

ಬೆಂಗಳೂರು: ಸಿದ್ದರಾಮಯ್ಯ ಅವರಿಗೆ ಒಳ್ಳೆಯದಾಗಲಿ, ಐ ವಿಶ್ ಹಿಮ್ ಆಲ್ ದ ಬೆಸ್ಟ್. ಗುಡ್ ಲಕ್ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪೂರ್ಣಾವಧಿಗೆ ನಾನೇ ಸಿಎಂ ಆಗಿ ಮುಂದುವರಿಯುವ ವಿಶ್ವಾಸವಿದೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, "ಒಳ್ಳೆಯದು ಆಗಲಿ. ನಾನು ಅವರಿಗೆ ಶುಭ ಹಾರೈಸುತ್ತೇನೆ. ಶುಭವಾಗಲಿ" ಎಂದು ವರದಿಗಾರರಿಗೆ ತಿಳಿಸಿದರು.
ಮುಖ್ಯಮಂತ್ರಿಗಳ ಹೇಳಿಕೆ ಗೊಂದಲಕ್ಕೆ ಕಾರಣವಾಗಬಹುದೇ ಎಂದು ಕೇಳಿದಾಗ, ಶಿವಕುಮಾರ್, "ನೀವು (ಮಾಧ್ಯಮ) ಗೊಂದಲ ಸೃಷ್ಟಿಸುತ್ತಿದ್ದೀರಿ. ನಮಲ್ಲಿ ಯಾವುದೇ ಗೊಂದಲವಿಲ್ಲ. ನಿಮಗೆ ಗೊಂದಲವಿದೆ. ನಾನು ಅವರಿಗೆ ಶುಭ ಹಾರೈಸುತ್ತೇನೆ, ಶುಭವಾಗಲಿ" ಎಂದು ಹೇಳಿದರು.
ಕರ್ನಾಟಕದ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ದೇವರಾಜ್ ಅರಸು ಅವರ ದಾಖಲೆಯನ್ನು ಮಂಗಳವಾರ ಸರಿಗಟ್ಟಿದ ಸಿದ್ದರಾಮಯ್ಯ ಅವರನ್ನು ಶಿವಕುಮಾರ್ ಅಭಿನಂದಿಸಿದರು.
ಈ ಮೈಲಿಗಲ್ಲಿನ ಕುರಿತು, ಶಿವಕುಮಾರ್, "ಮುಖ್ಯಮಂತ್ರಿಗಳಿಗೆ ಯಶಸ್ಸಾಗಲಿ, ಒಳ್ಳೆಯದಾಗಲಿ. ಅವರಿಗೆ ಹೆಚ್ಚು ಆರೋಗ್ಯ ಸಿಗಲಿ, ಜನರ ಸೇವೆ ಮಾಡುವ ಅವಕಾಶವನ್ನು ಭಗವಂತ ಅವರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ತಿಳಿಸಿದರು.
ಕುಮಾರಸ್ವಾಮಿ ಜೇಬಲ್ಲೇ ಐಟಿ ಇಲಾಖೆ ಇದೆಯಲ್ಲಾ?
ಮೃತ ಕಾಂಗ್ರೆಸ್ ಕಾರ್ಯಕರ್ತನ ಕುಟುಂಬಕ್ಕೆ ನೀಡಿದ ಪರಿಹಾರ ಹಣ ಮೂಲ ಕಾಂಗ್ರೆಸ್ ಪಕ್ಷದ್ದೋ, ಸರ್ಕಾರದಿಂದಲೋ? ಐಟಿ ಇಲಾಖೆ ಏನು ಮಾಡುತ್ತಿದೆ ಎನ್ನುವ ಕುಮಾರಸ್ವಾಮಿ ಹಾಗೂ ಪ್ರತಿಪಕ್ಷಗಳ ಆರೋಪದ ಬಗ್ಗೆ ಕೇಳಿದಾಗ, “ಐಟಿ ಸೇರಿದಂತೆ ಇತರೇ ಎಲ್ಲಾ ಇಲಾಖೆಗಳು ವಿರೋಧ ಪಕ್ಷಗಳ ಹತ್ತಿರವೇ ಇದೆಯಲ್ಲವೇ? ಕುಮಾರಸ್ವಾಮಿ ಜೇಬಲ್ಲೇ ಇದ್ದಾವಲ್ಲ? ಪರಿಹಾರ ಹಣದ ಬಗ್ಗೆ ಜಮೀರ್ ಅವರ ಬಳಿ ಮಾತನಾಡುತ್ತೇನೆ” ಎಂದು ಉತ್ತರಿಸಿದರು.
ಬಳ್ಳಾರಿ ಭೇಟಿಯ ಬಗ್ಗೆ ಕೇಳಿದಾಗ, "ನಮಗೆ ಈ ರಾಜ್ಯದಲ್ಲಿರುವ ಹಾಗೂ ಬಳ್ಳಾರಿಯಲ್ಲಿ ಶಾಂತಿಯುತ ವಾತಾವರಣ ಉಳಿಯಬೇಕು. ಬಿಜೆಪಿಯವರು ಹತಾಶರಾಗಿ ಎಲ್ಲಾ ಕಡೆ ಇಂತಹ ಪ್ರಯತ್ನ ನಡೆಸುತ್ತಿದ್ದಾರೆ. ಅಲ್ಲಿ ಹೋಗಿ ಪರಿಸ್ಥಿತಿ ಅವಲೋಕನ ಮಾಡುತ್ತೇನೆ" ಎಂದರು.
ಅನಾರೋಗ್ಯದ ಕಾರಣಕ್ಕೆ ಸೋನಿಯಾ ಗಾಂಧಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವುದರ ಬಗ್ಗೆ ಅಧಿಕೃತ ಮಾಹಿತಿಯಿಲ್ಲ. ನನಗೂ ಇದರ ಬಗ್ಗೆ ಮಾಹಿತಿ ನೀಡಿದರು. ಅವರು ಶೀಘ್ರ ಗುಣಮುಖರಾಗಲಿ ಎಂದು ನಾವೆಲ್ಲರೂ ಪ್ರಾರ್ಥನೆ ಮಾಡುತ್ತೇವೆ. ದೀರ್ಘಕಾಲ ಆರೋಗ್ಯಯುತವಾಗಿರಲಿ. ಅವರ ಅಮೂಲ್ಯ ಸಲಹೆಗಳು ಈ ದೇಶ ಹಾಗೂ ಪಕ್ಷಕ್ಕೆ ಬೇಕಾಗಿದೆ. ಪಕ್ಷದ ಸಂಕಷ್ಟದ ಹೊತ್ತಿನಲ್ಲಿ ಅತ್ಯಮೂಲ್ಯ ಸಲಹೆ ನೀಡಿದವರು ಅವರು ಎಂದರು.
Advertisement