

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್ ಅವರ ಕಾರು ಚಾಲಕನಿಗೆ ದುಷ್ಕರ್ಮಿಗಳು ಚಾಕು ಇರಿದು ಪರಾರಿಯಾಗಿರುವ ಘಟನೆ ಮಂಗಳವಾರ ನಗರದ ಕ್ಲಬ್ ರಸ್ತೆಯಲ್ಲಿ ನಡೆದಿದೆ.
ಇಂದು ಮಧ್ಯಾಹ್ನ ಮೃಣಾಲ್ ಅವರ ಕಾರು ಚಾಲಕ, ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ನಿವಾಸಿ ಬಸವಂತ ಕಡೋಲ್ಕರ್(32) ಅವರಿಗೆ ಬೈಕ್ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಎದೆ, ಭುಜ, ತೊಡೆ ಸೇರಿ 4 ಕಡೆ ಚಾಕುವಿನಿಂದ ಇರಿದು ಪರಾರಿ ಆಗಿದ್ದಾರೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಬಸವಂತ ಅವರನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಾಹಿತಿ ತಿಳಿಯುತ್ತಿದ್ದಂತೆಯೇ ಮೃಣಾಲ್ ಅವರು ಆಸ್ಪತ್ರೆಗೆ ಭೇಟಿ, ಬಸವಂತ ಅವರ ಆರೋಗ್ಯ ವಿಚಾರಿಸಿದ್ದಾರೆ.
ಇನ್ನು, ಹಲ್ಲೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲಿಸಿ, ಚಾಕು ಇರಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.
ಹಲ್ಲೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಆದರೆ ಮೈನಿಂಗ್ ವಿಚಾರಕ್ಕೆ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಜೀವ ಉಳಿಸಿದ IPS ಅಧಿಕಾರಿ
ಐಪಿಎಸ್ ಅಧಿಕಾರಿ ರವೀಂದ್ರ ಗಡಾದಿ ಅವರು ಬಸವಂತ ಕಡೋಲ್ಕರ್ ಜೀವ ಉಳಿಸಿದ್ದಾರೆ. ಘಟನೆ ವೇಳೆ ರವೀಂದ್ರ ಗಡಾದಿ ಅವರು ಮನೆಗೆ ಊಟಕ್ಕೆ ಹೋಗುತ್ತಿದ್ದರು. ಗಲಾಟೆ ನೋಡುತ್ತಿದ್ದಂತೆ ಸ್ಥಳಕ್ಕೆ ಹೋಗಿ ದುಷ್ಕರ್ಮಿಗಳಿಂದ ಬಸವಂತ ಅವರ ಜೀವ ಉಳಿಸಿದ್ದಾರೆ.
Advertisement