
ಪ್ರತಿ ವರ್ಷದಂತೆ ಈ ಬಾರಿಯೂ ರಾಜ್ಯಾದ್ಯಂತ ಹೊಸ ವರ್ಷಾಚರಣೆ ನಡೆದಿದೆ. ಎಲ್ಲಾ ಕಡೆ ಶಾಂತಿಯುತವಾದ ಹೊಸ ವರ್ಷಾಚರಣೆ ನಡೆದಿದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ 20 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಸೇರಿದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಶಾಂತಿಯುತ ವರ್ಷಾಚರಣೆ ನಡೆದಿದೆ. ಇದಕ್ಕೆ ಶ್ರಮಿಸಿದ ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಇನ್ನು ರಾಜ್ಯದಲ್ಲಿ ನಡೆಯುತ್ತಿರುವ ನಾಯಕತ್ವ ಬದಲಾವಣೆ ಚರ್ಚೆ ಕುರಿತಂತೆ ಮಾತನಾಡಿದ ಅವರು. ತಾವೂ ಸಹ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷೆ ಎಂಬ ಸುಳಿವು ನೀಡಿದರು. ಎಲ್ಲರಂತೆ ನನಗೂ ಮಹತ್ವಾಕಾಂಕ್ಷೆಗಳಿವೆ. ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿದರೇ ಈ ವರ್ಷ ರಾಜಕೀಯ ಬಡ್ತಿ ಸಿಗುವ ನಿರೀಕ್ಷೆ ಇದೆ ಎಂದು ಪರಮೇಶ್ವರ ಹೇಳಿದರು.
ವಿಜಯಪುರದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣವಾಗುತ್ತಿರುವ ಮೆಡಿಕಲ್ ಕಾಲೇಜನ್ನು ವಿರೋಧಿಸಿ ಕಳೆದ ನಾಲ್ಕೈದು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಇಂದು ತೀವ್ರ ಸ್ವರೂಪ ಪಡೆದುಕೊಂಡಿದೆ. ಇಂದು ಪ್ರತಿಭಟನೆಯಲ್ಲಿ ಸ್ವಾಮೀಜಿಗಳು ಪಾಲ್ಗೊಂಡಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ಸಚಿವ ಎಂ.ಬಿ.ಪಾಟೀಲ್ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಪ್ರತಿಭಟನನಿರತರನ್ನು ಸೊಲ್ಲಾಪುರ ರಸ್ತೆಯಲ್ಲಿ ಪೊಲೀಸರು ತಡೆದರು. ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ನೂಕಾಟ ತಳ್ಳಾಟ ನಡೆದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಂಗನಬಸವ ಸ್ವಾಮೀಜಿ ಸಿಟ್ಟಿಗೆದ್ದು ಏಕಾಏಕಿ ಪಿಎಸ್ ಐ ಲಮಾಣಿ ಹಾಗೂ ಮತ್ತೋರ್ವ ಪೊಲೀಸ್ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ಘಟನೆ ನಂತರ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಹುಬ್ಬಳ್ಳಿ ತಾಲೂಕಿನ ಇನಾಂವೀರಪುರ ಗ್ರಾಮದಲ್ಲಿ ಇತ್ತೀಚಿಗೆ ನಡೆದ ಏಳು ತಿಂಗಳ ಗರ್ಭಿಣಿ ಮಾನ್ಯಾಳ ಮರ್ಯಾದೆ ಹತ್ಯೆ ಪ್ರಕರಣಕ್ಕೆ ರಾಜ್ಯಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿದೆ. ಇಂತಹ ಹತ್ಯೆ ಹತ್ತಿಕ್ಕಲು ಕಠಿಣ ಕಾನೂನು ಜಾರಿಗೆ ತರಬೇಕು ಎಂಬ ಒತ್ತಾಯವೂ ಹೆಚ್ಚಾಗುತ್ತಿದೆ. ಈ ಮಧ್ಯೆ ಗುರುವಾರ ಮಾನ್ಯಾಳ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಹೆಚ್. ಸಿ. ಮಹಾದೇವಪ್ಪ, ಈ ಕೃತ್ಯವನ್ನು ಸರ್ಕಾರ ತೀವ್ರವಾಗಿ ಖಂಡಿಸಿದೆ. ಮನುವಾದದ ಮನಸ್ಸುಗಳನ್ನು ಹತ್ತಿಕ್ಕಲೇಬೇಕು. ಮರ್ಯಾದಾ ಹತ್ಯೆಯಂತಹ ಪ್ರಕರಣಗಳ ತಡೆಗೆ ಕಠಿಣ ಕಾನೂನನ್ನು ಮುಂದಿನ ಅಧಿವೇಶನದಲ್ಲಿ ಜಾರಿಗೆ ತರುವ ಕುರಿತು ಪರಿಶೀಲಿಸಲಾಗುವುದು, ಮಾನ್ಯ ಹೆಸರಿನಲ್ಲಿ ಕಾಯ್ದೆ ತರುವ ಕುರಿತು ಚರ್ಚಿಸಲಾಗುತ್ತದೆ ಎಂದರು. ಆದರೆ ಮರ್ಯಾದಾ ಹತ್ಯೆಗಳ ಕುರಿತಂತೆ ನಿನ್ನೆ ಮಾತನಾಡಿದ್ದ ಗೃಹ ಸಚಿವ ಪರಮೇಶ್ವರ್ ಅವರು, ಮರ್ಯಾದಾ ಹತ್ಯೆಗೆ ಪ್ರತ್ಯೇಕ ಕಾನೂನಿನ ಅಗತ್ಯವಿಲ್ಲ ಎಂದಿದ್ದರು.
ಬೆಂಗಳೂರಿನ ಕೋಗಿಲು ಕ್ರಾಸ್‌ನಲ್ಲಿ ಒತ್ತುವರಿ ತೆರವು ಮಾಡಿದ ವಿವಾದಿತ ಸ್ಥಳಕ್ಕೆ ಪ್ರತಿಪಕ್ಷ ನಾಯಕ ಆರ್.ಅಶೋಕ ಅವರು ಬುಧವಾರ ಬಿಜೆಪಿ ಮುಖಂಡರೊಂದಿಗೆ ಭೇಟಿ ನೀಡಿದ್ದರು. ಸ್ಥಳದಲ್ಲೇ ಇದ್ದ ನಿವಾಸಿಗಳ ಜೊತೆ ಮಾತನಾಡಿದ್ದ ಅವರು, ಗುರುತಿನ ಚೀಟಿ ಹಾಗೂ ಇತರೆ ದಾಖಲೆಗಳನ್ನು ಕೇಳಿ ಪರಿಶೀಲಿಸಿದರು. ಕೋಗಿಲು ಕ್ರಾಸ್‌ನ ಫಕೀರ್ ಬಡಾವಣೆ ಕ್ರಮೇಣ ಸ್ಲೀಪರ್ ಸೆಲ್‌ಗಳ ಕೇಂದ್ರವಾಗುವ ಅಪಾಯವಿದೆ. ಆದ್ದರಿಂದ ಅಕ್ರಮ ನಿವಾಸಿಗಳ ಪೌರತ್ವವನ್ನು ಸರ್ಕಾರ ಪರಿಶೀಲಿಸಬೇಕು. ಹೀಗಾಗಿ ಇದನ್ನು ಎನ್‌ಐಎ ತನಿಖೆಗೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು. ಇದಕ್ಕೆ ಗುರುವಾರ ಪ್ರತಿಕ್ರಿಯಿಸಿದ ವಸತಿ ಸಚಿವ ಜಮೀರ್ ಅಹಮದ್ ಖಾನ್, ಕರ್ನಾಟಕದವರಲ್ಲದೆ ಹೊರಗಿನವರಿಗೆ ಹೇಗೆ ಮನೆ ಕೊಡಲು ಸಾಧ್ಯ? ಬಾಂಗ್ಲಾದೇಶದವರು ಹೇಗೆ ಬೆಂಗಳೂರಿನಲ್ಲಿ ಇರಲು ಸಾಧ್ಯ? ಹಾಗೇನಾದ್ರೂ ಅವರು ಬಾಂಗ್ಲಾದೇಶದವರಾಗಿದ್ದರೆ ಸಾಬೀತುಪಡಿಸಲಿ. ಬಾಯಿಗೆ ಬಂದಂತೆ ಮಾತನಾಡಬಾರದು ಎಂದು ವಿಪಕ್ಷ ನಾಯಕನಿಗೆ ತಿರುಗೇಟು ನೀಡಿದ್ದಾರೆ.
ಕೆಂಗೇರಿ ಹೋಬಳಿಯ ಚಿಕ್ಕನಹಳ್ಳಿ ಸೇರಿ ಸುತ್ತಲಿನ ಗ್ರಾಮಗಳ ಹಲವು ಸರ್ವೆ ನಂಬರ್‌ಗಳಲ್ಲಿ ಅಕ್ರಮವಾಗಿ ಕಲ್ಲುಗಳ ಕ್ರಷರ್ ನಡೀತಿದ್ದು, ಬಂಡೆಗಳನ್ನು ಒಡೆಯಲು ಸಿಡಿಮದ್ದುಗಳ ಬಳಕೆ ಮಾಡಲಾಗುತ್ತಿದೆ. ಇದರಿಂದ ಸುತ್ತಲಿನ ಗ್ರಾಮಸ್ಥರಿಗೆ ತೊಂದರೆ ಆಗಿದೆ. ರಸ್ತೆಗಳು ಹಾಳಾಗಿವೆ. ವನ್ಯಜೀವಿಗಳು, ಪಕ್ಷಿಗಳು ಸಾಯುತ್ತಿವೆ. ಗರ್ಭಿಣಿ ಚಿರತೆ ಸೇರಿ ನಾಲ್ಕು ಚಿರತೆಗಳು ಸತ್ತಿವೆ. ಕಲ್ಲು ಕ್ರಷರ್ ವಿರುದ್ಧ ಅರಣ್ಯ ಹಾಗೂ ಗಣಿಗಾರಿಕೆ ಇಲಾಖೆ ಅಧಿಕಾರಿಗಳಿಗೆ ದೂರು ಕೊಟ್ಟರೂ ಪ್ರಯೋಜನ ಆಗಿಲ್ಲ. ಸಚಿವರು ಕರೆ ಸ್ವೀಕರಿಸುತ್ತಿಲ್ಲ. ಸರ್ಕಾರ ಕ್ರಮ ವಹಿಸದಿದ್ರೆ ಹೋರಾಟ ಮಾಡ್ತೇನೆ ಅಂತ ಎಚ್ಚರಿಸಿದ್ದೂ ಈ ಸಂಬಂಧ ಅರಣ್ಯ ಸಚಿವರಿಗೆ ಪತ್ರವನ್ನೂ ಬರೆದಿರುವುದಾಗಿ ಯಶವಂತಪುರ ಶಾಸಕ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.
Advertisement