

ಬೆಂಗಳೂರು: ಕೋಗಿಲು ಲೇಔಟ್‌ನ ಫಕೀರ್ ಕಾಲೋನಿಯಿಂದ ಸ್ಥಳಾಂತರಿಸಲ್ಪಟ್ಟ 400 ಕುಟುಂಬಗಳಿಗೆ ವಸತಿ ಕಲ್ಪಿಸಲಾಗುತ್ತಿದೆ ಎಂಬ ಹೇಳಿಕೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು, ಕೇವಲ 90 ಕುಟುಂಬಗಳು ಮಾತ್ರ ಪರಿಹಾರಕ್ಕೆ ಅರ್ಹರಾಗಿದ್ದಾರೆ. ಅವರಿಗೆ ಮಾತ್ರ ಮನೆ ಹಂಚಿಕೆ ಮಾಡಲಾಗುವುದು ಎಂದು ಗುರುವಾರ ಹೇಳಿದ್ದಾರೆ.
ಇಂದು ನಗರದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ಇಲಾಖೆಯ ಅಧಿಕಾರಿಗಳು ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮೀಕ್ಷೆ ನಡೆಸಿದ್ದಾರೆ.
ಕೇವಲ 90 ಜನ ಸ್ಥಳೀಯ ನಿವಾಸಿಗಳಾಗಿದ್ದು, ನಗರಕ್ಕೆ ಸೇರಿದವರಿಗೆ ಮತ್ತು ವಾಸ್ತವವಾಗಿ ಫಲಾನುಭವಿಗಳಾಗಿರುವವರಿಗೆ ಮಾತ್ರ ಮನೆಗಳನ್ನು ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾತಿ, ವರ್ಗ, ಸಮುದಾಯದ ಆಧಾರದ ಮೇಲೆ ಕೆಲಸ ಮಾಡುತ್ತಿಲ್ಲ. ಕೋಗಿಲು ಪ್ರದೇಶದಲ್ಲಿ ಹಲವು ವರ್ಷಗಳಿಂದ ವಾಸವಾಗಿರುವ ಎಲ್ಲಾ ಸಮುದಾಯದವರಿಗೂ ಸೇರಿದ ಅರ್ಹ ಕುಟುಂಬಗಳಿಗೆ ಮನೆ ನೀಡಲಾಗುತ್ತಿದೆ ಎಂದರು.
ಏತನ್ಮಧ್ಯೆ, "ಅಕ್ರಮವಾಗಿ ಮನೆ ಹಂಚಿಕೆ ಮಾಡಿದರೆ" ಜನವರಿ 5 ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಎಚ್ಚರಿಸಿದೆ.
ಯಲಹಂಕ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಅವರ ಪ್ರಕಾರ, ನಿರ್ಮಾಣ ಕಾರ್ಯ ಅಪೂರ್ಣವಾಗಿ ಉಳಿದಿರುವುದರಿಂದ ಒಂದು ವರ್ಷದ ಹಿಂದೆ ಒಂದು ಲಕ್ಷ ರೂ. ಠೇವಣಿ ಇಟ್ಟ ಹಲವು ಜನರಿಗೆ ಇನ್ನೂ ಮನೆಗಳನ್ನು ಹಂಚಿಕೆ ಮಾಡಲಾಗಿಲ್ಲ.
ನಿಯಮಗಳ ಪ್ರಕಾರ ಫಲಾನುಭವಿಗಳು ಗರಿಷ್ಠ ವಾರ್ಷಿಕ ಆದಾಯ ಮೂರು ಲಕ್ಷ ರೂ.ಗಳನ್ನು ಹೊಂದಿರಬೇಕು ಎಂದು ಅವರು ಹೇಳಿದ್ದಾರೆ.
ರಾಜೀವ್ ಗಾಂಧಿ ಆವಾಸ್ ಯೋಜನೆಯಡಿಯಲ್ಲಿ ಫಲಾನುಭವಿಗಳು ಬೆಂಗಳೂರಿನಲ್ಲಿ ಕನಿಷ್ಠ ಐದು ವರ್ಷಗಳ ಕಾಲ ವಾಸವಾಗಿರಬೇಕು ಮತ್ತು ಕಂದಾಯ ಅಧಿಕಾರಿಗಳಿಂದ ದೃಢೀಕರಿಸಲ್ಪಟ್ಟ ನಿವಾಸಿ ಪ್ರಮಾಣಪತ್ರವನ್ನು ಹೊಂದಿರಬೇಕು ಎಂದು ವಿಶ್ವನಾಥ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
Advertisement