ಬಳ್ಳಾರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಸಾವಿಗೆ ಭರತ್ ರೆಡ್ಡಿಯೇ ಕಾರಣ, ಜನಾರ್ದನ್ ರೆಡ್ಡಿ ಹತ್ಯೆಗೆ ಪ್ಲ್ಯಾನ್ : ಆರ್ ಅಶೋಕ್ ಗಂಭೀರ ಆರೋಪ

ಬಳ್ಳಾರಿಯಲ್ಲಿ ಕಾಂಗ್ರೆಸ್ ಗೂಂಡಾಗಳು ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ರಾಜ್ಯವನ್ನು ಬೆಚ್ಚಿ ಬೀಳಿಸಿದೆ ಈ ಘಟನೆ.
R Ashok
ಆರ್ ಅಶೋಕ್
Updated on

ಬೆಂಗಳೂರು: ಬಳ್ಳಾರಿಯಲ್ಲಿ ಕಳೆದ ರಾತ್ರಿ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ ಈಗ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ಆಂಧ್ರ ಪ್ರದೇಶದ ರಕ್ತ ಚರಿತ್ರೆ ಕರ್ನಾಟಕಕ್ಕೆ ಕಾಲಿಟ್ಟಿದೆ. ಬಳ್ಳಾರಿಯಲ್ಲಿ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಕೊಲೆ ಮಾಡಲು ಪ್ಲ್ಯಾನ್ ಮಾಡಲಾಗಿದೆ. ಕಾಂಗ್ರೆಸ್ ಕಾರ್ಯಕರ್ತನ ಹತ್ಯೆಗೆ ಭರತ್ ರೆಡ್ಡಿಯೇ ಕಾರಣ, ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಬೇಕು ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆಗ್ರಹಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಕಾಂಗ್ರೆಸ್ ಗೂಂಡಾಗಳು ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ರಾಜ್ಯವನ್ನು ಬೆಚ್ಚಿ ಬೀಳಿಸಿದೆ ಈ ಘಟನೆ. ಹೊಸ ವರ್ಷದಲ್ಲಿ ಯಾವುದೇ ಘಟನೆ ಆಗದಂತೆ ನೋಡಿಕೊಳ್ಳಿ ಎಂದು ಪೊಲೀಸ್ ಅಧಿಕಾರಿ ಸೂಚನೆ ನೀಡಿದ ಮರು ದಿನವೇ ಇಂತಹ ಘಟನೆ ಆಗಿದೆ ಎಂದರೆ ಕಾನೂನು ಸುವ್ಯವಸ್ಥೆ ತೀರಾ ಹದಗೆಟ್ಟಿದೆ ಎಂದರ್ಥ.

ಆಂಧ್ರದ ರಕ್ತ ಚರಿತ್ರೆ ಕರ್ನಾಟಕಕ್ಕೆ ಕಾಲಿಟ್ಟಿದೆ. ಗುಂಡು ಹಾರಿಸುವ ಸಂಸ್ಕತಿ ಕರ್ನಾಟಕದಲ್ಲಿ ಇರಲಿಲ್ಲ, ಈಗ ಬಂದಿದೆ. ಬಳ್ಳಾರಿ ಕಾಂಗ್ರೆಸ್ ರಿಪಬ್ಲಿಕ್ ಆಗಿದೆ ಎಂದು ಅಶೋಕ್ ಆರೋಪಿಸಿದರು.

ಏಕಾಏಕಿ 40-50 ಜನ ಗುಂಪು ಕಟ್ಟಿ ಜನಾರ್ದನ ರೆಡ್ಡಿ ಮನೆಗೆ ಬಂದು ಫ್ಲೆಕ್ಸ್ ಹಾಕಿದ್ದಾರೆ. ಗೇಟ್ ನುಗ್ಗಿ ಬ್ಯಾನರ್ ಕಟ್ಟಿದ್ದಾರೆ. ಇದರಲ್ಲಿ ಜನಾರ್ದನ ರೆಡ್ಡಿ ಪಾತ್ರ ಏನಿದೆ? ಗುಂಡು ಹಾರಿಸಿರುವುದು ಭರತ್ ರೆಡ್ಡಿ ಬೆಂಬಲಿಗರು. ಕಾಂಗ್ರೆಸ್ ನವರೇ ಗುಂಡು ಹಾರಿಸಿ ಕೊಲೆ ಮಾಡಿ ಜನಾರ್ದನ ರೆಡ್ಡಿ ವಿರುದ್ಧ ಆರೋಪ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಜನಾರ್ದನ್ ರೆಡ್ಡಿ ಹತ್ಯೆಗೆ ಪ್ಲ್ಯಾನ್

ಜನಾರ್ದನ ರೆಡ್ಡಿ ಕೊಲೆ ಮಾಡಲು ಪ್ಲ್ಯಾನ್ ಹಾಕಿ ಬಂದಿದ್ದಾರೆ. ಜನಾರ್ದನ ರೆಡ್ಡಿ ಮನೆಯೊಳಗೆ ಬಂದು ಬ್ಯಾನರ್ ಹಾಕಿರುವುದು ಪೂರ್ವ ಯೋಜಿತ ಸಂಚು. ರೆಡ್ಡಿ ಕೊಲೆ ಮಾಡಲು ನಡೆಸಿದ ಕುತಂತ್ರವಾಗಿದೆ. ಮಿಸ್ ಫೈರ್ ಎಂದು ಈಗ ಹೇಳುತ್ತಿದ್ದಾರೆ. ಹೀಗೆ ಪ್ರಕರಣ ದಾಖಲು ಮಾಡಲು ಒತ್ತಡ ಹೇರಲಾಗುತ್ತಿದೆ. ಜನಾರ್ದನ ರೆಡ್ಡಿಗೆ ಗೃಹ ಸಚಿವರು ಫೋನ್ ಮಾಡಿ ಭದ್ರತೆ ಕೊಡಬೇಕಿತ್ತು. ಆದರೆ ಅದನ್ನು ಗೃಹ ಸಚಿವರು ಮಾಡಿಲ್ಲ ಎಂದು ಆರೋಪಿಸಿದರು.

ನ್ಯಾಯಾಂಗ ತನಿಖೆಗೆ ಆಗ್ರಹ

ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಬೇಕು. ಇದು ಪೂರ್ವನಿಯೋಜಿತ ಸಂಚಾಗಿದೆ. ಜನಾರ್ದನ ರೆಡ್ಡಿ ಮನೆಯಲ್ಲಿ ಇಲ್ಲದೆ ಇದ್ದಾಗ ಇಂತಹ ಘಟನೆ ಆಗಿದೆ. ಇದರ ವಿರುದ್ಧ ಹೋರಾಟ ನಡೆಸುತ್ತೇವೆ ಎಂದರು.

ನಿನ್ನೆ ರಾತ್ರಿ ಆಗಿದ್ದೇನು?

ಬಳ್ಳಾರಿಯ ವಾಲ್ಮೀಕಿ ವೃತ್ತದಲ್ಲಿನ ವಾಲ್ಮೀಕಿ ಪ್ರತಿಮೆ ಅನಾವರಣ ಕಾರ್ಯಕ್ರಮ ಪ್ರಯುಕ್ತ ಬ್ಯಾನರ್ ಅಳವಡಿಕೆ ವಿಚಾರವಾಗಿ ಗಲಾಟೆ ನಡೆದಿತ್ತು. ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಮನೆಯ ಹತ್ತಿರ ಹಾಕಲಾಗಿದ್ದ ಬ್ಯಾನರ್ ಗಳನ್ನು ರೆಡ್ಡಿ ಆಪ್ತರು ಕಿತ್ತು ಹಾಕಿದ್ದಾರೆ ಎಂಬುದು ನಾರಾ ಭರತ್ ರೆಡ್ಡಿ ಹಾಗೂ ಬೆಂಬಲಿಗರ ಆರೋಪಿಸಿ ಸ್ಥಳದಲ್ಲಿ ಗಲಭೆಯೆಬ್ಬಿಸಿಗರು, ಈ ಸಂದರ್ಭದಲ್ಲಿ ನಡೆದ ಗಲಾಟೆ, ಹಲ್ಲೆ, ಕಲ್ಲುತೂರಾಟ ಸಂದರ್ಭದಲ್ಲಿ ಗನ್ ಮ್ಯಾನ್ ಗಾಳಿಯಲ್ಲಿ ಹಾರಿಸಿದ ಗುಂಡು ತಗುಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ.

ಘಟನೆಗೆ ಸಂಬಂಧಿಸಿ ಶಾಸಕ ಭರತ್ ರೆಡ್ಡಿ ಆಪ್ತ ಚಾನಾಳ್ ಶೇಖರ್ ದೂರು ನೀಡಿದ್ದು, ಈ ಆಧಾರದಲ್ಲಿ ಶಾಸಕ ಜನಾರ್ದನ ರೆಡ್ಡಿ ಸೇರಿ 11ಜನರ ಮೇಲೆ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com