ಶೂದ್ರ ವರ್ಗ ಜನಸಂಖ್ಯೆಯ ಸುಮಾರು ಶೇ. 80 ರಷ್ಟಿದ್ದು, ಅಕ್ಷರ ಸಂಸ್ಕೃತಿಯಿಂದ ವಂಚಿತ- ಸಿಎಂ ಸಿದ್ದರಾಮಯ್ಯ

ಕುಂಬಾರ ಸಮಾಜದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ಕುಂಬಾರ ಅಭಿವೃದ್ಧಿ ನಿಗಮಕ್ಕೆ ಸೂಕ್ತ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
CM Siddaramaiah
ಸಿಎಂ ಸಿದ್ದರಾಮಯ್ಯ
Updated on

ಮೈಸೂರು: ಆರ್ಥಿಕವಾಗಿ ಹಿಂದುಳಿದ ಶೂದ್ರ ವರ್ಗದವರು ಜನಸಂಖ್ಯೆಯ ಸುಮಾರು ಶೇ.80 ರಷ್ಟಿದ್ದು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಸೋಮವಾರ ಹೇಳಿದರು.

ರಾಜ್ಯ ಕುಂಬಾರರ ಮಹಾ ಸಮ್ಮೇಳನದಲ್ಲಿ ಮಾತನಾಡಿದ ಮುಖ್ಯಮಂತ್ರಿ, ಕುಂಬಾರ ಸಮುದಾಯದವರು ಅತ್ಯಂತ ಹಿಂದುಳಿದ ಮತ್ತು ಕಡಿಮೆ ಜನಸಂಖ್ಯೆಯಿರುವ ಸಮುದಾಯವಾಗಿದೆ. ಕಾಯಕ ಯೋಗಿಗಳಾಗಿರುವ ಕುಂಬಾರ ಸಮಾಜದವರು ಮಣ್ಣಿನ ಕಲಾಕೃತಿಗಳನ್ನು ನಿರ್ಮಿಸುವ ಕಲೆಯ ಪರಿಣಿತಿ ಹೊಂದಿದ್ದಾರೆ. ಜ್ಞಾನದ ಬೆಳಕು ನೀಡಿದ ಕವಿ ಸರ್ವಜ್ಞರು, ಈ ಸಮುದಾಯಕ್ಕೆ ಸೇರಿರುವುದು ಹೆಮ್ಮೆಯ ವಿಷಯ. 12ನೇ ಶತಮಾನದಲ್ಲಿ ಬಸವಣ್ಣನವರು ಕಾಯಕ ಮತ್ತು ದಾಸೋಹಗಳನ್ನು ಸಮಾಜಕ್ಕೆ ನೀಡಿದರು ಎಂದು ಸ್ಮರಿಸಿದರು.

ಕುಂಬಾರ ಸಮಾಜದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ಕುಂಬಾರ ಅಭಿವೃದ್ಧಿ ನಿಗಮಕ್ಕೆ ಸೂಕ್ತ ಅನುದಾನ ನೀಡಲಾಗುವುದು. ಕುಂಬಾರ ಸಮುದಾಯದ ಬೇಡಿಕೆಗಳನ್ನು ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುವುದು. ಸಮುದಾಯದವರಿಗೆ ಬಿಡಿಎ ನಿವೇಶನ ಪಡೆಯಲು ಸೂಕ್ತ ಅನುದಾನ ನೀಡುವ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಲಾಗುವುದು ಎಂದರು.

ಶಿಕ್ಷಣದ ಮಹತ್ವವನ್ನು ಮನಗಂಡು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿಸಿದರು. ಶಿಕ್ಷಣವಿಲ್ಲದಿದ್ದರೆ ನಾವು ಮನುಷ್ಯರಾಗಲು ಸಾಧ್ಯವಿಲ್ಲ ಹಾಗೂ ಸ್ವಾಭಿಮಾನಿಗಳಾಗಿ ಬದುಕಲಾಗುವುದಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ನೀಡಿದ ಮೇಲೆ ಎಲ್ಲರಿಗೂ ಸಮಾನ ಅವಕಾಶಗಳು ದೊರಕಿತು. ಸ್ವಾತಂತ್ರ್ಯ ಬಂದ ನಂತರ ನಮ್ಮಲ್ಲಿ ಅನೇಕರು ವಿದ್ಯಾವಂತರಾಗಲು ಸಾಧ್ಯವಾಯಿತು ಎಂದು ಹೇಳಿದರು.

ಬೇಡರ ಜಾತಿಗೆ ಸೇರಿದ ವಾಲ್ಮೀಕಿ ರಾಮಾಯಣ ಬರೆದರು. ಬೆಸ್ತರ ಜಾತಿಗೆ ಸೇರಿದ ವ್ಯಾಸ ಮಹರ್ಷಿಗಳು ಮಹಾಭಾರತವನ್ನು ಬರೆದರು. ಸಂವಿಧಾನ ರಚನಾ ಸಮಿತಿಯ ಸದಸ್ಯರಾಗಿದ್ದ ರತ್ನಪ್ಪ ಭರಮಪ್ಪ ಕುಂಬಾರರು ಸಮುದಾಯದ ಧೀಮಂತ ನಾಯಕರಾಗಿದ್ದರು. ಜಾತಿ ವ್ಯವಸ್ಥೆಯನ್ನು ತಂದು ಜನರ ದಾರಿ ತಪ್ಪಿಸಲಾಗಿದೆ. ನಾನು ವಕೀಲ ಶಿಕ್ಷಣ ಪಡೆದಿದ್ದರಿಂದಲೇ ಇಂದು ಮುಖ್ಯಮಂತ್ರಿಯಾಗಿ ನಿಮ್ಮೆದುರಿರಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಮಹಾನ್ ಜ್ಞಾನಿಯಾಗಿದ್ದ ನಾರಾಯಣ ಗುರುಗಳು, ಒಂದೇ ಧರ್ಮ, ಒಂದೇ ಜಾತಿ ಎಂದು ಪ್ರತಿಪಾದಿಸಿದರು. ಅಸ್ಪೃಶ್ಯತೆಯಿಂದ ದೇಗುಲಗಳಿಗೆ ಪ್ರವೇಶ ನಿರ್ಬಂಧಿಸುತ್ತಿದ್ದ ಕಾಲದಲ್ಲಿ, ‘ನಿಮ್ಮದೇ ದೇವಾಲಯಗಳನ್ನು ನಿರ್ಮಿಸಿಕೊಳ್ಳಿ’ ಎಂದು ಜನರಿಗೆ ಕರೆ ನೀಡಿದ್ದರು ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com