ನವವೃಂದಾವನ ವಿವಾದ: ದಶಕಗಳ ಸಮಸ್ಯೆ ಸೌಹಾರ್ದಯುತವಾಗಿ ಅಂತ್ಯ!
ಕಲಬುರಗಿ: ಕೊಪ್ಪಳ ಜಿಲ್ಲೆ ಆನೆಗೊಂದಿಯಲ್ಲಿರುವ ನವವೃಂದಾವನದ ಮೂವರು ಯತಿಗಳ ಪೂಜಾ ಹಕ್ಕು ಹಾಗೂ ಆರಾಧನೆ ವಿಚಾರಕ್ಕೆ ಸಂಬಂಧಿಸಿ ಏಳು ದಶಕದಿಂದ ರಾಜ್ಯದ ಎರಡು ಪ್ರಮುಖ ಮಾಧ್ವ ಮಠಗಳ ನಡುವೆ ಏರ್ಪಟ್ಟಿದ್ದ ವಿವಾದ ಬಗೆಹರಿದಿದ್ದು ಭಕ್ತರು ನಿರಾಳರಾಗಿದ್ದಾರೆ.
ಮಂತ್ರಾಲಯದ ರಾಘವೇಂದ್ರಸ್ವಾಮಿಗಳ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹಾಗೂ ಉತ್ತರಾದಿ ಮಠದ ಪೀಠಾಧಿಪತಿ ಸತ್ಯಾತ್ಮತೀರ್ಥ ಸ್ವಾಮೀಜಿ ಬೆಂಗಳೂರಿನಲ್ಲಿ ಶನಿವಾರ ನಡೆಸಿದ ಸೌಹಾರ್ದ ಸಮಾಗಮ ಕಾರ್ಯಕ್ರಮದಲ್ಲಿ ಒಪ್ಪಂದಕ್ಕೆ ಬಂದರು.
ಕರ್ನಾಟಕ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್, ಗುವಾಹಟಿ ಹೈಕೋರ್ಟ್‌ನ ಮಾಜಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ಕೆ. ಶ್ರೀಧರ್ ರಾವ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಮಠಗಳ ಹಲವಾರು ಅನುಯಾಯಿಗಳು ಸೇರಿದಂತೆ ವೈಷ್ಣವ ಸಂಪ್ರದಾಯ (ಸಂಪ್ರದಾಯ)ದ ಎರಡು ಮಠಗಳಿಗೆ ಸೇರಿದ ಅನೇಕ ವಿದ್ವಾಂಸರು, ನಿವೃತ್ತ ಹೈಕೋರ್ಟ್ ನ್ಯಾಯಾಧೀಶರು ಮತ್ತು ಹಿರಿಯ ರಾಜಕಾರಣಿಗಳು ಆನೆಗುಂಡಿ ಬಳಿಯ ನವ ಬೃಂದಾವನಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ವರ್ಷಗಳಿಂದ ಶ್ರಮಿಸುತ್ತಿದ್ದರು.
ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ (ನಿವೃತ್ತ) ಸಂಜಯ್ ಕಿಶನ್ ಕೌಲ್ ಅವರನ್ನು ಕಳೆದ ವರ್ಷ ಎರಡೂ ಪಕ್ಷಗಳ ನಡುವೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುವಂತೆ ಕೇಳಿಕೊಂಡಿತು. ಅವರ ಪ್ರಯತ್ನದ ಫಲವಾಗಿ ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಸ್ವಾಮಿ ಮತ್ತು ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮಿಗಳು ಒಮ್ಮತದ ಸಹಿ ಹಾಕಲು ಕಾರಣವಾಯಿತು. ಶನಿವಾರ ಜಯನಗರದ ರಾಘವೇಂದ್ರ ಸ್ವಾಮಿ ಮಠ ಮತ್ತು ಉತ್ತರಾದಿ ಸ್ವಾಮಿ ಮಠಗಳಲ್ಲಿ ಸಭೆಗಳು ನಡೆದವು.
ಉಭಯ ಮಠಗಳ ನಡುವೆ ಹಲವಾರು ವರ್ಷಗಳಿಂದ ವಿವಾದ ಇತ್ತು. ಈಗ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಅಂತಿಮ ನಿರ್ಧಾರಕ್ಕೆ ಬರಲಾಗಿದೆ. ಸದ್ಯವೇ ಸುಪ್ರೀಂಕೋರ್ಟ್‌ಗೆ ಒಪ್ಪಂದದ ಕರಡನ್ನು ಸಲ್ಲಿಸಲಾಗುತ್ತದೆ. ಅಲ್ಲಿಂದ ಬರುವ ನಿರ್ದೇಶನ ಪಾಲಿಸಿ ಕಾನೂನು ಹೋರಾಟದಿಂದ ಹಿಂದೆ ಸರಿದು ಭಕ್ತರ ಆಶಯಗಳಿಗೆ ಅನುಗುಣವಾಗಿ ಉಭಯ ಮಠಗಳು ಮುಂದುವರಿಯಲಿವೆ. ಇನ್ನುಳಿದ ವಿವಾದಗಳನ್ನು ಹಂತ– ಹಂತವಾಗಿ ಬಗೆಹರಿಸಿಕೊಳ್ಳಲಾಗುವುದು ಎಂದು ಪ್ರಮುಖರೊಬ್ಬರು ತಿಳಿಸಿದರು.
ಇನ್ನು ಮುಂದೆ ನವವೃಂದಾವನ ಗಡ್ಡೆಯಲ್ಲಿರುವ ಶ್ರೀ ಪದ್ಮನಾಭತೀರ್ಥರ ಆರಾಧನೆಯನ್ನು ಉಭಯ ಮಠದವರು ಸರದಿಯ ಮೇಲೆ ನಡೆಸಲಿದ್ದಾರೆ. ಇದರಿಂದಾಗಿ ಕಾನೂನು ಸಮರಕ್ಕೆ ಶಾಶ್ವತವಾದ 'ಇತಿಶ್ರೀ' ಹಾಡಲಾಗಿದೆ. ಬಾಕಿ ಉಳಿದಿರುವ ಇತರ ವ್ಯಾಜ್ಯ-ವಿವಾದಗಳನ್ನು ಕೂಡ ನ್ಯಾಯಾಲಯದ ಹೊರಗಡೆ ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳಲು ನಿರ್ಧಾರ ಕೈಗೊಳ್ಳಲಾಗಿದೆ.
ನವವೃಂದಾವನದಲ್ಲಿರುವ ಮೂವರು ಯತಿಗಳ ವೃಂದಾವನದಲ್ಲಿ ಪದ್ಮನಾಭ ತೀರ್ಥರ ಆರಾಧನೆ ನವೆಂಬರ್‌ನಲ್ಲಿ, ಕವೀಂದ್ರ ತೀರ್ಥರು ಹಾಗೂ ವಾಗೀಶ ತೀರ್ಥರ ಆರಾಧನೆ ಏಪ್ರಿಲ್‌ನಲ್ಲಿ ಬರಲಿದೆ. ಪದ್ಮನಾಭ ತೀರ್ಥರ ಆರಾಧನೆಯನ್ನು ಸರದಿ ಆಧಾರದಲ್ಲಿ ಒಂದೊಂದು ವರ್ಷ ಉಭಯ ಮಠಗಳು ನಡೆಸಲಿವೆ. ಇನ್ನಿಬ್ಬರ ಆರಾಧನೆಯನ್ನು ಒಂದೊಂದು ಮಠದಿಂದ ಒಂದು ವರ್ಷ ನಡೆಸಲಾಗುತ್ತದೆ. ಉಭಯ ಮಠಗಳ ಭಕ್ತರು ಪ್ರಮುಖರು ಆಯಾ ಆರಾಧನೆ ಆಚರಣೆ ವೇಳೆ ಮಠಕ್ಕೆ ಆಗಮಿಸಲಿದ್ದಾರೆ.

