News Headlines 02-01-26 | ಕಂಬಾರರಿಗೆ ಗೋಯೆಂಕಾ ಸಾಹಿತ್ಯ ಸಮ್ಮಾನ್ ಪ್ರಶಸ್ತಿ; ಜನಾರ್ಧನ-ಭರತ್ ರೆಡ್ಡಿ ಬೆಂಬಲಿಗರ ಗಲಾಟೆ, ಕಾರ್ಯಕರ್ತ ಸಾವು; ಬಾಲಕಿಗೆ ಕಿರುಕುಳ: youtuber ರವಿಚಂದ್ರ ಬಂಧನ!

News Headlines 02-01-26 | ಕಂಬಾರರಿಗೆ ಗೋಯೆಂಕಾ ಸಾಹಿತ್ಯ ಸಮ್ಮಾನ್ ಪ್ರಶಸ್ತಿ; ಜನಾರ್ಧನ-ಭರತ್ ರೆಡ್ಡಿ ಬೆಂಬಲಿಗರ ಗಲಾಟೆ, ಕಾರ್ಯಕರ್ತ ಸಾವು; ಬಾಲಕಿಗೆ ಕಿರುಕುಳ: youtuber ರವಿಚಂದ್ರ ಬಂಧನ!

1. ಕಂಬಾರರಿಗೆ ಗೋಯೆಂಕಾ ಸಾಹಿತ್ಯ ಸಮ್ಮಾನ್ ಪ್ರಶಸ್ತಿ ಪ್ರದಾನ

ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರಿಗೆ The New Indian Express Group, ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿತು. ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು, ಡಾ. ಚಂದ್ರಶೇಖರ ಕಂಬಾರ ಅವರಿಗೆ 'ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದರು. ಭಾರತೀಯ ಪತ್ರಿಕೋದ್ಯಮದ ದಿಗ್ಗಜ ರಾಮನಾಥ್ ಗೋಯೆಂಕಾ ಅವರ ಸ್ಮರಣಾರ್ಥವಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್‌, ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್ ಪ್ರಶಸ್ತಿಯನ್ನು ನೀಡುತ್ತಿದೆ. 'ಜೀವಮಾನ ಸಾಧನೆ ಪ್ರಶಸ್ತಿ ಎರಡು ಲಕ್ಷ ರೂಪಾಯಿ ಬಹುಮಾನ, ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ಒಳಗೊಂಡಿದೆ.

2. ಜನಾರ್ಧನ-ಭರತ್ ರೆಡ್ಡಿ ಬೆಂಬಲಿಗರ ಗಲಾಟೆ, ಕಾರ್ಯಕರ್ತ ಸಾವು!

ಬಳ್ಳಾರಿಯಲ್ಲಿ ಶಾಸಕ ಜನಾರ್ದನ ರೆಡ್ಡಿ ನಿವಾಸದ ಬಳಿ ನಡೆದ ಬ್ಯಾನರ್ ಗಲಾಟೆ ವೇಳೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ರೆಡ್ಡಿ ಎಂಬಾತ ಗುಂಡೇಟಿಗೆ ಬಲಿಯಾಗಿದ್ದಾನೆ. ಶಾಸಕರಾದ ಜನಾರ್ದನ ರೆಡ್ಡಿ ಹಾಗೂ ಭರತ್‌ ರೆಡ್ಡಿ ಬೆಂಬಲಿಗರ ನಡುವೆ ದೊಡ್ಡ ಗಲಾಟೆಯೇ ನಡೆದಿತ್ತು. ಪರಸ್ಪರ ಕಲ್ಲು ತೂರಾಡಿಕೊಂಡಿದ್ದು, ದೊಣ್ಣೆಗಳಿಂದ ಬಡಿದಾಡಿಕೊಂಡಿದ್ದರು. ಆಗ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಗನ್​ಮ್ಯಾನ್​ಗಳು, ಗಾಳಿಯಲ್ಲಿ ಗುಂಡು ಹಾರಿಸಿದ್ದರು. ವಿಡಿಯೋವೊಂದರಲ್ಲಿ ಸತೀಶ್ ರೆಡ್ಡಿ ಗನ್​​ಮ್ಯಾನ್ ಜನಾರ್ದನ ರೆಡ್ಡಿ ಮನೆಯತ್ತಲೇ ಫೈರಿಂಗ್ ಮಾಡಿರುವ ದೃಶ್ಯಗಳು ಸೆರೆಯಾಗಿದ್ದು ಗುಂಡು ಬಿದ್ದು ಜನಾರ್ದನ ರೆಡ್ಡಿ ನಿವಾಸದ ಕಿಟಕಿ ಗಾಜು ಪೀಸ್ ಪೀಸ್ ಆಗಿದೆ. ನನ್ನನ್ನು ಹತ್ಯೆ ಮಾಡಲು ನನ್ನ ಮನೆ ಮೇಲೆ ಗುಂಡು ಹಾರಿಸಲಾಗಿದೆ ಎಂದು ಜನಾರ್ಧನ ರೆಡ್ಡಿ ಆರೋಪಿಸಿದ್ದಾರೆ. ಸದ್ಯ ಪೊಲೀಸರು ಸೋಮೊಟೋ‌ ಕೇಸ್ ದಾಖಲಿಸಿಕೊಂಡಿದ್ದಾರೆ. ಘಟನೆ ಸಂಬಂಧ ನಾಲ್ಕು ಪ್ರಕರಣ ದಾಖಲಿಸಲಾಗಿದೆ. ಆದರೆ ಸದ್ಯಕ್ಕೆ ಯಾರನ್ನು ಬಂಧಿಸಿಲ್ಲ ಎಂದು ರಾಜ್ಯ ಸಹಾಯಕ ಪೊಲೀಸ್ ಮಹಾ ನಿರ್ದೇಶಕ ಹೀತೇಂದ್ರ ತಿಳಿಸಿದ್ದಾರೆ.

3. ಬ್ಯಾನರ್ ಗಲಾಟೆ: ಜನಾರ್ಧನ ರೆಡ್ಡಿ-ಶ್ರೀರಾಮುಲು ವಿರುದ್ಧ FIR

ಬ್ಯಾನರ್ ಕಟ್ಟುವ ವಿಚಾರವಾಗಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಬಳ್ಳಾರಿ ನಗರ ಶಾಸಕ ಎನ್. ಭರತ್ ರೆಡ್ಡಿ ಆಪ್ತ ಸಹಾಯಕ ಚಾನೆಲ್ ಶೇಖರ್ ನೀಡಿದ ದೂರಿನ ಆಧಾರದ ಮೇಲೆ ಇಂದು ಬೆಳಗ್ಗೆ ಎಫ್‌ಐಆರ್ ದಾಖಲಿಸಿದ ಪೊಲೀಸರು ಶಾಸಕ ಜನಾರ್ದನ ರೆಡ್ಡಿ ಅವರನ್ನು ಮೊದಲ ಆರೋಪಿಯನ್ನಾಗಿಸಿದ್ದಾರೆ. ಅಲ್ಲದೆ ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ ಅವರನ್ನು ಎರಡನೇ ಆರೋಪಿ. ಶಾಸಕ ಬಿ. ಶ್ರೀರಾಮುಲು ಮೂರನೇ ಆರೋಪಿ ಹಾಗೂ ಬಳ್ಳಾರಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಶ್ರೀನಿವಾಸ್ ಮೋತ್ಕರ್ ನಾಲ್ಕನೇ ಆರೋಪಿ ಮಾಡಲಾಗಿದ್ದು ಎಫ್‌ಐಆರ್‌ನಲ್ಲಿ ಒಟ್ಟು 11 ಜನರನ್ನು ಹೆಸರಿಸಲಾಗಿದೆ. ವಾಲ್ಮೀಕಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕಾಗಿ ಬಳ್ಳಾರಿಯಲ್ಲಿ ಬ್ಯಾನರ್‌ಗಳನ್ನು ಅಳವಡಿಸಲಾಗುತ್ತಿತ್ತು. ಸಿರುಗುಪ್ಪ ರಸ್ತೆಯಲ್ಲಿ ಹಾಕಲಾಗಿದ್ದ ಬ್ಯಾನರ್‌ಗಳನ್ನು ಜನಾರ್ದನ ರೆಡ್ಡಿ ಮತ್ತು ಇತರರು ಹರಿದು ಹಾಕಿದ್ದರು ಎಂದು ಆರೋಪಿಸಿದ್ದಾರೆ.

4. ಅಪ್ರಾಪ್ತ ಬಾಲಕಿಗೆ ಕಿರುಕುಳ: youtuber ರವಿಚಂದ್ರ ಬಂಧನ

ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿಅಪಹರಿಸಿ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ತುಮಕೂರಿನ ಶಿರಾದ ಆರ್‌ಜೆ ಡಿಜಿಟಲ್‌ ನ್ಯೂಸ್‌ ಯೂಟ್ಯೂಬ್‌ ಚಾನೆಲ್‌ನ ರವಿಚಂದ್ರನನ್ನು ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ಪೊಲೀಸರು ಬಂಧಿಸಿದ್ದಾರೆ. ಹೊಸ ವರ್ಷಾಚರಣೆ ಹಿನ್ನೆಲೆ ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿಯಲ್ಲಿ ವೆಂಕಟೇಶ್ ಎಂಬಾತ ತನ್ನ ಫಾರ್ಮ್ ಹೌಸ್​​ನಲ್ಲಿ ಆಯೋಜಿಸಿದ್ದ ನ್ಯೂ‌ಇಯರ್ ಪಾರ್ಟಿಯಲ್ಲಿ ರವಿಚಂದ್ರ ಭಾಗಿಯಾಗಿದ್ದನು. ಹೊಸ ವರ್ಷದ ಆಚರಣೆ ಮುಗಿಸಿ ಮನೆಗೆ ಹೋಗುತ್ತಿದ್ದ ಆಪ್ತಾಪ್ತೆಯನ್ನು ರವಿಚಂದ್ರ ಅಪಹರಿಸಿದ್ದನು. ಪ್ರಕರಣ ಸಂಬಂಧ ಪಾರ್ಟಿ ಆಯೋಜನೆ ಮಾಡಿದ್ದ ವೆಂಕಟೇಶ್ ಹಾಗೂ ಯೂಟ್ಯೂಬರ್ ರವಿಚಂದ್ರನನ್ನ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಪೋಕ್ಸೋ ಪ್ರಕರಣ​​ ದಾಖಲಿಸಲಾಗಿದೆ.

5. ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಪೋಸ್ಟ್: ಇಬ್ಬರು ಆರೋಪಿಗಳ ಬಂಧನ

ನಟ ದರ್ಶನ್ ತೂಗುದೀಪ ಪತ್ನಿ ವಿಜಯಲಕ್ಷ್ಮಿ ವಿರುದ್ಧ ಅಶ್ಲೀಲ ಮತ್ತು ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪದ ಮೇಲೆ ಬೆಂಗಳೂರು ಪೊಲೀಸರು ಸಾಫ್ಟ್‌ವೇರ್ ಎಂಜಿನಿಯರ್ ಮತ್ತು ಆಟೋರಿಕ್ಷಾ ಚಾಲಕನನ್ನು ಬಂಧಿಸಿದ್ದಾರೆ. ಬೆಂಗಳೂರಿನ ಚಿಕ್ಕಬಾಣಾವರ ನಿವಾಸಿ ಆಟೋ ಚಾಲಕ ಚಂದ್ರಶೇಖರ್ ಮತ್ತು ದಾವಣಗೆರೆಯ ಸಾಫ್ಟ್‌ವೇರ್ ಎಂಜಿನಿಯರ್ ನಿತಿನ್ ತನ್ನ ವಿರುದ್ಧ ಅಶ್ಲೀಲ ಮತ್ತು ಅವಹೇಳನಕಾರಿ ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿ ಡಿಸೆಂಬರ್ 24ರಂದು ವಿಜಯಲಕ್ಷ್ಮಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಕೊಟ್ಟಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಿಜಯಲಕ್ಷ್ಮೀ ಇತ್ತೀಚೆಗೆ ಆರೋಪಿಸಿದ್ದರು. ಈ ಬೆನ್ನಲ್ಲೇ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com