

ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕಿನ ಇನಾಂವೀರಪುರ ಗ್ರಾಮದಲ್ಲಿ ಇತ್ತೀಚಿಗೆ ನಡೆದ ಏಳು ತಿಂಗಳ ಗರ್ಭಿಣಿ ಮಾನ್ಯಾಳ ಮರ್ಯಾದೆ ಹತ್ಯೆ ಪ್ರಕರಣಕ್ಕೆ ರಾಜ್ಯಾದ್ಯಂತ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಇಂತಹ ಹತ್ಯೆ ಹತ್ತಿಕ್ಕಲು ಕಠಿಣ ಕಾನೂನು ಜಾರಿಗೆ ತರಬೇಕು ಎಂಬ ಒತ್ತಾಯವೂ ಹೆಚ್ಚಾಗುತ್ತಿದೆ.
ಈ ಮಧ್ಯೆ ಇಂದು ಮಾನ್ಯಾಳ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಹೆಚ್. ಸಿ. ಮಹಾದೇವಪ್ಪ, ಈ ಕೃತ್ಯವನ್ನು ಸರ್ಕಾರ ತೀವ್ರವಾಗಿ ಖಂಡಿಸಿದೆ. ಮನುವಾದದ ಮನಸ್ಸುಗಳನ್ನು ಹತ್ತಿಕ್ಕಲೇ ಬೇಕು. ಈ ಪ್ರಕರಣದಲ್ಲಿ ಭಾಗಿಯಾದವರನ್ನು ಸುಮ್ಮನೆ ಬಿಡುವುದಿಲ್ಲ. ಮರ್ಯಾದಾ ಹತ್ಯೆಯಂತಹ ಪ್ರಕರಣಗಳ ತಡೆಗೆ ಕಠಿಣ ಕಾನೂನನ್ನು ಮುಂದಿನ ಅಧಿವೇಶನದಲ್ಲಿ ಜಾರಿಗೆ ತರುವ ಕುರಿತು ಪರಿಶೀಲಿಸಲಾಗುವುದು, ಮಾನ್ಯ ಹೆಸರಿನಲ್ಲಿ ಕಾಯ್ದೆ ತರುವ ಕುರಿತು ಚರ್ಚಿಸಲಾಗುವುದು ಎಂದು ತಿಳಿಸಿದರು.
ಇದು ಮರ್ಯಾದೆ ಹತ್ಯೆಯಲ್ಲ ಉಗ್ರವಾದ ಕೊಲೆ. ಇದು ನಮ್ಮ ಭಾಗದಲ್ಲಿ ಕಂಡುಬಂದಿರಲಿಲ್ಲ. ರಾಜಸ್ಥಾನ, ಹರಿಯಾಣ ಸೇರಿ ಇತರ ರಾಜ್ಯದಲ್ಲಿತ್ತು. ನಮ್ಮ ಕರ್ನಾಟಕ ಮುಂದುವರಿದ ರಾಜ್ಯ. ಪ್ರಾಯಕ್ಕೆ ಬಂದ ಯುವತಿ ತನ್ನ ಮದುವೆಯ ಆಯ್ಕೆಯ ಸ್ವಾತಂತ್ರ್ಯ ಹೊಂದಿದ್ದಾಳೆ. ಅದು ಆಯ್ಕೆಯ ಮೂಲಭೂತ ಹಕ್ಕು. ಅಂತಹ ಹಕ್ಕನ್ನು ಹತ್ತಿಕ್ಕುವ ವ್ಯಕ್ತಿಗಳನ್ನು ಹಾಗೂ ಬೆಂಬಲಿಸುವವರನ್ನು ಸರ್ಕಾರ ಬಿಡುವುದಿಲ್ಲ. ಅವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಮುಖ್ಯಮಂತ್ರಿಗಳು ಹಾಗೂ ಗೃಹಸಚಿವರೊಂದಿಗೆ ವಿವೇಕಾನಂದ ದೊಡ್ಡಮನಿ ಕುಟುಂಬಕ್ಕೆ ಹೆಚ್ಚಿನ ಭದ್ರತೆ ಒದಗಿಸಲು ಕೋರಲಾಗುವುದು. ಈ ತರಹದ ಘಟನೆಗಳು ಮರುಕಳಿಸದಂತೆ ಮುಂದೇನು ಮಾಡಬೇಕು ಎಂಬುದರ ಕುರಿತು ಚರ್ಚಿಸಲಾಗುವುದು ಎಂದರು.
ಸಮಾಜ ಕಲ್ಯಾಣ ಇಲಾಖೆಯ ವೈಫಲ್ಯದ ಆರೋಪ ಕುರಿತು ತನಿಖೆ ನಡೆಸಲಾಗುವುದು. ತನಿಖಾ ವರದಿ ಬಂದ ಬಳಿಕ ತಪ್ಪು ಎಸಗಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು. ಇದಕ್ಕೂ ಮಿಗಿಲಾದ ಘಟನೆ ನಡೆದಿರುವುದರಿಂದ ಕೊಲೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.
ಇನಾಂ ವೀರಪುರ ಗ್ರಾಮದ ನಿವಾಸಿ ಮಾನ್ಯ ವಿವೇಕಾನಂದ ದೊಡ್ಡಮನಿ (20 ವರ್ಷ) ಎಂಬ ಯುವತಿ, ದಲಿತ ಸಮುದಾಯದ ಯುವಕನನ್ನು ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದರು. ಇದರಿಂದ ರೊಚ್ಚಿಗೆದ್ದ ತಂದೆ ಪ್ರಕಾಶ ಗೌಡ ಪಾಟೀಲ ಹಾಗೂ ಸಂಬಂಧಿಕರು ಕಳೆದ ತಿಂಗಳು 20 ರಂದು ಏಳು ತಿಂಗಳ ಗರ್ಭಿಣಿ ಎಂಬ ಕನಿಷ್ಠ ಮಾನವೀಯತೆಯನ್ನೂ ತೋರದೆ ಆಕೆಯ ಮೇಲೆ ಹಲ್ಲೆ ನಡೆಸಿದ್ದರು. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಆಕೆಯನ್ನು ಹುಬ್ಬಳ್ಳಿಯ ವಿವೇಕಾನಂದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
Advertisement