ;ನಗರ ರಸ್ತೆ ಅಭಿವೃದ್ಧಿಗೆ ಈವರೆಗೆ ಮಾಡಿರುವ ವೆಚ್ಚ 10 ಲಕ್ಷ ಆಸ್ತಿ; ಸ್ಕ್ಯಾನಿಂಗ್ ಪೂರ್ಣ, ಏಪ್ರಿಲ್ 3ನೇ ಭಾನುವಾರ ದಾಖಲೆ ವಿತರಣೆ 2 ತಿಂಗಳು; ಬೀದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ, ವಾಹನ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಹಾಗೂ ನಗರ ಪಾಲಿಕೆಗಳ ಲೊಗೊವನ್ನು ಅಂತಿಮಗೊಳಿಸಲಾಗಿದೆ. ಜೊತೆಗೆ ನಗರ ಪಾಲಿಕೆಗಳ ಕಟ್ಟಡ ಹೇಗಿರಬೇಕು ಎಂಬ ಮಾದರಿಯನ್ನೂ ತೀರ್ಮಾನಿಸಲಾಗಿದೆ. ದಕ್ಷಿಣ ನಗರ ಪಾಲಿಕೆಯ ಕಟ್ಟಡ ಬನಶಂಕರಿ ದೇವಸ್ಥಾನದ ಎದುರು ನಿರ್ಮಾಣವಾಗಲಿದೆ. ಈ ಮಾದರಿಯಲ್ಲೇ ಎಲ್ಲ ನಗರ ಪಾಲಿಕೆ ಕಟ್ಟಡಗಳ ವಿನ್ಯಾಸವಿರಲಿದೆ. ಜಿಬಿಎ ಮುಖ್ಯ ಆಯುಕ್ತರು ಮುಂದಿನ ದಿನಗಳಲ್ಲಿ ಲೊಗೊ ಮತ್ತು ವಿನ್ಯಾಸವನ್ನು ಸಾರ್ವಜನಿಕವಾಗಿ ಪ್ರಕಟಿಸಲಿದ್ದಾರೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

‘ಕಸ ವಿಲೇವಾರಿಗೆ ಬೆಂಗಳೂರಿನ 40 ಕಿ.ಮೀ ಒಳಗೆ ಗುಡ್ಡ ಪ್ರದೇಶದ ಅಕ್ಕಪಕ್ಕ 100 ಎಕರೆ ಭೂಮಿ ಸಿಕ್ಕರೆ ಅದನ್ನು ಒಪ್ಪಿತ ಆಧಾರದ ಮೇಲೆ ಖರೀದಿ ಮಾಡಿ ಸ್ವಾಧೀನಪಡಿಸಿಕೊಳ್ಳಲು ಸಿದ್ಧವಿದ್ದೇವೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೂ ಸೂಚನೆ ನೀಡಿದ್ದೇವೆ. ಈ ಬಗ್ಗೆ ಭೂ ಮಾಲೀಕರು ರೈತರು ವ್ಯಾಪಾರಿಗಳು ಮುಂದೆ ಬಂದು ಜಮೀನು ನೀಡಬಹುದು ಇದಕ್ಕೆ ನಾವು ಪ್ರತ್ಯೇಕ ರಸ್ತೆ ಮಾಡಿಕೊಳ್ಳುತ್ತೇವೆ’ ಎಂದರು. ರಾಜ್ಯ ಬಜೆಟ್‌ನಲ್ಲಿ ಬೆಂಗಳೂರಿಗೆ ಏನು ನಿರೀಕ್ಷೆ ಮಾಡಬಹುದು ಎಂಬ ಸುದ್ದಿಗಾರರ ಪ್ರಶ್ನಿಗೆ ಪ್ರತಿಕ್ರಿಯಿಸಿದ ಶಿವಕುಮಾರ್‌ ‘ಈ ಬಗ್ಗೆ ನಮ್ಮ ಅಧಿಕಾರಿಗಳು ಪ್ರಸ್ತಾವ ನೀಡಿದ್ದಾರೆ. ಉಳಿದ ವಿಚಾರವನ್ನು ಮುಖ್ಯಮಂತ್ರಿಯವರ ಬಳಿ ಕೇಳಿ. ಸರ್ಕಾರದ ಬಳಿ ಇರುವ ಹಣದ ಮೇಲೆ ಅವರು ತೀರ್ಮಾನ ಮಾಡುತ್ತಾರೆ’ ಎಂದರು.

‘ಪಾಲಿಕೆಗಳಲ್ಲಿ ಕ್ರಾಂತಿಕಾರಿ ತೀರ್ಮಾನ ಮಾಡಿ ಬಿಲ್ ವಿತರಣೆ ಮಾಡುತ್ತಿದ್ದೇವೆ. ಬೆಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಗುತ್ತಿಗೆದಾರರಿಗೆ ಬಿಲ್‌ ಸಮಸ್ಯೆ ಇಲ್ಲ. ಬೇರೆ ಕಡೆ ಕಾಮಗಾರಿಗಳ ಗುತ್ತಿಗೆದಾರರು ಈ ರೀತಿ ಕೇಳುತ್ತಿರಬಹುದು. ನಾವು ಸಮಸ್ಯೆ ಆದಷ್ಟು ಬಗೆಹರಿಸಿದ್ದೇವೆ. ಸುಮಾರು ಶೇ 90ರಷ್ಟು ಸಮಸ್ಯೆ ಬಗೆಹರಿಸಿದ್ದು ತಾಂತ್ರಿಕ ಕಾರಣಗಳಿಂದಾಗಿ ಶೇ 10ರಷ್ಟು ಮಾತ್ರ ಬಾಕಿ ಉಳಿದಿವೆ. ಬೆಂಗಳೂರು ರಸ್ತೆ ಕಾಮಗಾರಿ ವಿಚಾರದಲ್ಲಿ ಯಾವ ಗುತ್ತಿಗೆದಾರರ ಬಿಲ್ ಬಾಕಿ ಇಲ್ಲ’ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಇಕ್ಬಾಲ್ ಹುಸೇನ್ ಬಾಯಿಗೆ ಬೀಗ ಹಾಕಿಕೊಂಡರೆ ಒಳ್ಳೆಯದು. ನಾನು ಎಲ್ಲರಿಗೂ ಹೇಳಿದಂತೆ ಇಕ್ಬಾಲ್ ಹುಸೇನ್ ಅವರಿಗೂ ಹೇಳುತ್ತಿದ್ದೇನೆ. ನನಗೆ ಒಳ್ಳೆಯದು ಮಾಡಬೇಕು ಎಂದು ಅಂದುಕೊಂಡಿದ್ದರೆ ಬಾಯಿಗೆ ಬೀಗ ಹಾಕಿಕೊಳ್ಳಲಿ’ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು. 26ರಂದು ನೀವು ದೆಹಲಿಗೆ ಹೋಗುತ್ತೀರಿ ಎಂದು ಶಾಸಕರ ಇಕ್ಬಾಲ್ ಹುಸೇನ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ಅವರು ಸುಮ್ಮನಿದ್ದರೇ ನನಗೆ ಒಳ್ಳೆಯದು’ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com