

ಬೆಂಗಳೂರು: ಬಳ್ಳಾರಿ ಗುಂಡಿನ ದಾಳಿಯಲ್ಲಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತನ ಮರಣೋತ್ತರ ಪರೀಕ್ಷೆಯನ್ನು ಎರಡು ಬಾರಿ ನಡೆಸಲಾಗಿದೆ ಎಂಬ ಆರೋಪವನ್ನು ಗೃಹ ಸಚಿವ ಜಿ. ಪರಮೇಶ್ವರ ಮಂಗಳವಾರ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
ಇತ್ತೀಚಿನ ಬಳ್ಳಾರಿ ಗುಂಡಿನ ದಾಳಿ ಘಟನೆಯನ್ನು ಮುಚ್ಚಿಹಾಕಲು ರಾಜ್ಯ ಸರ್ಕಾರ "ವ್ಯವಸ್ಥಿತ ಪಿತೂರಿ" ನಡೆಸಿದೆ. ಎರಡು ಬಾರಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರು ಆರೋಪಿಸಿದ್ದರು. ಅಲ್ಲದೆ ಕಾಂಗ್ರೆಸ್ ಕಾರ್ಯಕರ್ತನ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದರು.
ಇಂದು ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಪರಮೇಶ್ವರ ಅವರು, ರಾಜಕೀಯ ನಾಯಕರು ಸರಿಯಾದ ಪರಿಶೀಲನೆ ಇಲ್ಲದೆ ಹೇಳಿಕೆಗಳನ್ನು ನೀಡಬಾರದು. ಯಾವುದೇ ವಿಚಾರವಾಗಲಿ ತಿಳಿದುಕೊಂಡು ಮಾತನಾಡಬೇಕು. ಇಲ್ಲವಾದರೆ ಬೇರೆ ರೀತಿಯ ಪರಿಣಾಮ ಆಗುತ್ತದೆ. ನನ್ನನ್ನು ಸೇರಿದಂತೆ ರಾಜಕೀಯ ನಾಯಕರುಗಳು ಮಾತನಾಡುವಾಗ ಹೇಳಿಕೆಗಳು ಸಮಾಜದಲ್ಲಿ ಏನಾಗಬಹುದು ಎಂಬುದನ್ನು ಅರಿತುಕೊಂಡು ಮಾತನಾಡಬೇಕು ಎಂದರು.
"ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರೇ ಎರಡು ಬಾರಿ ಮಾಡಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಎರಡು ಬಾರಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ಹೇಳುವವರು - ಅವರು ಅದನ್ನು ನೋಡಿದ್ದಾರೆಯೇ? ವೈದ್ಯರು ಹೇಳಿಕೆ ನೀಡಿದಾಗ, ನಾವು ಯಾರನ್ನು ನಂಬಬೇಕು? ಮರಣೋತ್ತರ ಪರೀಕ್ಷೆಯನ್ನು ಎರಡು ಬಾರಿ ನಡೆಸಲಾಗಿಲ್ಲ ಎಂಬ ವೈದ್ಯರ ಹೇಳಿಕೆಯನ್ನು ನಾನು ಒಪ್ಪುತ್ತೇನೆ" ಎಂದರು.
ನಾನು ಗೃಹ ಸಚಿವನಾಗಿ ಮೂರನೇ ಅವಧಿಗೆ ಸೇವೆ ಸಲ್ಲಿಸುತ್ತಿದ್ದು, 38 ವರ್ಷಗಳ ರಾಜಕೀಯ ಅನುಭವ ಹೊಂದಿದ್ದೇನೆ. ಪಕ್ಷ ಮತ್ತು ಸರ್ಕಾರ ಎರಡರಲ್ಲೂ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿದ್ದೇನೆ ಎಂದು ಹೇಳಿದರು.
ಜನವರಿ 4 ರಂದು ಬಳ್ಳಾರಿಯಲ್ಲಿ ಬಿಜೆಪಿ ಶಾಸಕ ಜಿ. ಜನಾರ್ದನ ರೆಡ್ಡಿ ಅವರ ನಿವಾಸದ ಬಳಿ ಬ್ಯಾನರ್ ಅಳವಡಿಸುವ ವಿಚಾರಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಖಾಸಗಿ ಗನ್ ಮ್ಯಾನ್ ಹಾರಿಸಿದ ಗುಂಡಿನಿಂದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವನ್ನಪ್ಪಿದ್ದಾರೆ.
ಇದೇ ವೇಳೆ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜು ಅರಸು ಅವರ 2792 ದಿನಗಳನ್ನು ಸರಿಗಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಅಭಿನಂದನೆ ಸಲ್ಲಿಸಿದರು.
Advertisement