ನರೇಗಾ ಹೆಸರು ಬದಲಾವಣೆ ಮೋದಿ ಸರ್ಕಾರದ ಸರ್ವಾಧಿಕಾರ ಧೋರಣೆ, ಕಾಯ್ದೆ ಮರುಸ್ಥಾಪಿಸುವವರೆಗೆ ಹೋರಾಟ: ಸಿಎಂ ಸಿದ್ದರಾಮಯ್ಯ

ಸುಮಾರು 20 ವರ್ಷಗಳ ಹಿಂದೆ ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಕಾಲದಲ್ಲಿ 'ದುಡಿಮೆಯ ಹಕ್ಕು' ನೀಡುವ ಉದ್ದೇಶದಿಂದ ನರೇಗಾ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಬಡವರಿಗೆ ಆರ್ಥಿಕ ಭದ್ರತೆ ನೀಡುವ ಈ ಕಾಯಿದೆಯನ್ನು ಈಗ 'ವಿಬಿ ರಾಮ್ ಜೀ' ಕಾಯಿದೆ ಎಂದು ಬದಲಾಯಿಸಲಾಗಿದೆ.
CM Siddaramaiah
ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹಳ್ಳಿ ಅಧಿಕಾರ ಕಸಿದುಕೊಂಡು, ಗ್ರಾಮೀಣ ಆರ್ಥಿಕತೆಯನ್ನು ನಾಶ ಪಡಿಸಲು ಮುಂದಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ರದ್ಧತಿ ಕುರಿತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಸುಮಾರು 20 ವರ್ಷಗಳ ಹಿಂದೆ ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಕಾಲದಲ್ಲಿ 'ದುಡಿಮೆಯ ಹಕ್ಕು' ನೀಡುವ ಉದ್ದೇಶದಿಂದ ನರೇಗಾ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಬಡವರಿಗೆ ಆರ್ಥಿಕ ಭದ್ರತೆ ನೀಡುವ ಈ ಕಾಯಿದೆಯನ್ನು ಈಗ 'ವಿಬಿ ರಾಮ್ ಜೀ' ಕಾಯಿದೆ ಎಂದು ಬದಲಾಯಿಸಲಾಗಿದೆ. ಈ ಮಹತ್ವದ ಬದಲಾವಣೆ ಮಾಡುವ ಮುನ್ನ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ಜೊತೆಗಾಗಲಿ ಅಥವಾ ಜನರ ಜೊತೆಗಾಗಲಿ ಯಾವುದೇ ಚರ್ಚೆ ನಡೆಸಿಲ್ಲ' ಎಂದು ಸಿಎಂ ಅಸಮಾಧಾನ ವ್ಯಕ್ತಪಡಿಸಿದರು.

ಮೋದಿ ಸರ್ಕಾರ ಡಿಸೆಂಬರ್ 17ರಂದು ಕಾಯ್ದೆಯನ್ನು ಸಂಸತ್ತಿನಲ್ಲಿ ಮಂಡಿಸಿ ಡಿ.18ರಂದು ಅಂಗೀಕಾರ ಪಡೆದಿದೆ. ಸುಮಾರು 12.16 ಕೋಟಿ ನರೇಗಾ ಕಾರ್ಮಿಕರು ದೇಶದಲ್ಲಿದ್ದಾರೆ. ಅದರಲ್ಲಿ 6.21 ಕೋಟಿ ಮಹಿಳೆಯರು ಇದ್ದಾರೆ. ಪ.ಜಾತಿಯವರು ಶೇ.17, ಪ.ವರ್ಗ ಶೇ. 11 ಇದ್ದಾರೆ. ನಮ್ಮ ರಾಜ್ಯದಲ್ಲಿ 71.18 ಲಕ್ಷ ನರೇಗಾ ಕಾರ್ಮಿಕರಿದ್ದಾರೆ. ಇದರಲ್ಲಿ 36.75 ಲಕ್ಷ ಮಹಿಳೆಯರು, ಅಂದರೆ ಶೇ. 51.6 ಮಹಿಳೆಯರಿದ್ದಾರೆ ಎಂದು ವಿವರಿಸಿದರು.

CM Siddaramaiah
ಗಾಂಧೀಜಿ ಹೆಸರಿಗೆ ಕತ್ತರಿ, ಬಿಜೆಪಿ ಅಂತಿಮ ದಿನಗಳು ಆರಂಭ; ಕೇಂದ್ರದಿಂದ ನರೇಗಾ ಯೋಜನೆ ಸಮಾಧಿ: ಡಿ.ಕೆ ಶಿವಕುಮಾರ್

ಕಾರ್ಪೊರೇಟ್ ಕಂಪೆನಿಗಳಿಗೆ ಲಾಭ

ಮನಮೋಹನ್ ಸಿಂಗ್ ಅವರ ಜನಪರ ಕಾಯ್ದೆಯನ್ನು ಹಿಂಪಡೆದುಕೊಳ್ಳುವ ಮೂಲಕ ಕಾರ್ಪೊರೇಟ್ ಕಂಪೆನಿಗಳಿಗೆ ಲಾಭ ಮಾಡಿಕೊಡುವ ಕೆಲಸವನ್ನು ಮೋದಿ ಸರ್ಕಾರ ಮಾಡುತ್ತಿದೆ.‌ ನರೇಗಾ ಕಾಯ್ದೆ ಪ್ರಕಾರ ಜನಸಾಮಾನ್ಯರು, ಕೂಲಿ ಕಾರ್ಮಿಕರು, ಕೃಷಿ ಕಾರ್ಯಗಳ ಜೊತೆಯಲ್ಲಿ ತಾವಿದ್ದ ಸ್ಥಳದಲ್ಲೇ ನರೇಗಾ ಅಡಿ ಕೂಲಿ ಕೆಲಸ ಮಾಡಲು ಅವಕಾಶವಿತ್ತು. ಆ ಮೂಲಕ ಹಳ್ಳಿಗಾಡಿನ ಆರ್ಥಿಕತೆ ಕಟ್ಟಲು ಸಾಧ್ಯವಾಗಿತ್ತು. ಸ್ಥಳೀಯವಾಗಿ ಆಸ್ತಿ ಸೃಜನೆಯಾಗುತ್ತಿತ್ತು. ಉದ್ಯೋಗ ಕೇಳಿ ಪಡೆಯುವ ಹಕ್ಕು ಜನರಿಗಿತ್ತು. ಈಗ ಇದ್ಯಾವುದೂ ಇಲ್ಲವಾಗಿದೆ ಎಂದರು.‌

ಕಳೆದ 11 ವರ್ಷಗಳ ಕೇಂದ್ರ ಸರ್ಕಾರದ ಸಾಧನೆ ಅಂದರೆ ಯೋಜನೆಗಳ ಹೆಸರು ಬದಲಾಯಿಸಿರುವುದು ಮಾತ್ರ. ಹಿಂದೆ ಜಾರಿಯಲ್ಲಿದ್ದ ಸುಮಾರು 30 ಯೋಜನೆಗಳ ಹೆಸರು ಬದಲಾವಣೆ ಅಥವಾ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವ ಕಾರ್ಯವನ್ನು ಮೋದಿ ಸರ್ಕಾರ ಮಾಡಿದೆ.

ಪ್ರಸ್ತುತ ಕಾಯ್ದೆಯಡಿ 100 ದಿನ ಕನಿಷ್ಟ ಕೆಲಸ ನೀಡಬೇಕಾಗಿತ್ತು. ಅವರು ಎಲ್ಲಿ ವಾಸಿಸುತ್ತಾರೋ ಅಲ್ಲಿಯೇ ಕೆಲಸ ನೀಡಬೇಕಾಗಿತ್ತು. ಈಗ ಹೊಸ ಕಾಯ್ದೆ ಸೆಕ್ಷನ್ 5(1) ಪ್ರಕಾರ ಸರ್ಕಾರ ಅಧಿಸೂಚಿತ ಪ್ರದೇಶದಲ್ಲಿ ಮಾತ್ರ ಉದ್ಯೋಗ ನೀಡಲಾಗುತ್ತದೆ. ಉದ್ಯೋಗ ದೊರೆಯುವ ಬಗ್ಗೆ ಯಾವುದೇ ಗ್ರಾಮ ಪಂಚಾಯತ್ ಗಳಿಗೂ ಖಾತ್ರಿಯಿರುವುದಿಲ್ಲ‌ ಎಂದರು.

CM Siddaramaiah
VB-G RAM G ಜಾರಿ ಬದಲು ಸ್ವಂತ ಉದ್ಯೋಗ ಖಾತ್ರಿ ಯೋಜನೆಗೆ ಕರ್ನಾಟಕ ಮುಂದು: ಇಂದು ಘೋಷಣೆ?

ವರ್ಷದ ಯಾವುದೇ ಅವಧಿಯಲ್ಲಿ ಲಭ್ಯವಾಗುತ್ತಿದ್ದ ಕೂಲಿ ಕೆಲಸವನ್ನು ಈಗ ನಿರ್ಬಂಧಿಸಲಾಗಿದ್ದು, ಕೃಷಿ ಚಟುವಟಿಕೆ ಅವಧಿಯ 60 ದಿನ ಯೋಜನೆಯಡಿ ಯಾವುದೇ ಉದ್ಯೋಗ ನೀಡಲಾಗುವುದಿಲ್ಲ. ಹಣದುಬ್ಬರಕ್ಕೆ ತಕ್ಕಂತೆ ಕೂಲಿ ಹಣವನ್ನು ಸರಿದೂಗಿಸುವ ಅವಕಾಶವನ್ನು ತೆಗೆದು ಹಾಕಲಾಗಿದೆ. ಹಿಂದಿನ ಕಾಯ್ದೆ ಪ್ರಕಾರ ಕೇಂದ್ರ ಸರ್ಕಾರ ಪೂರ್ಣ ಅನುದಾನವನ್ನು ಭರಿಸುತ್ತಿತ್ತು. ಹೊಸ ಕಾಯ್ದೆ ಪ್ರಕಾರ ಶೇ.60 ರಷ್ಟು ಕೇಂದ್ರ ಹಾಗೂ ಶೇ.40ರಷ್ಟು ರಾಜ್ಯ ಸರ್ಕಾರ ಭರಿಸಲಿದೆ. ಇದು ರಾಜ್ಯಗಳ ಮೇಲೆ ಹೆಚ್ಚಿನ ಹಣಕಾಸು ಹೊರೆಯನ್ನು ಹೇರಲಿದ್ದು, ಇದು ಸಂವಿಧಾನದ ಆರ್ಟಿಕಲ್ 258 ಮತ್ತು 280ಗೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯತ್ಗಳಿಗೆ ಇದ್ದ ಅಧಿಕಾರವನ್ನು ಇದೀಗ ಕೇಂದ್ರ ಸರ್ಕಾರ ಕಿತ್ತು ಕೊಂಡಿದ್ದು, ಇದು ಒಕ್ಕೂಟ ವ್ಯವಸ್ಥೆಗೆ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿದೆ. ಹೊಸ ಕಾಯ್ದೆಯನ್ನು ಜಾರಿಗೊಳಿಸದಿರುವಂತೆ ಕೋರಿ ಪ್ರಧಾನಿಯವರಿಗೆ ಡಿ.30ರಂದು ನಾನು ಪತ್ರ ಬರೆದಿದ್ದೇನೆ. ಹೊಸ ಕಾಯ್ದೆಯನ್ನು ರದ್ದುಪಡಿಸಬೇಕು. ನರೇಗಾ ಕಾಯ್ದೆ ಮತ್ತೆ ಜಾರಿಗೊಳಿಸಬೇಕು. ಮಹಿಳೆಯರು, ದಲಿತರ ಉದ್ಯೋಗದ ಹಕ್ಕನ್ನು ಪುನರ್ ಸ್ಥಾಪಿಸಬೇಕು. ಪಂಚಾಯತ್ಗಳ ಸ್ವಯಂ ಆಡಳಿತದ ಹಕ್ಕನ್ನು ಮರು ಸ್ಥಾಪಿಸಬೇಕು ಎಂದು ರಾಜ್ಯ ಸರ್ಕಾರ ಕೇಂದ್ರವನ್ನು ಒತ್ತಾಯಿಸಿದೆ‌ ಎಂದರು.

ಹೊಸ ಬಿಲ್ ಮೂಲಕ ಗ್ರಾಮೀಣ ಜನರ ಜೀವನೋಪಾಯ ಕಸಿಯಲಾಗುತ್ತಿದೆ. ರಾಜ್ಯ ಸರ್ಕಾರದ ಜೊತೆ ಚರ್ಚೆ ಮಾಡದೆ, ರಾಜ್ಯಗಳ ಆಯವ್ಯಯದ ಮೇಲೆ ಹೆಚ್ಚಿನ ಹೊರೆಯನ್ನು ಸಂವಿಧಾನ ಬಾಹಿರವಾಗಿ ಹೇರಲಾಗುತ್ತಿದೆ ಎಂದರು. ಹೊಸ ಕಾಯ್ದೆಯಿಂದ ನಿರುದ್ಯೋಗ ಹೆಚ್ಚಳ, ಉದ್ಯೋಗದಲ್ಲಿ ಮಹಿಳೆಯರ ಪಾಲುದಾರಿಕೆ ಇಳಿಕೆ, ದಲಿತ ಹಾಗೂ ಆದಿವಾಸಿ ಕುಟುಂಬಗಳ ಮೇಲೆ ಹೆಚ್ಚಿನ ಒತ್ತಡ ಸೃಷ್ಟಿ, ಗ್ರಾಮೀಣ ಜೀವನೋಪಾಯಗಳ ಕುಸಿತದಿಂದ ಗ್ರಾಮೀಣ ಬದುಕು ದುಸ್ತರಗೊಳ್ಳಲಿದೆ. ಪಂಚಾಯತ್ಗಳು ಕೇವಲ ಅನುಷ್ಠಾನ ಸಂಸ್ಥೆಗಳಾಗಿ ಕಾರ್ಯ ನಿರ್ವಹಿಸುವಂತಾಗುತ್ತದೆ. ಈ ಮೂಲಕ ಗುತ್ತಿಗೆದಾರರಿಗೆ ಹೆಚ್ಚಿನ ಅವಕಾಶ ಸೃಷ್ಟಿಸಲಾಗುತ್ತಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com