
ಓಂ ಶಕ್ತಿ ಮಾಲಾಧಾರಿಗಳ ಮೆರವಣಿಗೆಯ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರಿಂದ ಬೆಂಗಳೂರಿನ ಜಗಜೀವನರಾಮ್ ನಗರದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿತ್ತು. ಭಾನುವಾರ ರಾತ್ರಿ ಮೆರವಣಿಗೆಯ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಮಹಿಳೆಯರು ಗಾಯಗೊಂಡಿದ್ದರು. ಘಟನೆಯ ನಂತರ, ನಿವಾಸಿಗಳು ಜೆಜೆ ನಗರ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿ, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ಸಂಬಂಧ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಘಟನೆಗೆ ಸಂಬಂಧಿಸಿದಂತೆ ಮೂವರು ಬಾಲಕರನ್ನು ಬಂಧಿಸಲಾಗಿದೆ. ಬಂಧಿತರು 15 ಮತ್ತು 16 ವರ್ಷದ ಅಪ್ರಾಪ್ತರಾಗಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು, ಕಾನೂನು ಪ್ರಕಾರ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಕೋಗಿಲು ಕ್ರಾಸ್ ಪ್ರದೇಶದ ನಿರಾಶ್ರಿತರಿಗೆ ಮನೆ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಕಾನೂನುಬದ್ಧ ಹಾಗೂ ಮಾನವೀಯ ಕ್ರಮ ಅನುಸರಿಸಲು ತೀರ್ಮಾನಿಸಿದೆ. ಈ ಸಂಬಂಧ ವಿಕಾಸಸೌಧದಲ್ಲಿರುವ ಸಚಿವ ಕೃಷ್ಣ ಭೈರೇಗೌಡ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಸರ್ಕಾರಿ ಜಮೀನು ಒತ್ತುವರಿ ವಿಚಾರವಾಗಿ ಸ್ಪಷ್ಟ ನಿಲುವು ಕೈಗೊಳ್ಳಲಾಗಿದೆ. ಸರ್ಕಾರಿ ಜಮೀನಿನಲ್ಲಿ ಯಾರಿಗಾದರೂ ಹಣ ನೀಡಿ ಒತ್ತುವರಿ ಮಾಡಿಸಿಕೊಂಡಿದ್ದರೆ, ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದರು. ಅಲೆಮಾರಿಗಳು ತಾತ್ಕಾಲಿಕವಾಗಿ ಬಂದು ಹೋಗುತ್ತಾರೆ. ಅವರಿಗೆ ಭೂ ಒತ್ತುವರಿ ಅಗತ್ಯವಿಲ್ಲ. ಆದರೆ, ಉದ್ದೇಶಪೂರ್ವಕವಾಗಿ ಸರ್ಕಾರಿ ಜಮೀನು ಒತ್ತುವರಿ ಮಾಡುವವರನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ. ಸರ್ಕಾರಿ ಜಮೀನಿನಲ್ಲಿ ಶೆಡ್ ಹಾಕಿದ ತಕ್ಷಣ ಮನೆ ನೀಡುವುದು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತದೆ. ಇದರಿಂದ ಸರ್ಕಾರವೇ ಪರೋಕ್ಷವಾಗಿ ಭೂ ಒತ್ತುವರಿಗೆ ಕುಮ್ಮಕ್ಕು ನೀಡಿದಂತಾಗುತ್ತದೆ. ಈಗಾಗಲೇ ಸಾವಿರಾರು ಜನ ಸರ್ಕಾರಿ ಮನೆಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಿರುವಾಗ, ಒತ್ತುವರಿದಾರರಿಗೆ ಏಕಾಏಕಿ ಮನೆ ನೀಡುವುದು ನ್ಯಾಯಸಮ್ಮತವಲ್ಲ ಎಂದು ಕೃಷ್ಣ ಭೈರೇಗೌಡ ಹೇಳಿದರು. ಕೋಗಿಲುನಲ್ಲಿ ನಡೆದ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಮನೆ ಕಳೆದುಕೊಂಡವರಿಗೆ ಮನೆಗಳನ್ನು ಒದಗಿಸುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಬಿಜೆಪಿ ಇಂದು ಪ್ರತಿಭಟನೆ ನಡೆಸಿತು.
ಬೀದರ್ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಹುಮನಾಬಾದ್ ಕ್ಷೇತ್ರದ ಬಿಜೆಪಿ ಶಾಸಕ ಸಿದ್ದು ಪಾಟೀಲ್ ಹಾಗೂ ಕಾಂಗ್ರೆಸ್ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್ ನಡುವೆ ತೀವ್ರ ವಾಗ್ವಾದ ನಡೆಯಿತು. ಅರಣ್ಯ ಇಲಾಖೆಯ ಭೂಮಿಯನ್ನು ಭೀಮರಾವ್ ಪಾಟೀಲ್ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಶಾಸಕ ಸಿದ್ದು ಪಾಟೀಲ್ ಆರೋಪಿಸಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಗೆ ತಿಳಿಸಿದರು. ಇದಕ್ಕೆ ಆಕ್ರೋಶಗೊಂಡ ಭೀಮರಾವ್ ಪಾಟೀಲ್, ಸಭೆಯಲ್ಲೇ ಏಕವಚನ ಬಳಸಿ ಶಾಸಕನನ್ನು ನಿಂದಿಸಿದ್ದಲ್ಲೇ ಸಿದ್ದು ಪಾಟೀಲ್ ಬಳಿಗೆ ತೆರಳಿದರು. ಪರಿಸ್ಥಿತಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು ಕೂಡಲೇ ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು. ಬಳಿಕ ಸಚಿವ ಈಶ್ವರ ಖಂಡ್ರೆ ಮಧ್ಯಸ್ಥಿಕೆ ವಹಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದರು.
ಕೊಪ್ಪಳದ ಹಿಟ್ನಾಳ ಗ್ರಾಮದಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದ ವೇಳೆ ಭಾರಿ ಹೈಡ್ರಾಮಾ ನಡೆದಿದ್ದು, ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸಚಿವ ವಿ. ಸೋಮಣ್ಣ ಅವರತ್ತ ಕುರ್ಚಿ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಿಗಿ ಹಾಗೂ ಸಂಸದ ಕೆ. ರಾಜಶೇಖರ್ ಹಿಟ್ನಾಳ್ ಹೆಸರನ್ನು ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಸೇರಿಸಿಲ್ಲ. ಶಿಷ್ಟಾಚಾರ ಪಾಲಿಸಿಲ್ಲ ಎಂದು ಆರೋಪಿಸಿ ಕೇಂದ್ರ ಸಚಿವ ಸೋಮಣ್ಣ ಎದುರೇ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸೋಮಣ್ಣ ಅವರ ಕಾರಿಗೂ ಮುತ್ತಿಗೆ ಹಾಕಿ ಆಕ್ರೋಶ ಪ್ರದರ್ಶಿಸಿದ್ದಾರೆ. ಇದರಿಂದ ತೀವ್ರ ಮುಜುಗರ ಅನುಭವಿಸಿದ ಸೋಮಣ್ಣ ಕೇವಲ 5 ನಿಮಿಷ ಕಾಲ ಸ್ಥಳದಲ್ಲಿದ್ದು ತೆರಳಿದರು. ಯಾವುದೇ ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ. ಸುಮಾರು 27 ಕೋಟಿ. ರೂಪಾಯಿ ವೆಚ್ಚದ ಹಿಟ್ನಾಳ್, ಮುನಿರಾಬಾದ್, ಗಿಣಗೇರಾ ಮೇಲ್ಸೇತುವೆ ಕಾಮಗಾರಿ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಹಣದಲ್ಲಿ ನಡೆಯಲಿದೆ ಎಂದು ಸೋಮಣ್ಣ ಈ ವೇಳೆ ಹೇಳಿದರು.
ಕಳೆದ ಎರಡು ದಿನಗಳಲ್ಲಿ ತುಮಕೂರಿನ ದೇವರಾಯನದುರ್ಗ-ದುರ್ಗದಹಳ್ಳಿ ಅರಣ್ಯ ಪ್ರದೇಶದಲ್ಲಿ 200 ರಿಂದ 500 ಮೀಟರ್ ವ್ಯಾಪ್ತಿಯಲ್ಲಿ ಒಂಬತ್ತು ಮಂಗಗಳು ಮತ್ತು ಎರಡು ಲಂಗೂರ್‌ಗಳ ಮೃತದೇಹಗಳು ಪತ್ತೆಯಾಗಿದ್ದು ಆತಂಕ ಸೃಷ್ಟಿಸಿತ್ತು. ಈ ವಿಷಯ ಬೆಳಕಿಗೆ ಬಂದ ನಂತರ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದು, ಶನಿವಾರ ಬೆಳಿಗ್ಗೆ ಮತ್ತೆ ಇನ್ನಷ್ಟು ಮಂಗಗಳು ಸತ್ತಿರುವುದು ಕಂಡುಬಂದಿದೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಪ್ರಾಥಮಿಕವಾಗಿ ಪ್ರಾಣಿಗಳ ಅನ್ನನಾಳ ಮತ್ತು ಕರುಳಿನಲ್ಲಿ ಅಕ್ಕಿ ಕಂಡುಬಂದಿದ್ದು, ವಿಷಾಹಾರ ಸೇವನೆಯಿಂದ ಸಾವಿಗೀಡಾಗಿರಬಹುದು ಎಂದು ಶಂಕಿಸಲಾಗಿದೆ.
Advertisement